ಕನ್ನಡದ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ ಸ್ಮೃತಿ ಮಂಧಾನ ಅವರ ಅತ್ತಿಗೆ, ಯಾರು ಗೊತ್ತಾಯ್ತಾ?
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ..
ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಸ್ಮೃತಿ ಮಂದಾನ ಕೂಡ ಸೇರಿಕೊಂಡಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಇನ್ನೇನು ಕೆಲವೇ ಗಂಟೆಗಳು ಉರುಳಿದ ನಂತರ ನಾಳೆ (ಭಾನುವಾರ) ಸ್ಮೃತಿ ಮಂಧಾನ, ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಪಲಾಶ್ ಮುಚ್ಚಲ್ ಜೊತೆ ಅಧಿಕೃತವಾಗಿ ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ. ಆದರೆ ಈ ಪಲಾಶ್ ಮುಚ್ಚಲ್ ಅವರ ಅಕ್ಕ ಮತ್ತು ಕನ್ನಡ ಚಿತ್ರರಂಗಕ್ಕೆ ಒಂದು ಭಾಂದವ್ಯ ಇದೆ ಎನ್ನುವ ವಿಚಾರ ನಿಮಗೆ ಗೊತ್ತಾ ..?
ಬಹುಶಃ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಈ ಪಲಾಶ್ ಬೇರೆ ಯಾರು ಅಲ್ಲ ಬದಲಿಗೆ ಪಲಕ್ ಮುಚ್ಚಲ್ ಅವರ ಸಹೋದರ. ಇನ್ನು ಪಲಕ್ ಮುಚ್ಚಲ್..? ಬಾಲಿವುಡ್‌ನ ಪ್ರಖ್ಯಾತ ಗಾಯಕಿ. ಕಳೆದೊಂದುವರೆ ದಶಕದಲ್ಲಿ 150ಕ್ಕೂ ಅಧಿಕ ಹಿಂದಿ ಹಾಡುಗಳಿಗೆ ಕಂಠ ಕುಣಿಸಿರುವ ಪಲಕ್ ಮುಚ್ಚಲ್ ಕನ್ನಡದಲ್ಲಿಯೂ ಕೂಡ ಒಂದು ಹದಿನೈದರಿಂದ ಇಪ್ಪತ್ತು ಹಾಡುಗಳನ್ನು ಹಾಡಿದ್ಧಾರೆ. ಆ ಪೈಕಿ ''ಅಯೋಗ್ಯ'' ಚಿತ್ರದ ''ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ'' ಹಾಡನ್ನು ಯಾರು ತಾನೇ ಮರೆಯಲು ಸಾಧ್ಯ..?
ಅಯೋಗ್ಯ ಹೊರತುಪಡಿಸಿದರೆ ''ಪಾರು ವೈಫ್ ಆಫ್ ದೇವದಾಸ್'' ಚಿತ್ರದ ''ಕಣ್ಣಲ್ಲೇ ನೀನು''.. ''ಅಧ್ಯಕ್ಷ'' ಚಿತ್ರದ ''ಸುಮ್ ಸುಮ್ನೇ''.. ''ಮುದ್ದು ಮನಸೇ'' ಚಿತ್ರದ ''ಹಾಗೋ ಹೀಗೋ''.. ''ರಣವಿಕ್ರಮ'' ಚಿತ್ರದ ''ನೀನೆ ನೀನೆ''.. ಹೀಗೆ ಕನ್ನಡದ ಒಂದಕ್ಕಿತೊಂದು ಚೆಂದದ ಹಾಡುಗಳಿಗೆ ಪಲಕ್ ಧ್ವನಿಯಾಗಿದ್ದಾರೆ. ತಮ್ಮ ಧ್ವನಿಯ ಮೂಲಕ ಹಲವು ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.
ಇಂಥಾ ಪಲಕ್ ಮುಚ್ಚಲ್ ಅವರ ತಮ್ಮ ಪಲಾಶ್ ಮುಚ್ಚಲ್ ಅವರಿಗೆ ಆರ್‌ಸಿಬಿ ಕ್ಯಾಪ್ಟನ್ ಮತ್ತು ಭಾರತದ ಮಹಿಳಾ ಕ್ರಿಕೆಟ್ ತಂಡದ ಹೆಮ್ಮೆಯ ಪ್ಲೇಯರ್ ಸ್ಮೃತಿ ಮಂಧಾನ ಮನ ಸೋತಿದ್ದಾರೆ. ಇದೇ ಭಾನುವಾರ ( ನವೆಂಬರ್ 23 ) ಪಲಾಶ್ ಅವರ ಜೊತೆ ಸಪ್ತಪದಿಯನ್ನು ತುಳಿಯಲಿದ್ದಾರೆ. ಈ ಮೂಲಕ ಇಂಧೋರ್‌ನ ಸೊಸೆಯಾಗಲಿದ್ದಾರೆ.

ಈಗಾಗಲೇ ಸ್ಮ್ರತಿ ಮಂಧಾನ ಅವರ ಅರಿಶಿಣ ಶಾಸ್ತ್ರದ ಫೋಟೊಗಳು ವೈರಲ್ ಆಗಿದ್ದು, ಹಳದಿ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಆಟಗಾರ್ತಿಯರು, ಹಳದಿ ಬಣ್ಣದ ಉಡುಗೆಯನ್ನು ತೊಟ್ಟಿದ್ದರು. ಸ್ಮೃತಿ ಜೊತೆಗೆ, ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ಹಳದಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಗೆಳತಿಗೆ ಶುಭ ಕೋರಿ ಫುಲ್ ಎಂಜಾಯ್ ಮಾಡಿದ್ದಾರೆ.
ಅಂದ್ಹಾಗೇ ಸ್ಮೃತಿ ಮತ್ತು ಪಲಾಶ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ 2019ರಲ್ಲಿ ಹಲವರಿಗೆ ಬಂದಿತ್ತು. 2019ರಿಂದ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಹಿಂಬಾಲಿಸಲು ಶುರು ಮಾಡಿದ ಇಬ್ಬರು ಹಲವು ಕಡೆ ಕಾಣಿಸಿಕೊಂಡರು.
ಆದರೆ ಎಲ್ಲಯೂ ತಮ್ಮ ಸಂಬಂಧದ ಕುರಿತು ಅಧಿಕೃತವಾಗಿ ಇಬ್ಬರು ಮಾತನಾಡಿರಲಿಲ್ಲ. ವರದಿಗಳ ಪ್ರಕಾರ ಸಹೋದರಿ ಲೈವ್ ಕನ್ಸರ್ಟ್‌ನಲ್ಲಿಯೇ ಸ್ಮೃತಿ ಅವರಿಗೆ ಹಾಡನ್ನು ಅರ್ಪಿಸಿದ್ದ ಪಲಾಶ್ ತಮ್ಮ ಸಹೋದರಿ ಪಲಕ್ ಎದುರು ಸ್ಮೃತಿ ಮಂದನಾಗೆ ಪ್ರಪೋಸ್ ಮಾಡಿದ್ದರು. 2024ರಲ್ಲಿ ತಮ್ಮ ಸಂಬಂಧ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಕೇಕ್ ಕಟ್ ಮಾಡಿ ಇಬ್ಬರು ಸಂಭ್ರಮಿಸಿದ್ದರು. ಇದೀಗ ಪಲಾಶ್ ಮುಚಲ್ ಜೊತೆ ಸ್ಮೃತಿ ಮಂಧಾನ ವಿವಾಹ ಬಂಧನಕ್ಕೊಳಗಾಗುತ್ತಿದ್ಧಾರೆ.


Click it and Unblock the Notifications











