ಮನೀಶ್ ಮಲ್ಹೋತ್ರಾ ವಿನ್ಯಾಸದ ವಸ್ತ್ರದಲ್ಲಿ ಮಿಂಚಲಿದ್ದಾರೆ ಸಿದ್ಧಾರ್ಥ್, ಕಿಯಾರಾ
ಬಾಲಿವುಡ್ ಜೋಡಿ ಹಕ್ಕಿಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7ರಂದು ಸಪ್ತಪದಿ ತುಳಿಯಲಿದ್ದಾರೆ. ರಾಜಸ್ತಾನದ ಸೂರ್ಯಗಢ ಅರಮನೆಯಲ್ಲಿ ಇವರಿಬ್ಬರ ವಿವಾಹ ಸಮಾರಂಭ ಜರುಗಲಿದ್ದು, ಈಗಾಗಲೇ ಮದುವೆ ಸಿದ್ಧತೆಗಳು ಜರುಗುತ್ತಿವೆ.
ಸಾಮಾನ್ಯವಾಗಿ ಸೆಲೆಬ್ರಿಟಿ ತಮ್ಮ ಮದುವೆಯಲ್ಲಿ ಧರಿಸುವ ವಸ್ತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಇದೀಗ ಬಾಲಿವುಡ್ ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವೆಡ್ಡಿಂಗ್ ಡ್ರೆಸ್ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿದೆ. ಈ ಜೋಡಿಯ ವೆಡ್ಡಿಂಗ್ ಔಟ್ ಫಿಟ್ ಅನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರ ವಿನ್ಯಾಸಗೊಳಿಸಿದ್ದಾರೆ. ಕಾಜೋಲ್, ಕರೀನಾ ಕಪೂರ್, ಆಲಿಯಾ ಭಟ್, ಸನ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಅನೇಕ ನಟ-ನಟಿಯರಿಗೆ ವಸ್ತ್ರ ವಿನ್ಯಾಸ ಮಾಡಿರುವ ಮನೀಶ್ ಮಲ್ಹೋತ್ರಾ, ಬಿಟೌನ್ ತಾರೆಗಳ ನೆಚ್ಚಿನ ಡಿಸೈನರ್ ಅಂದರೆ ತಪ್ಪೇನಿಲ್ಲ.


ಹೇಗಿರಲಿದೆ ಸಿದ್ಧಾರ್ಥ್-ಕಿಯಾರಾ ವೆಡ್ಡಿಂಗ್ ಡ್ರೆಸ್?
ವಿವಾಹ ಸಮಾರಂಭದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಬಿಳಿಬಣ್ಣದ ಆಫ್ ಶೇರ್ವಾನಿ ಹಾಗೂ ಕಿಯಾರಾ ಅಡ್ವಾಣಿ ಕೆಂಪು ಬಣ್ಣದ ಲೆಹಂಗಾವನ್ನು ಧರಿಸಲಿದ್ದಾರೆ. ಮನೀಶ್ ಮಲ್ಹೋತ್ರ ವಧು, ವರ ಹಾಗೂ ಅವರ ಕುಟುಂಬದವರಿಗಾಗಿ 150 ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ. ಮನೀಶ್ ಮಲ್ಹೋತ್ರಾ ತಂಡವು ಮೆಹಂದಿ, ಹಳದಿ ಶಾಸ್ತ್ರದ ಸೇರಿದಂತೆ ವಿವಾಹಪೂರ್ವ ಕಾರ್ಯಕ್ರಮಗಳ ವಸ್ತ್ರಗಳನ್ನು ಸಹ ಸಿದ್ಧಗೊಳಿಸಿದೆ. ಎರಡೂ ಕುಟುಂಬದವರ ವಸ್ತ್ರಗಳನ್ನು ಇವರೇ ವಿನ್ಯಾಸ ಮಾಡಿದ್ದಾರೆ.ಮೂಲಗಳ ಪ್ರಕಾರ, ಮದುವೆ ದಿನದಂದು ಕಿಯಾರಾ ಅವರನ್ನು ಬಾಲಿವುಡ್ ಖ್ಯಾತ ಸ್ಟೈಲಿಸ್ಟ್ ಲಕ್ಷ್ಮಿ ಲೆಹರ್ ರೆಡಿ ಮಾಡಲಿದ್ದಾರೆ. ಮದುವೆ ಬಳಿಕವಷ್ಟೇ ಇವರಿಬ್ಬರ ಫೈನಲ್ ಔಟ್ ಫಿಟ್ ಬಹಿರಂಗವಾಗಲಿದೆ.

ಪ್ಯಾಲೇಸ್‌ನಲ್ಲಿ ಮೊಬೈಲ್ ಬಳಕೆ ನಿಷೇಧ
65 ಎಕರೆ ವಿಸ್ತೀರ್ಣದ ಪ್ಯಾಲೇಸ್‌ನಲ್ಲಿ ಬಹಳ ಆಡಂಬರದಿಂದ ಸಿದ್ಧಾರ್ಥ್-ಕಿಯಾರಾ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಬಹಳ ಅದ್ಧೂರಿಯಾಗಿ ಈ ಜೋಡಿ ಡೆಸ್ಟಿನೇಷನ್ ಮ್ಯಾರೇಜ್ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಸಿದ್ಧಾರ್ಥ್ ಹಾಗೂ ಕೈರಾ ಕುಟುಂಬ ಸಮೇತರಾಗಿ ಮದುವೆ ನಡೆಯುವ ಪ್ಯಾಲೇಸ್ ತಲುಪಿದ್ದಾರೆ. ಪ್ಯಾಲೇಸ್‌ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮದುವೆಯ ಫೋಟೊಗಳು, ವಿಡಿಯೋಗಳು ಲೀಕ್ ಆಗುವ ಕಾರಣಕ್ಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.

ಆತ್ಮೀಯರಿಗೆ ಮಾತ್ರ ಆಹ್ವಾನ
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆಗೆ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಜೋಡಿಯ ಸ್ನೇಹಿತರಾದ ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ, ಇಶಾ ಅಂಬಾನಿ ಮತ್ತು ವರುಣ್ ಧವನ್ ಈಗಾಗಲೇ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಇನ್ನು, ಅತಿಥಿಗಳಿಗಾಗಿ 80 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ಮರ್ಸಿಡಿನ್ ಬೆಂಜ್, ಜಾಗ್ವಾರ್ ಮತ್ತು ಬಿಎಂಡಬ್ಲ್ಯೂ ಸೇರಿದಂತೆ 70 ಕಾರುಗಳನ್ನು ವಿಮಾನ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅರಮನೆಯ ಸುತ್ತಮುತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಫೆಬ್ರವರಿ 12ರಂದು ಆರತಕ್ಷತೆ
ರಾಜಸ್ತಾನದ ಸೂರ್ಯಗಢ ಅರಮನೆಯಲ್ಲಿ ಅದ್ಧೂರಿ ವಿವಾಹ ಮಾಡಿಕೊಳ್ಳಲಿರುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 12ರಂದು ಆರತಕ್ಷತೆ ಮಾಡಿಕೊಳ್ಳಲಿದ್ದಾರೆ. ಮುಂಬೈನಲ್ಲಿ ಇಬರಿಬ್ಬರ ರಿಸೆಪ್ಶನ್ ನಡೆಯಲಿದೆ ಎನ್ನಲಾಗಿದೆ.


Click it and Unblock the Notifications











