ದಕ್ಷಿಣದ ಕಲಾವಿದರಿಗೆ ಬಾಲಿವುಡ್ ಮಂದಿ ಗೌರವ ಕೊಡಲ್ಲ; ನಟಿ ಸಿಮ್ರನ್ ಬೇಸರ
ದಕ್ಷಿಣದ ಚಿತ್ರರಂಗ ಹಾಗೂ ಬಾಲಿವುಡ್ ನಡುವೆ ಹೋಲಿಕೆ ಇಂದು ನಿನ್ನೆಯದ್ದಲ್ಲ. ಒಂದ್ಕಾಲದಲ್ಲಿ ಭಾರತೀಯ ಚಿತ್ರರಂಗ ಅಂದ್ರೆ ಬಾಲಿವುಡ್ ಎನ್ನುವಂತಹ ವಾತಾವರಣ ಇತ್ತು. ಆದರೆ ಈಗ ಕಾಲ ಬದಲಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳು ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿವೆ. ದಕ್ಷಿಣದ ಸಿನಿಮಾಗಳನ್ನು ನೋಡಿ ಬಾಲಿವುಡ್ ಮಂದಿ ಕೂಡ ಶಾಕ್ ಆಗುತ್ತಿದ್ದಾರೆ.
ಮೊದಲಿನಿಂದಲೂ ದಕ್ಷಿಣದ ಕಲಾವಿದರು, ತಂತ್ರಜ್ಞರನ್ನು ಬಾಲಿವುಡ್ ಮಂದಿ ವಾರೆಗಣ್ಣಿನಲ್ಲೇ ನೋಡುತ್ತಿದ್ದರು. ಇವತ್ತಿಗೂ ಅದು ಬದಲಾಗಿಲ್ಲ. ದಕ್ಷಿಣದ ಕಲಾವಿದರಿಗೆ ಬಾಲಿವುಡ್ ಮಂದಿ ಗೌರವ ಕೊಡಲ್ಲ ಎಂದು ತಮಿಳು ನಟಿ ಸಿಮ್ರನ್ ಹೇಳಿರುವುದು ವೈರಲ್ ಆಗ್ತಿದೆ. ಫಿಲ್ಮ್‌ಫೇರ್ ಮ್ಯಾಗಜೀನ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಮುಂಬೈನಲ್ಲೇ ಹುಟ್ಟಿ ಬೆಳೆದ ಚೆಲುವೆ ದಕ್ಷಿಣದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಕನ್ನಡದ 'ಸಿಂಹದ ಮರಿ' ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ ಸಿಮ್ರನ್ ನಟಿಸಿದ್ದರು. ಕಳೆದ 3 ದಶಕಗಳಲ್ಲಿ ತಮಿಳಿನ ಸ್ಟಾರ್ ನಟರ ಜೊತೆಗೆಲ್ಲಾ ತೆರೆಹಂಚಿಕೊಂಡು ಸಕ್ಸಸ್ ಕಂಡಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಸಿಮ್ರನ್ ನಟಿಸುತ್ತಿದ್ದಾರೆ. 'ಟೂರಿಸ್ಟ್ ಫ್ಯಾಮಿಲಿ' ಚಿತ್ರದಲ್ಲಿ ಆಕೆಯ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹಿಂದಿ ಸಿನಿಮಾ ಮೂಲಕ ಸಿಮ್ರನ್ ಬಣ್ಣದಲೋಕಕ್ಕೆ ಕಾಲಿಟ್ಟಿದ್ದರು. ಆದರೆ ಬಳಿಕ ಅಷ್ಟೇನು ಹಿಂದಿ ಸಿನಿಮಾಗಳಲ್ಲಿ ನಟಿಸಲಿಲ್ಲ.
ಹಿಂದಿ ಸಿನಿಮಾಗಳಲ್ಲಿ ಯಾಕೆ ಹೆಚ್ಚು ನಟಿಸಲಿಲ್ಲ ಎನ್ನುವ ಪ್ರಶ್ನೆಗೆ ಸಿಮ್ರನ್ ಪ್ರತಿಕ್ರಿಯಿಸಿದ್ದಾರೆ. "ಸಾಕಷ್ಟು ಬಾರಿ ನಾನು ಹಿಂದಿ ಸಿನಿಮಾ ಅವಕಾಶ ರಿಜೆಕ್ಟ್ ಮಾಡಿದ್ದೀನಿ. ಅಲ್ಲಿನ ಜನರ ಜೊತೆಗೆ ಯಾಕೋ ಕನೆಕ್ಟ್ ಆಗಲಿಲ್ಲ. ನಾವು ಬಾಲಿವುಡ್‌ಗೆ ಹೋಗುವ ಮುನ್ನ ದಕ್ಷಿಣದ ಸಿನಿಮಾಗಳಲ್ಲಿ ಸಾಧಿಸಿರುವುದನ್ನು ನೋಡಲ್ಲ. ಅದು ನನಗೆ ಬೇಸರ ಅನಿಸುತ್ತದೆ. ನಾನು ನನ್ನ ಅರ್ಧ ಜೀವನ ಚಿತ್ರರಂಗದಲ್ಲೇ ಕಳೆದಿದ್ದೇನೆ. ಹಾಗಿರುವಾಗ ಗೌರವ ಸಿಗದಿದ್ದರೆ ಹೇಗೆ?" ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್‌ನಲ್ಲಿ ದಕ್ಷಿಣದವರಿಗೆ ಸರಿಯಾದ ಸೌಲಭ್ಯಗಳು ಸಿಗಲ್ಲ. ಎಲ್ಲದರಲ್ಲೂ ಚೌಕಾಶಿ ಮಾಡುತ್ತಾರೆ. ನನ್ನ ಜೊತೆ ಹೆಚ್ಚು ಸಿಬ್ಬಂದಿ ಕರೆದುಕೊಂಡು ಬರುವಂತಿಲ್ಲ ಎನ್ನುತ್ತಾರೆ. ಹೋಟೆಲ್, ಟಿಕೆಟ್ ಹೀಗೆ ಎಲ್ಲದರಲ್ಲೂ ಲೆಕ್ಕಾಚಾರ, ಚೌಕಾಶಿ.. ಇದೆಲ್ಲ ಬಹಳ ಕಾಡುತ್ತದೆ. ಆದರೆ ಯಾರೂ ಈ ಬಗ್ಗೆ ಬಾಯಿ ಬಿಡಲ್ಲ. ಆದರೂ ಕೆಲ ಚಿತ್ರ ನಿರ್ಮಾಣ ಸಂಸ್ಥೆಗಳು ಉತ್ತಮವಾಗಿ ಎಂದು ಸಿಮ್ರನ್ ಹೇಳಿದ್ದಾರೆ.
ಸನ್ನಿ ಡಿಯೋಲ್ ನಟನೆಯ 'ಗಬ್ರು' ಚಿತ್ರದ ಬಗ್ಗೆ ಸಿಮ್ರನ್ ಮಾತನಾಡಿದ್ದಾರೆ. ಓಂ ಚಂಗಾನಿ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ. 'ಗುಲ್‌ಮೋಹರ್' ಚಿತ್ರತಂಡವನ್ನು ಕೊಂಡಾಡಿದ್ದಾರೆ. ಅಂದಹಾಗೆ ಬಾಲಿವುಡ್ ಮಂದಿ ಬಗ್ಗೆ ದಕ್ಷಿಣದ ಕಲಾವಿದರು ಬೇಸರ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೆಲ ನಟ, ನಟಿಯರು ಹಿಂದಿ ಸಿನಿಮಾಗಳಲ್ಲಿ ನಟಿಸುವಾಗ ಎದುರಾಗಿದ್ದ ಕಹಿ ಅನುಭವದ ಬಗ್ಗೆ ಮಾತನಾಡಿದ್ದರು.
1995ರಲ್ಲಿ 'ಸನಮ್ ಹರ್ಜೈ' ಸಿನಿಮಾ ಮೂಲಕ ಸಿಮ್ರನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮರುವರ್ಷ 'ಇಂದ್ರಪ್ರಸ್ಥಂ' ಎಂಬ ಮಲಯಾಳಂ ಸಿನಿಮಾ ಮೂಲಕ ದಕ್ಷಿಣಕ್ಕೆ ಬಂದರು. ವಿಜಯ್ ನಟನೆಯ 'ಒನ್ಸ್ ಮೋರ್' ತಮಿಳಿನಲ್ಲಿ ಆಕೆಯ ಮೊದಲ ಸಿನಿಮಾ. ಅಜಿತ್ ಜೊತೆ ನಟಿಸಿದ 'ಅವಲ್ ವರುವಾಲ' ಸಿನಿಮಾ ಒಳ್ಳೆ ಬ್ರೇಕ್ ಕೊಟ್ಟಿತ್ತು. 'ವಾಲಿ' ಸಿನಿಮಾದಲ್ಲಿ ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂದೆ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು.
'ರಮಣ', 'ಜೋಡಿ', 'ಕಲಿಸುಂದಾಂ ರಾ', 'ಪ್ರಿಯಮಾನವಳೇ', 'ಪ್ರೇಮತೋ ರಾ', 'ಅರಸು', 'ವಾರಣಂ ಆಯಿರಂ' ಸಿಮ್ರನ್ ನಟಿಸಿದ ಕೆಲ ಹಿಟ್ ಸಿನಿಮಾಗಳು.


Click it and Unblock the Notifications