ಬಾಲ್ಯದ ಗೆಳತಿಯ ಜೊತೆ ಸದ್ದಿಲ್ಲದೇ ಮದುವೆಯಾಗಿ ಅಚ್ಚರಿಗೆ ದೂಡಿದ ಖ್ಯಾತ ಗಾಯಕ ; ಹುಡುಗಿ ಯಾರೆನ್ನುವುದೇ ಪ್ರಶ್ನೆ
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ.
ಇವರ ಈ ಟಾರ್ಚರ್ ತಡೆಯಲು ಆಗಲಾರದೇ ಮದುವೆಯಾಗುವ ಯೋಚನೆಯನ್ನು ಕೂಡ ಮಾಡದ ಕೆಲವರು ಏಕಾಏಕಿ ಮದುವೆಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಸಂಗಾತಿಯನ್ನು ಒಮ್ಮಿಂದೊಮ್ಮೆಲೆ ಪರಿಚಯಿಸುತ್ತಾರೆ. ಇನ್ನೂ ಕೆಲವರು ಸದ್ದಿಲ್ಲದೇ ಮದುವೆಯಾಗುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡುತ್ತಾರೆ. ಉದಾಹರಣೆಗೆ ಜುಬಿನ್ ನೌಟಿಯಾಲ್.

ಹೌದು, ಜುಬಿನ್ ನೌಟಿಯಾಲ್.. ಖ್ಯಾತ ಹಿನ್ನೆಲೆ ಗಾಯಕ. ''ಲುಟ್ ಗಯೆ''.. ''ರಾತಾನ್ ಲಂಬಿಯಾನ್''.. ''ತುಮ್ ಹಿ ಆನಾ''.. ''ಹಮ್ನವ ಮೇರೆ''.. ''ದಿಲ್ ಗಲ್ತಿ ಕರ್ ಬೈಟಾ ಹೈ''.. ಇವರ ಕೆಲ ಜನಪ್ರಿಯ ಹಾಡುಗಳು.
ಬಾಕ್ಸಾಫೀಸ್‌ನಲ್ಲಿ ಸದ್ಯ ಹಣದ ಹೊಳೆ ಹರಿಸುತ್ತಿರುವ ''ಧುರಂಧರ್ 2'' ಚಿತ್ರದ ''ಆಖ್ರಿ ಇಷ್ಕ್'' ಹಾಡನ್ನು ಹಾಡಿದವರು ಕೂಡ ಇವರೇ. ಇಲ್ಲಿಯವರೆಗೆ 200ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಜುಬಿನ್, ಸದ್ಯ ಸದ್ದಿಲ್ಲದೇ ಉತ್ತರಾಖಂಡದಲ್ಲಿ ಮದುವೆಯಾಗಿದ್ದಾರೆ. ಅದು ತಮ್ಮ ಬಾಲ್ಯದ ಗೆಳತಿಯ ಜೊತೆ ಅನ್ನೋದು ವಿಶೇಷ.
ಇನ್ನೂ ಸಾಮಾನ್ಯವಾಗಿ ಎಷ್ಟೇ ಗೌಪ್ಯವಾಗಿ ಮದುವೆಯಾದರೂ ಕೂಡ, ಮದುವೆಯಾದ ನಂತರ ಹುಡುಗ ಅಥವಾ ಹುಡುಗಿಯ ಹಿನ್ನೆಲೆ ಮುನ್ನೆಲೆಗೆ ಬರುತ್ತೆ. ಹೆಸರು ಮಾತ್ರವಲ್ಲದೇ ಕುಲ-ಗೋತ್ರ-ಜನ್ಮ ಜಾತಕವನ್ನೆಲ್ಲ ಅಭಿಮಾನಿಗಳು ಹೆಕ್ಕಿ ತೆಗೆಯುತ್ತಾರೆ. ಇಲ್ಲವಾದಲ್ಲಿ ಮಾಧ್ಯಮಗಳೇ ಈ ಕೆಲಸವನ್ನು ಮಾಡುತ್ತವೆ.
ಆದರೆ, ಜುಬಿನ್ ವಿಚಾರದಲ್ಲಿ ಇದು ತದ್ವಿರುದ್ದ.ಜುಬಿನ್ ಮದುವೆಯಾಗಿದ್ದಾರೆ ಎನ್ನುವ ವಿಚಾರ ಮಾತ್ರ ಜಗಜ್ಜಾಹೀರಾಗಿದೆಯೇ ಹೊರತು, ಜುಬಿನ್ ಹೃದಯ ಗೆದ್ದ ಬಾಲ್ಯದ ಗೆಳತಿಯ ಯಾವ ವಿವರವೂ ಕೂಡ ಇನ್ನೂ ಮಾಧ್ಯಮದವರ ಕೈಗೆ ಸಿಕ್ಕಿಲ್ಲ. ಹುಡುಗಿಯ ಹೆಸರನ್ನು ಕೂಡ ಅಭಿಮಾನಿಗಳಿಂದ ಇನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಮದುವೆಯ ವಿಚಾರವನ್ನು ಜುಬಿನ್ ನೌಟಿಯಾಲ್ ಗೌಪ್ಯವಾಗಿ ಇಟ್ಟಿದ್ದಾರೆ.

ಈ ಹಿನ್ನೆಲೆ ಜುಬಿನ್ ಪತ್ನಿ ಯಾರು ಎಂಬ ಕುತೂಹಲ ಈಗ ಹಲವರನ್ನು ಕಾಡುತ್ತಿದೆ. ಲೈಮ್‌ಲೈಟ್‌ನಿಂದ ದೂರ ಉಳಿಯಲು ಬಯಸುವ ಸರಳ ವ್ಯಕ್ತಿತ್ವದವರು ಎಂಬ ಮಾತು ಕೇಳೀ ಬರುತ್ತಿದೆ. ಇನ್ನು, ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯ ಅರ್ಥ ಕೂಡ ಬದಲಾಗಿದೆ. ಇಂತಹ ಕಾಲದಲ್ಲಿ ಜುಬಿನ್ ತಮ್ಮ ಬಾಲ್ಯದ ಗೆಳತಿಯನ್ನು ಮದುವೆಯಾಗಿದ್ದಾರೆ. ಸ್ಟಾರ್ ಸಿಂಗರ್ ಆದ ಮೇಲೂ ಕೂಡ ಜುಬಿನ್ ತಮ್ಮ ಪ್ರೀತಿಯನ್ನು ಮರೆತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜುಬಿನ್ ಅವರನ್ನು ಸದ್ಯ ಹಲವರು ಈ ಕಾರಣಕ್ಕೂ ಕೂಡ ಕೊಂಡಾಡುತ್ತಿದ್ದಾರೆ.
ಅಂದ್ಹಾಗೇ ತಮ್ಮ 4ನೇ ವಯಸ್ಸಿನಲ್ಲೇ ಸಂಗೀತದ ಕಡೆಗೆ ಜುಬಿನ್ ಆಕರ್ಷಿತರಾಗಿದ್ದರು. ಶಾಲಾ ದಿನಗಳಲ್ಲಿ ಸಂಗೀತವನ್ನು ಅಭ್ಯಾಸ ಮಾಡಿದ್ದ ಜುಬಿನ್ ಆ ನಂತರ ಗಿಟಾರ್, ಪಿಯಾನೋ, ಹಾರ್ಮೋನಿಯಂ ಮತ್ತು ಡ್ರಮ್ಸ್ ನುಡಿಸುವುದನ್ನು ಕಲಿತರು. ಬಳಿಕ ವಾರಣಾಸಿಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಚೆನ್ನೈನಲ್ಲಿ ಪಾಶ್ಚಾತ್ಯ ಸಂಗೀತದ ತರಬೇತಿ ಪಡೆದರು.
2011 ರಲ್ಲಿ ''ಎಕ್ಸ್ ಫ್ಯಾಕ್ಟರ್ ಇಂಡಿಯಾ'' ರಿಯಾಲಿಟಿ ಶೋ ಮೂಲಕ ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದ ಜುಬಿನ್, 2014 ರಲ್ಲಿ ತೆರೆಗೆ ಬಂದ ''ಸೋನಾಲಿ ಕೇಬಲ್'' ಚಿತ್ರದ ಮೂಲಕ ಬಾಲಿವುಡ್‌ಗೆ ಗಾಯಕನಾಗಿ ಪಾದಾರ್ಪಣೆ ಮಾಡಿದರು. ಇಂಥಾ ಜುಬಿನ್ ಸದ್ಯ ತಮ್ಮ ಬಾಲ್ಯದ ಗೆಳತಿಯ ಜೊತೆ ಮದುವೆಯಾಗಿದ್ದು ಬಾಲಿವುಡ್‌ನ ಹಲವರು ನವ ಜೋಡಿಗೆ ಶುಭ ಕೋರುತ್ತಿದ್ಧಾರೆ. ಅಭಿಮಾನಿಗಳು ಕೂಡ ಅಭಿನಂದನೆ ಸಲ್ಲಿಸುತ್ತಿದ್ಧಾರೆ.


Click it and Unblock the Notifications