'ಸೀತೆ'ಯ ಪಾತ್ರದಲ್ಲಿ 'ಕರೀನಾ ಕಪೂರ್ ಖಾನ್' ,'ಸಿಂಗಂ ಅಗೇನ್'ನಲ್ಲಿ 'ರಾಮಾಯಣ'...!
ತ್ರೇತಾಯುಗದಲ್ಲಿ ನಡೆದ ರಾಮಾಯಣದ ಕುರಿತು ಕಲಿಯುಗದಲ್ಲಿ ಹತ್ತು ಹಲವು ಚಿತ್ರಗಳು ಬಂದಿವೆ. ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ. ಅದರಲ್ಲಿಯೂ ರಮಾನಂದ್ ಸಾಗರ್ ಅವರ ರಾಮಾಯಣ ಇವತ್ತು ಕೂಡ ಅನೇಕರ ಮನದಲ್ಲಿದೆ. ಇನ್ನೂ.. ರಾಮಾಯಣದ ಕಥೆಯನ್ನು ಕೆಲವರು ಪೌರಾಣಿಕ ಚಿತ್ರದ ರೂಪದಲ್ಲಿ ತೆರೆಗೆ ತಂದರೆ, ಇನ್ನೂ ಕೆಲವರು ಈ ಕಥೆಯನ್ನಾಧರಿಸಿ ಅದಕ್ಕೆ ಕಮರ್ಷಿಯಲ್ ಸ್ಪರ್ಷವನ್ನು ನೀಡಿದ್ದಾರೆ. ಆ ಕಾಲದ ರಾಮಾಯಣವನ್ನು ಈ ಕಾಲಕ್ಕೆ ಅನುಗುಣವಾಗಿ ಬದಲಿಸಿ ಬೆಳ್ಳಿ ತೆರೆಯ ಮೂಲಕ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಿಂಗಂ ಅಗೇನ್ ಸದ್ಯದ ಉದಾಹರಣೆ.
ಹೌದು, ಪೊಲೀಸ್ ಜಾನರ್‌ನ ಸಿನಿಮಾಗಳಿಂದಲೇ ಜಗದ್ವಿಖ್ಯಾತಿಯನ್ನು ಗಳಿಸಿದ ರೋಹಿತ್ ಶೆಟ್ಟಿ ಸದ್ಯ ತಮ್ಮ ಸಿಂಗಂ ಅಗೇನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ರಾಮಾಯಣದ ಕಥೆಯನ್ನಾಧರಿಸಿ ಚಿತ್ರವನ್ನು ಮಾಡುವ ಮೂಲಕ ಅನೇಕರನ್ನೂ ಅಚ್ಚರಿಗೆ ದೂಡಿದ್ದಾರೆ. ಅಜಯ್ ದೇವಗನ್ ಇಲ್ಲಿ ಆಧುನಿಕ ರಾಮನ ಪಾತ್ರವನ್ನು ನಿರ್ವಹಿಸಿದ್ದರೆ ಕರೀನಾ ಕಪೂರ್ ಖಾನ್ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇನ್ನೂ ಕಲಿಯುಗದ ರಾವಣನ ಪಾತ್ರಕ್ಕೆ ಅರ್ಜುನ್ ಕಪೂರ್ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಲಂಕೆಗೆ ಹಾರಿದಂತೆ, ಇಲ್ಲಿ ಕರೀನಾ ಕಪೂರ್ ಖಾನ್ ಅವರನ್ನು ಅರ್ಜುನ್ ಕಪೂರ್ ಕಿಡ್ನಾಪ್ ಮಾಡಿಕೊಂಡು ಲಂಕೆಗೆ ಕರೆದೊಯ್ಯುತ್ತಾರೆ. ಈ ರಾವಣನ ಕಪಿಮುಷ್ಠಿಯಿಂದ ಕರೀನಾ ಕಪೂರ್ ಅವರನ್ನು ಅಜಯ್ ದೇವಗನ್ ಕಾಪಾಡುವುದೇ ಚಿತ್ರದ ಕಥೆ.
ಈ ಆಧುನಿಕ ರಾಮಾಯಣದಲ್ಲಿ ಲಕ್ಷ್ಮಣ, ಆಂಜನೇಯ, ಜಟಾಯು ಪಾತ್ರಗಳನ್ನು ನೆನಪಿಸುವ ಪಾತ್ರಗಳು ಕೂಡ ಇವೆ. ಆ ಪಾತ್ರಗಳನ್ನು ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್ ಮತ್ತು ಟೈಗರ್ ಶ್ರಾಫ್ ನಿರ್ವಹಿಸಿದ್ದಾರೆ. ಈ ಮೂಲಕ ತಮ್ಮ ಸೂರ್ಯವಂಶಿ, ಸಿಂಬಾ ಚಿತ್ರದ ಕಥೆಯ ಜೊತೆ ಸಿಂಗಂ ಅಗೇನ್ ಚಿತ್ರವನ್ನು ರೋಹಿತ್ ಶೆಟ್ಟಿ ಲಿಂಕ್ ಮಾಡಿದ್ದಾರೆ. ಪ್ರೇಕ್ಷಕರ ಕಣ್ಮುಂದೆ ಕಾಪ್ ಯುನಿವರ್ಸ್ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಕೇವಲ ರಣ್‌ವೀರ್ ಸಿಂಗ್ ಮಾತ್ರ ಅಲ್ಲ ಅವರ ಪತ್ನಿ ದೀಪಿಕಾ ಪಡುಕೋಣೆ ಕೂಡ ಇದ್ದಾರೆ. ಲೇಡಿ ಸಿಂಗಂ ಆಗಿ ಅಬ್ಬರಿಸಿದ್ದಾರೆ. ಸದ್ಯ ಇವರ ಪಾತ್ರದ ಪರಿಚಯವನ್ನೂ ನೋಡಿರುವ ಅನೇಕರು ದೀಪಿಕಾ ಪಡುಕೋಣೆ ವಿಭೀಷಣನ ಪಾತ್ರವನ್ನು ನಿರ್ವಹಿಸಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಸಾಮಾನ್ಯವಾಗಿ ಸ್ಟಾರ್‌ಗಳು ವಯಸ್ಸಾದಂತೆ ರಿಸ್ಕಿ ಸಾಹಸಗಳನ್ನು ಮಾಡಲು ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಇರುವ ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ವಯಸು ಐವತ್ತು ದಾಟಿದರೂ ಕೂಡ ಯುವಕರಂತೆ ಇಲ್ಲಿ ಸ್ಟಂಟ್‌ಗಳನ್ನು ಮಾಡಿದ್ದಾರೆ. ಸದ್ಯ ಇವರ ಈ ಸ್ಟಂಟ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪಡ್ಡೆಗಳು ದಿಗಿಲಾಗುವಂತೆ ಮಾಡಿದೆ. ಚಿತ್ರದೂದ್ದಕ್ಕೂ ಅದ್ಧೂರಿತನ ಹಾಸು ಹೊಕ್ಕಿದೆ.

ಉಳಿದಂತೆ ಚಿತ್ರದ ಟ್ರೇಲರ್ ಸದ್ಯಕ್ಕೆ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಮುನ್ನುಡಿ ಬರೆದಿದೆ. ಯೂಟ್ಯೂಬ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಕೂಡ ಚಿತ್ರದ ಟ್ರೇಲರ್ ಇದೆ. ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಲಕ್ಷಾನು ಲಕ್ಷ ವೀವ್ಸ್ ಪಡೆದಿದೆ. ಆದರೆ, ಇದೇ ಸಮಯದಲ್ಲಿ ಅರ್ಜುನ್ ಕಪೂರ್ ಅವರ ಕುರಿತು ಅನೇಕರು ಅಪಸ್ವರ ತೆಗೆದಿದ್ದಾರೆ. ಅರ್ಜುನ್ ಕಪೂರ್ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು ರೋಹಿತ್ ಶೆಟ್ಟಿ ಮಹಾ ಅಪರಾಧ ಎಸಗಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಜಯ್ ದೇವಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಣ್‌ವೀರ್ ಸಿಂಗ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ ಇವರೆಲ್ಲ ಇದ್ದರೂ ಕೂಡ ಈ ಚಿತ್ರವನ್ನು ಮಕಾಡೆ ಮಲಗಿಸಲು ಅರ್ಜುನ್ ಕಪೂರ್ ಸಾಕು ಎನ್ನುತ್ತಿದ್ದಾರೆ. ಇನ್ನೂ ಈ ಚಿತ್ರದ ಮತ್ತೊಂದು ವಿಶೇಷ ಅಂದರೆ, ಕೆಜಿಎಫ್ ಮೂಲಕ ಕೀರ್ತಿಯ ಶಿಖರಕ್ಕೇರಿದ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿರುವ ಸಿಂಗಂ ಅಗೇನ್ ಈ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ ಒಂದರಂದು ಬಿಡುಗಡೆಯಾಗಲಿದೆ. ಅವತ್ತೇ ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭೂಲಯ್ಯ 3 ಕೂಡ ಬಿಡುಗಡೆಯಾಗುತ್ತಿದೆ.


Click it and Unblock the Notifications










