Singham Again BoxOffice Day 1 ;ಹೇಗಿದೆ ಸಿಂಗಂ ಅಗೇನ್ ಘರ್ಜನೆ,ಮೊದಲ ದಿನ ಕರ್ನಾಟಕದಲ್ಲಿ ಹೇಗಿತ್ತು ರೆಸ್ಫಾನ್ಸ್?
ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು.
2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ, ಚೇತರಿಸಿಕೊಂಡಿದ್ದು ಕಳೆದ ವರ್ಷವಷ್ಟೇ. ಜವಾನ್..ಪಠಾಣ್.. ಗದರ್ 2.. ಅನಿಮಲ್.. ಸ್ತ್ರೀ 2.. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಗೆಲುವಿನ ನಗೆ ಬೀರಿದ್ದ ಬಾಲಿವುಡ್‌ನಲ್ಲಿ ಈಗ ಸಿಂಗಂ ಘರ್ಜನೆ ಜೋರಾಗಿ ಕೇಳಿ ಬರುತ್ತಿದೆ. ಮೊದಲ ದಿನ ಹಣದ ಮಳೆ ಬಿದ್ದಿದೆ.

ಹೌದು, ಮೊದಲ ದಿನ ಭಾರತದೆಲ್ಲೆಡೆ ಹೆಚ್ಚು ಕಡಿಮೆ 14,000 ಪ್ರದರ್ಶನವನ್ನು ಕಂಡ ಸಿಂಗ ಅಗೇನ್ ಬಾಕ್ಸಾಫೀಸ್‌ನಲ್ಲಿ ₹43.50 ಕೋಟಿ ದೋಚಿದೆ. ಈ ಮೂಲಕ ಶ್ರದ್ಧಾ ಕಪೂರ್, ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2 ಚಿತ್ರದ ನಂತರ ಅತೀ ಹೆಚ್ಚು ಗಳಿಕೆಯನ್ನು ಕಂಡ ಈ ವರ್ಷದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಸಿಂಗಂ ಅಗೇನ್ ಚಿತ್ರ ಪಾತ್ರವಾಗಿದೆ.
ಇನ್ನೂ.. ಸಿಂಗಂ ಅಗೇನ್ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವು. ಇದಕ್ಕೆ ದಶಕದ ನಂತರ ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ ಸಿಂಗಂ ಚಿತ್ರದ ಮುಂದುವರೆದ ಭಾಗಕ್ಕೆ ಕೈ ಹಾಕಿರುವುದು ಒಂದು ಕಾರಣವಾದರೆ, ಚಿತ್ರದ ಬಹುದೊಡ್ಡ ತಾರಾಬಳಗ ಮತ್ತೊಂದು ಕಾರಣವಾಗಿತ್ತು. ಈ ಕಾರಣಕ್ಕೆ ಚಿತ್ರದ ಗಳಿಕೆ ಆಶಾದಾಯಕವಾಗಿರಲಿದೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬಂದಿತ್ತು. ಅದ್ರಂತೆ ಚಿತ್ರ ಒಳ್ಳೆಯ ಮೊತ್ತವನ್ನೇ ಕಲೆ ಹಾಕಿದೆ. 2012ರಲ್ಲಿ ತೆರೆಗೆ ಬಂದ ಸಿಂಗಂ ರಿಟರ್ನ್ಸ್ ಚಿತ್ರದ ಮೊದಲ ದಿನದ ಗಳಿಕೆಗಿಂತ ಶೇಕಡಾ 36.56% ಹೆಚ್ಚು ಈ ಚಿತ್ರ ಗಳಿಸಿದೆ. ಸಿಂಗಂ ರಿಟರ್ನ್ಸ್ ಆ ಕಾಲಕ್ಕೆ 32ಕೋಟಿಯನ್ನು ಗಳಿಸಿತ್ತು.
ಇನ್ನೂ.. ಸಿಂಗಂ ಅಗೇನ್ ಎದುರು ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭೂಲಯ್ಯ 3 ಕೂಡ ತೆರೆಗೆ ಬಂದಿದೆ. ಈ ಹಿನ್ನೆಲೆ ವ್ಯಾಪಾರದಲ್ಲಿ ಅರ್ಧ ಕುಸಿತ ಕಂಡು ಬಂದಿದೆ. ಗೊಂದಲದಲ್ಲಿಯೇ ಪ್ರೇಕ್ಷಕರ ಬಣ ಇಬ್ಬಾಗವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನ ₹43.50 ಲಕ್ಷ ಗಳಿಸಿದ ಸಿಂಗಂ ಅಗೇನ್ ಚಿತ್ರದ ಮೊದಲ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರ ಸಂಖ್ಯೆ ಕೇವಲ ಶೇಕಡಾ 39.39% ಇತ್ತು ಎಂದು ವರದಿಯಾಗಿದೆ. ಆದರೆ ಆ ನಂತರ ಮೊದಲ ಪ್ರದರ್ಶನ ಮುಕ್ತಾಯವಾದ ಬಳಿಕ ಚಿತ್ರದ ಟಿಕೆಟ್‌ಗಳು ಬಿಕರಿಯಾಗಿದ್ದು ರಾತ್ರಿಯ ಸಮಯಕ್ಕೆ ಭಾರತದೆಲ್ಲೆಡೆ ಶೇಕಡಾ ಚಿತ್ರಮಂದಿರಗಳು 74.19% ರಷ್ಟು ಫುಲ್ ಆಗಿದ್ದವು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕೇವಲ ಮುಂಬೈನಲ್ಲಿ ಮಾತ್ರವಲ್ಲ ಮರಾಠಿ ಮಾತನಾಡುವ ಬಾಜಿರಾವ್ ಸಿಂಗಂನ ದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗರು ಪಡೆದು ಪುನೀತರಾಗಿರುವುದು ವಿಶೇಷ. ಮುಂಬೈನಲ್ಲಿ ನಡೆದ ಒಂದು ಸಾವಿರಕ್ಕೂ ಅಧಿಕ ಪ್ರದರ್ಶನಗಳಲ್ಲಿ ಚಿತ್ರಮಂದಿರ 73.50% ರಷ್ಟು ಭರ್ತಿಯಾಗಿದ್ದರೆ, ಬೆಂಗಳೂರಿನಲ್ಲಿ ಶೇಕಡಾ 58 % ಚಿತ್ರಮಂದಿರ ತುಂಬಿತ್ತು. ಅಂದ್ಹಾಗೇ ನಿನ್ನೆ ಬೆಂಗಳೂರಿನಲ್ಲಿ ಸಿಂಗಂ ಅಗೇನ್ 369 ಪ್ರದರ್ಶನವನ್ನು ಕಂಡಿದೆ. ಬೇರೆ ಪರ ಭಾಷೆ ಚಿತ್ರಗಳಿಗೆ ಹೋಲಿಸಿಕೊಂಡರೆ ಈ ಸಂಖ್ಯೆ ಕಡಿಮೆ ಎನ್ನುವುದು ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ವಿತರಕರೊಬ್ಬರ ಮಾತು. ಒಟ್ನಲ್ಲಿ ಸಿಂಗಂ ಅಗೇನ್ ಮೊದಲ ದಿನ 43.50 ಕೋಟಿ ಹಣ ಗಳಿಸಿದೆ. ಇಂದು ಚಿತ್ರದ ಗಳಿಕೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಸೋಮವಾರದೊಳಗೆ ಈ ಚಿತ್ರ ನೂರು ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.


Click it and Unblock the Notifications











