'ಒಮ್ಮೊಮ್ಮೆ ಹೀಗೂ ಆಗುವುದು' ಹಾಡಿನ ಗಾಯಕನ ಅಭಿಮಾನಿ ನದಿಗೆ ಹಾರಿ ಆತ್ಮಹತ್ಯೆ
ಖ್ಯಾತ ಗಾಯಕ ಜುಬಿನ್ ಗಾರ್ಗ್ ಅಗಲಿಕೆ ಅಭಿಮಾನಿಗಳಿಗೆ ಅಪಾರ ನೋವು ತಂದಿದೆ. ಆತನ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದು ಲಿಮ್ಕಾ ದಾಖಲೆ ಸೇರುವಂತಾಗಿದೆ. ಇದರಲ್ಲೇ ಆತನ ಮೇಲಿನ ಅಭಿಮಾನ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ. ಜುಬಿನ್ ಅಗಲಿಕೆ ನೋವಿನಲ್ಲೇ ಅಭಿಮಾನಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಜುಬಿನ್ ಗಾರ್ಗ್ ಹಾಡುಗಳನ್ನು ಹಾಡಿದ್ದಾರೆ. ತಮ್ಮ ಸುಮಧುರ ಕಂಠದಿಂದ ಅಭಿಮಾನಿಗಳ ಮನಸೂರೆಗೊಂಡಿದ್ದರು. ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಅಸ್ಸಾಮ್ ಮೂಲದ ಜುಬಿನ್ ಸಾವನ್ನಪ್ಪಿದ್ದರು. ಕಾರ್ಯಕ್ರಮವೊಂದಕ್ಕಾಗಿ ಅವರು ಅಲ್ಲಿಗೆ ತೆರಳಿಸಿದ್ದರು. ಈ ವೇಳೆ ಸ್ಕೂಬಾ ಡೈವ್ ಮಾಡಲು ಹೋಗಿ ದುರಂತ ಮರಣ ಹೊಂದಿದ್ದರು. ಸಮುದ್ರಕ್ಕೆ ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

ಬುಧವಾರ(ಸೆಪ್ಟೆಂಬರ್ 25) ಗುವಾಹಟಿಯ ಸಾರಾಯ್‌ಘಾಟ್ ಸೇತುವೆಯಲ್ಲಿ, ಜುಬಿನ್ ಗಾರ್ಗ್ ದುರಂತ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವ ಅಭಿಮಾನಿ ತನ್ನ ಬಟ್ಟೆಗಳನ್ನು ಹರಿದುಕೊಂಡು, "ಜುಬಿನ್ ದಾ ಇಲ್ಲದ ಮೇಲೆ ನಾವೇನು ಮಾಡೋಣ? ಜೈ ಜುಬಿನ್ ದಾ!" ಎಂದು ಕೂಗುತ್ತಾ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ.
ಈ ಘಟನೆಗೆ ಪ್ರತ್ಯಕ್ಷದರ್ಶಿಗಳಾಗಿದ್ದ ಜನ ಶಾಕ್ ಆಗಿದ್ದು ನದಿಯಲ್ಲಿ ಯುವಕ ಮುಳುಗಿದಾಗ ಏನು ಮಾಡಲು ಸಾಧ್ಯವಾಗದೇ ಅಸಹಾಯಕರಾಗಿದ್ದಾರೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸುವಾಲ್ಕುಚಿ ಬೆಟ್ಟಗಳವರೆಗೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಮತ್ತೊಂದು ಕಡೆ ಗಾರ್ಗ್ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸಂಗೀತಗಾರ ಶೇಖರ್ ಜ್ಯೋತಿ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿದೆ. ಘಟನೆಗೆ ಸಂಬಂಧಿಸಿದ ವಿವಾದಾತ್ಮಕ ಯಾಟ್ ಪ್ರವಾಸದಲ್ಲಿ ಗೋಸ್ವಾಮಿ ಕೂಡ ಜೊತೆಗಿದ್ದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಗೋಸ್ವಾಮಿ ವಿರುದ್ಧದ ಆರೋಪ ಏನು ಎನ್ನುವುದು ಬಹಿರಂಗಪಡಿಸಲಾಗಿಲ್ಲ. ಗಾರ್ಗ್ ಸಾವಿಗೆ ನಿಜವಾದ ಕಾರಣ ಏನು ಎಂದು ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಸ್ಸಾಂ ಸರ್ಕಾರ ಕೂಡ ಗಾಯಕ ಜುಬಿನ್ ಗಾರ್ಗ್ ಸಾವಿನ ತನಿಖೆ ಮಾಡಲು ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಿದೆ.
ಮೇಘಾಲಯದಲ್ಲಿ ಜನಿಸಿದ ಜುಬಿನ್ ಗಾರ್ಗ್ 1990 ರ ದಶಕದ ಆರಂಭದಲ್ಲಿ ಅಸ್ಸಾಂನ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದರು. 2006 ರ ಎಮ್ರಾನ್ ಹಶ್ಮಿ ನಟನೆಯ "ಗ್ಯಾಂಗ್‌ಸ್ಟರ್" ಚಿತ್ರದ "ಯಾ ಅಲಿ" ಹಾಡು ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. ಅಸ್ಸಾಮಿ, ಬಾಂಗ್ಲಾ, ನೇಪಾಳಿ ಹಾಡುಗಳನ್ನು ಹಾಡಿದ್ದರು. ಸಂಗೀತ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದರು. ಸೆಪ್ಟೆಂಬರ್ 19ರಂದು ತಮ್ಮ 52ನೇ ವಯಸ್ಸಿನಲ್ಲಿ ಗಾರ್ಗ್ ನಿಧನರಾಗಿದ್ದರು.
ಗಾರ್ಗ್ ಅಗಲಿಕೆ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಂತ ಬಿಸ್ವಾ ಶರ್ಮಾ, ಸಚಿವ ಅಶೋಕ್ ಸಿಂಘಾಲ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ನುಡಿನಮನ ಸಲ್ಲಿಸಿದ್ದರು. ಕೆಲ ಸೆಲೆಬ್ರೆಟಿಗಳು ಕೂಡ ನೋವು ತೋಡಿಕೊಂಡಿದ್ದರು.


Click it and Unblock the Notifications











