Sky Force Box Office Day 1 ; ಸತತ ಸೋಲು, ನೋವು, ಮೈಕೊಡವಿ ಎದ್ದು ನಿಂತ ಅಕ್ಷಯ್ ಕುಮಾರ್..!
ಹೆಚ್ಚೇನ್ ಇಲ್ಲ.. ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್... ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ.
ಕೊರೊನಾ ನಂತರ ಅಕ್ಷಯ್ ಕುಮಾರ್ ಅಭಿನಯದ ಹನ್ನೆರಡು ಸಿನಿಮಾಗಳು ತೆರೆಗೆ ಬಂದಿವೆ. ಈ ಹನ್ನೆರಡು ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಬ್ಲಾಕ್ ಬಸ್ಟರ್ ರೆಸ್ಫಾನ್ಸ್ ಪಡೆದಿದ್ದು ಕೇವಲ ಸೂರ್ಯವಂಶಿ ಚಿತ್ರ ಮಾತ್ರ. ಸೂರ್ಯವಂಶಿ ಹೊರತು ಪಡಿಸಿದರೆ ಓ ಮೈ ಗಾಡ್-02 ಮಾತ್ರ ಗೆಲುವನ್ನು ಕಂಡಿದೆ. ಮಿಕ್ಕಂತೆ ಅಕ್ಷಯ್ ಕುಮಾರ್ ಗೆ ಸಿಕ್ಕಿದ್ದು ಸೋಲು ಮತ್ತು ಹಿನ್ನೆಡೆ. ಹೀಗಾಗಿಯೇ ಒಂದು ಕಾಲದಲ್ಲಿ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್ ಈಗೀಗ ಅನ್‌ಲಕ್ಕಿ ಕುಮಾರ್ ಎಂದು ಕರೆಯಲು ಶುರು ಮಾಡಿತ್ತು.

ನಿರಂತರ ಸೋಲುಗಳಿಂದ ಅಕ್ಷಯ್ ಕುಮಾರ್ ಕೂಡ ಸಹಜವಾಗಿ ನೊಂದುಕೊಂಡಿದ್ದರು. ತಮ್ಮ ಬಗ್ಗೆ ಕೇಳಿ ಬಂದ ಮಾತುಗಳಿಂದ ಬೇಸತ್ತು ನಾನೆಲ್ಲಿಯೂ ಓಡಿ ಹೋಗಲ್ಲ. ನಾನು ಇನ್ನೂ ಸತ್ತಿಲ್ಲ ಎಂದು ಹೇಳಿದ್ದರು. ಇಂದಲ್ಲ ನಾಳೆ ಮತ್ತೆ ಗೆಲ್ಲುತ್ತೇನೆ ಎಂದು ಹೇಳಿದ್ದರು. ಅಕ್ಷಯ್ ಕುಮಾರ್ ಹೇಳಿದ್ದ ಈ ಮಾತು ಈಗ ನಿಜವಾಗಿದೆ. ಅನೇಕ ವರ್ಷಗಳ ನಂತರ ಅಕ್ಷಯ್ ಕುಮಾರ್ ಮೊಗದಲ್ಲಿ ಮಂದಹಾಸ ಮೂಡಿದೆ.
ಹೌದು, ಗಣರಾಜ್ಯೋತ್ಸವದ ಪ್ರಯುಕ್ತ ನಿನ್ನೆ ಬಿಡುಗಡೆಯಾದ ಸ್ಕೈ ಫೋರ್ಸ್ ಮೊದಲ ದಿನ ₹ 11.25 ಕೋಟಿಯನ್ನು ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿ ಮಾಡಿದೆ. ನಿಜಾ. ಅಕ್ಷಯ್ ಕುಮಾರ್ ಅವರ ಸ್ಟಾರ್ ಡಂಗೆ ಈ ಗಳಿಕೆ ತುಂಬಾ ಕಡಿಮೆಯೇ. ಆದರೆ, ಅಕ್ಷಯ್ ಕುಮಾರ್ ಮೊದಲ ದಿನ ಹತ್ತು ಕೋಟಿಯ ಗಡಿಯನ್ನು ದಾಟಿಯೇ ಅನೇಕ ವರ್ಷಗಳಾಗಿದ್ದವು. ಇವರ ಕೊನೆಯ ಚಿತ್ರ ಖೇಲ್ ಖೇಲ್ ಮೇ ಮೊದಲ ದಿನ ಕೇವಲ 5 ಕೋಟಿಯನ್ನಷ್ಟೇ ಗಳಿಸಿತ್ತು. ಅದಕ್ಕೂ ಹಿಂದೆ ಬಂದ ಸರ್ಫಿರಾ ಗಳಿಕೆ ಇದಕ್ಕಿಂತ ಕಡಿಮೆ ಇತ್ತು. ಈ ಕಾರಣಕ್ಕೆ ಸ್ಕೈ ಫೋರ್ಸ್ ಚಿತ್ರದ ಗಳಿಕೆ ಬಾಲಿವುಡ್ ಪಾಲಿಗೆ ತುಂಬಾನೇ ಮಹತ್ವದ್ದು. ಅಕ್ಷಯ್ ಕುಮಾರ್ ಪಾಲಿಗೆ ಕೂಡ ಮಹತ್ವದ್ದು.
ಇನ್ನು ಮೊದಲ ದಿನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 1965ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಇನ್ನು ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿಯ ರಿಪಬ್ಲಿಕ್ ಡೇ ಸ್ಲಾಟ್ ಖಾಲಿ ಇದೆ. ಸ್ಕೈ ಪೋರ್ಸ್ ಚಿತ್ರವನ್ನು ಹೊರತು ಪಡಿಸಿ ಬೇರೆ ಯಾವ ಭಾಷೆಯಲ್ಲಿ ಯಾವುದೇ ದೊಡ್ಡ ಚಿತ್ರ ಬಿಡುಗಡೆಯಾಗಿಲ್ಲ. ಇದು ಚಿತ್ರದ ಗಳಿಕೆಗೆ ಇನ್ನು ಸಹಕಾರಿಯಾಗಲಿದೆ. ಇವೆಲ್ಲ ಕಾರಣಗಳಿಂದ ಸ್ಕೈ ಫೋರ್ಸ್ ಉತ್ತಮವಾದ ಕಲೆಕ್ಷನ್ ಮಾಡುವ ವಿಶ್ವಾಸ ಬಾಲಿವುಡ್‌ಗೆ ಇದೆ. ಹೊಸ ವರ್ಷ ಅಕ್ಷಯ್ ಕುಮಾರ್ ಗೆ ಕೂಡ ಹೊಸ ಹರುಷವನ್ನು ನೀಡುವ ಸಾಧ್ಯತೆ ಇದೆ.
ಇನ್ನುಳಿದಂತೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ವೀರ್ ಪಹಾರಿಯಾ ಇದ್ದಾರೆ. ಇದು ಇವರ ಚೊಚ್ಚಲ ಚಿತ್ರ. ಇನ್ನು ಸಾರಾ ಅಲಿ ಖಾನ್ ಕೂಡ ಚಿತ್ರದಲ್ಲಿದ್ದಾರೆ. ವಿಶೇಷ ಅಂದರೆ ವೀರ್ ಪಹಾರಿಯಾ ಮತ್ತು ಸಾರಾ ಅಲಿ ಖಾನ್ ಒಂದು ಕಾಲದ ಮಾಜಿ ಪ್ರೇಮಿಗಳು. ಒಟ್ನಲ್ಲಿ ಸದ್ಯ ಸ್ಕೈ ಫೋರ್ಸ್ ಚಿತ್ರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗಳಿಕೆ ಎರಡಂಕಿ ದಾಟಿದೆ. ಇಂದು ಮತ್ತು ನಾಳೆ ಈ ಚಿತ್ರ ಎಷ್ಟು ಗಳಿಸಲಿದೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications










