ದೀಪಿಕಾಗೆ ಕೇಸರಿ ಬಣ್ಣದ ಬಿಕಿನಿ ಆರಿಸಿದ್ದು ಏಕೆ? ನಿರ್ದೇಶಕ ಸಿದ್ದಾರ್ಥ್ ಆನಂದ್ ಹೇಳಿದ್ದಿಷ್ಟು
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯ 'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಜನವರಿ 25ಕ್ಕೆ ತೆರೆಗಪ್ಪಳಿಸಿತ್ತು. ಚಿತ್ರದ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದು ಭಾರೀ ವಿವಾದ ಹುಟ್ಟುಹಾಕಿತ್ತು. ಅದೆಲ್ಲವನ್ನು ಮೀರಿ ದೇಶಭಕ್ತಿ ಕಥಾಹಂದರದ ಸಿನಿಮಾ ಗೆದ್ದಿದೆ.
ಚಿತ್ರದ 'ಬೇಷರಂ ರಂಗ್' ಹಾಡು ಭಾರೀ ಚರ್ಚೆ ಹುಟ್ಟುಹಾಕಿದ್ದು ಗೊತ್ತೇಯಿದೆ. ಇದೇ ಕಾರಣಕ್ಕೆ ಚಿತ್ರವನ್ನು ಬಾಯ್ಕಾಟ್ ಮಾಡುವುದಾಗಿಯೂ ಕೆಲವರು ಹೇಳಿದ್ದರು. ಸಿನಿಮಾ ರಿಲೀಸ್ ತಡೆಯಲು ಕೆಲವರು ಪ್ರಯತ್ನಿಸಿದ್ದರು. ದೀಪಿಕಾ ಚಿತ್ರದಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಷೆ ತಂದಿದೆ. ಹಾಡಿನ ವೇಷಭೂಷಣಗಳಲ್ಲಿ ಕೇಸರಿ ಹಾಗೂ ಹಸಿರು ಬಣ್ಣ ಬಳಸಿದ್ದು ಆಕ್ಷೇಪಾರ್ಹವಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೇ ಮೊದಲ ಬಾರಿಗೆ ಚಿತ್ರದ ನಿರ್ದೇಶನ ಸಿದ್ಧಾರ್ಥ್ ಆನಂದ್ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ಕೇಸರಿ ಬಣ್ಣದ ಬಿಕಿನಿಯಲ್ಲೇ ಆರಿಸಿಕೊಂಡಿದ್ದು ಏಕೆ ಎಂದು ವಿವರಿಸಿದ್ದಾರೆ. ಇತ್ತೀಚೆಗೆ ನಡೆದ ನ್ಯೂಸ್ 18 ರೇಸಿಂಗ್ ಇಂಡಿಯಾ ಸಮಿಟ್ 2023ನಲ್ಲಿ ಬಾಲಿವುಡ್ ನಿರ್ದೇಶಕ ಮಾತನಾಡಿದ್ದರು. ಬಿಕಿನಿ ವಿವಾದದ ಕುರಿತಾದ ಪ್ರಶ್ನೆಗೆ "ನಮಗೆ ಭಯ ಇರಲಿಲ್ಲ. ಯಾಕಂದರೆ ಚಿತ್ರದಲ್ಲಿ ಆಕ್ಷೇಪಾರ್ಹ ವಿಚಾರಗಳು ಯಾವುದು ಇಲ್ಲ ಎನ್ನುವುದು ನಮಗೆ ಗೊತ್ತಿತ್ತು" ಎಂದಿದ್ದಾರೆ.
"ನಾವು ಸ್ಪೇನ್‌ನಲ್ಲಿದ್ದಾಗ, ನಾನು ಸುಮ್ನೆ ಹಾಗೆ ಆ ಬಣ್ಣದ ಕಾಸ್ಟ್ಯೂಮ್ ಆರಿಸಿದೆ. ನಾವು ಅದರ ಬಗ್ಗೆ ಎಂದು ಹೆಚ್ಚು ಯೋಚಿಸಲಿಲ್ಲ. ಬಣ್ಣ ಚೆನ್ನಾಗಿ ಕಾಣುತ್ತಿತ್ತು. ಬಿಸಿಲಿತ್ತು, ಹುಲ್ಲು ಹಸಿರಾಗಿತ್ತು ಮತ್ತು ನೀರು ನೀಲಿಯಾಗಿ ಕಾಣುತ್ತಿತ್ತು. ಹಾಗಾಗಿ ಕೇಸರಿ ಬಣ್ಣದ ಚೆನ್ನಾಗಿ ಕಾಣುತ್ತದೆ ಎಂದುಕೊಂಡಿದ್ದೆವು. ಪ್ರೇಕ್ಷಕರು ಸಿನಿಮಾ ನೋಡುವಾಗ ನಮ್ಮ ಉದ್ದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ಗೊತ್ತಾಗುತ್ತೆ ಎಂದು ಅನ್ನಿಸಿತ್ತು"

"ಅಲ್ಲಿಯವರೆಗೆ ಪ್ರೇಕ್ಷಕರು ಸಿನಿಮಾ ನೋಡಿರಲಿಲ್ಲ ಎನ್ನುವ ಕಾರಣಕ್ಕೆ ನಾನು ಅವರನ್ನು ದೂಷಿಸುವುದಿಲ್ಲ. ಅವರು ಇದು ಮಾಡಿದರು, ಅದು ಮಾಡಿದರು ಎಂದರು. ಆದರೆ ಸಿನಿಮಾ ರಿಲೀಸ್ ಆದಾಗ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದು ಶ್ಲಾಘನೀಯ. ಇಡೀ ಬಾಯ್ಕಾಟ್ ಅಭಿಯಾನ ತಪ್ಪು ಎಂದು ಸಾಬೀತು ಪಡಿಸಿದರು. ಒಬ್ಬ ಸ್ಟಾರ್ ನಟನನ್ನೋ ಅಥವಾ ಒಂದು ಸಿನಿಮಾವನ್ನೋ ಬಾಯ್ಕಾಟ್ ಮಾಡುವಾಗ ಅದರಿಂದ ಆ ಸಿನಿಮಾವನನ್ನು ನಂಬಿಕೊಂಡು ಬದುವವರಿಗೆ ಎಷ್ಟು ಸಮಸ್ಯೆ ಆಗುತ್ತದೆ ಎನ್ನುವುದನ್ನು ಯೋಚಿಸಬೇಕು"
"ಪ್ರತಿದಿನ 300ಕ್ಕೂ ಹೆಚ್ಚು ಜನ ಒಂದು ಸಿನಿಮಾಗಾಗಿ ಕೆಲಸ ಮಾಡುತ್ತಾರೆ. ಶೂಟಿಂಗ್ ನಂತರ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಒಂದಷ್ಟು ಜನ ಕೆಲಸ ಮಾಡುತ್ತಾರೆ. ಯಾವುದೇ ಕಾರಣ ಇಲ್ಲದೇ ಸಿನಿಮಾವನ್ನು ಬಾಯ್ಕಾಟ್ ಮಾಡುವುದು ಬಹಳ ಸುಲಭ, ಆದರೆ ಇದನ್ನೆಲ್ಲಾ ಯೋಚಿಸಬೇಕು" ಎಂದು ನಿರ್ದೇಶಕ ಸಿದ್ದಾರ್ಥ್ ಆನಂದ್ ಹೇಳಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಪಠಾಣ್' ಚಿತ್ರವನ್ನು ಯಶ್ ರಾಜ್ ಸಂಸ್ಥೆ ನಿರ್ಮಾಣ ಮಾಡಿತ್ತು. 'ಜೀರೋ' ಸಿನಿಮಾ ಸೋಲಿನ ನಂತರ 4 ವರ್ಷ ಸೈಲೆಂಟ್ ಆಗಿದ್ದ ಶಾರುಖ್ ಖಾನ್ 'ಪಠಾಣ್' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ಜಾನ್ ಅಬ್ರಹಾಂ ವಿನಲ್ ಆಗಿ ಆರ್ಭಟಿಸಿದ್ದಾರೆ. ಭಯೋತ್ಪಾದಕರ ವಿಧ್ವಂಸ ಕೃತ್ಯಗಳನ್ನು ತಡೆಯುವ ಸೈನಿಕನಾಗಿ ಚಿತ್ರದಲ್ಲಿ ಶಾರುಕ್ ಮಿಂಚಿದ್ದಾರೆ. ಇತ್ತೀಚೆಗೆ ಓಟಿಟಿಗೂ ಬಂದು ಸಿನಿಮಾ ಸಖರ್ ಸದ್ದು ಮಾಡ್ತಿದೆ.


Click it and Unblock the Notifications











