ನಟಿ ಶ್ರೀಲೀಲಾಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ನಿಯಿಂದ ಅವಮಾನ ? ಅಭಿಮಾನಿಗಳ ಆಕ್ರೋಶ
ಕನ್ನಡ ನಟಿ ಶ್ರೀಲೀಲಾ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಸದ್ದು ಮಾಡ್ತಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದು ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಬೆಂಗಳೂರು ಬೆಡಗಿ ಪರಭಾಷಾ ಸಿನಿಮಾಗಳಲ್ಲಿ ಮಿಂಚುತ್ತಿರುವುದು ಕನ್ನಡ ಸಿನಿರಸಿಕರಿಗೂ ಖುಷಿ ತಂದಿದೆ. ಆದರೆ ಕನ್ನಡ ಸಿನಿಮಾ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಬೇಸರವೂ ಇದೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗಿದ್ದರು. ಆಕೆ ಯೋಗ ಮಾಡುತ್ತಿರುವ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಇದೆಲ್ಲದರ ನಡುವೆ ಶ್ರೀಲೀಲಾಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಅವಮಾನ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗ್ತಿದೆ. ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ(ಜೂನ್ 21) ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದರು. ನಟ ಶಾಹಿದ್ ಕಪೂರ್ ಜೊತೆ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಕೂಡ ತಮ್ಮ ಮಗಳು ದಿವಿಜಾ ಜೊತೆ ಪಾಲ್ಗೊಂಡಿದ್ದರು. ಕೊನೆಗೆ ಎಲ್ಲರೂ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಶ್ರೀಲೀಲಾ, ಅಮೃತಾ ಹಾಗೂ ಆಕೆಯ ಮಗಳು ಒಟ್ಟಿಗೆ ಕಾಣಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಈ ವೇಳೆ ಪಾಪರಾಜಿಗಳು ನೀವಿಬ್ಬರು ತಾಯಿ, ಮಗಳು ಒಟ್ಟಿಗೆ ನಿಂತು ಪೋಸ್ ಕೊಡಿ ಎಂದು ಕೇಳಿದ್ದಾರೆ. 'ಆ ಕಡೆ ಹೋಗಮ್ಮ' ಎಂದು ಶ್ರೀಲೀಲಾಗೆ ಅಮೃತಾ ಅವರು ಹೇಳಿದಂತೆ ಕಂಡುಬಂದಿದೆ. ಈ ವೀಡಿಯೋ ವೈರಲ್ ಆಗ್ತಿದೆ.
ಅಮೃತಾ ಅವರು ಹೀಗೆ ಹೇಳುತ್ತಿದ್ದಂತೆ ನಟಿ ಶ್ರೀಲೀಲಾ ಬೇಸರದಿಂದ ಪಕ್ಕಕ್ಕೆ ಹೋಗಿ ನಿಂತಿರುವುದನ್ನು ನೋಡಬಹುದು. ಒಬ್ಬ ನಟಿಗೆ ಈ ರೀತಿ ಹೇಳುವುದು ಸರಿಯಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ಫೋಟೊಗ್ರಾಫರ್ಸ್ ಹೇಳಿದ್ರಲ್ಲ, ತಾಯಿ- ಮಗಳು ಪೋಸ್ ಕೊಡಿ ಅಂತ.. ಅದಕ್ಕೆ ಪಕ್ಕಕ್ಕೆ ನಿಲ್ಲುವಂತೆ ಹೇಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಮುಖ್ಯಮಂತ್ರಿ ಪತ್ನಿ ಎನ್ನುವ ಕಾರಣಕ್ಕೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅಮೃತಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ಫೋಟೊಗ್ರಾಫರ್ ತಾಯಿ ಮಗಳ ಫೋಟೊ ತೆಗೆಯಬೇಕು ಎಂದಿದ್ದರೆ ಅದನ್ನು ಅಮೃತ ನಗುತ್ತಾ ಹೇಳಬಹುದಿತ್ತು. ತೋರು ಬೆರಳು ತೋರಿಸಿ ಹೇಳುವಂಥದ್ದು ಏನಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಶ್ರೀಲೀಲಾ ಆಗಲಿ, ಅಮೃತಾ ಫಡ್ನವಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಾಲಿವುಡ್ ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೀತಿದೆ.
ಸಿನಿಮಾಗಳಲ್ಲಿ ನಟಿಸುತ್ತಲೇ ಶ್ರೀಲೀಲಾ ಎಂಬಿಬಿಎಸ್ ಓದಿ ಮುಗಿಸಿದ್ದಾರೆ. ಈಗ ಡಾ. ಶ್ರೀಲೀಲಾ ಆಗಿದ್ದಾರೆ. ಆದರೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ಇನ್ನು ಬೆಂಗಳೂರು ಬೆಡಗಿಗೆ ಅದೃಷ್ಟ ಪದೇ ಪದೆ ಕೈಕೊಡುತ್ತಿದೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ್ರು ಒಂದೇ ಒಂದು ಬ್ರೇಕ್ ಸಿಕ್ತಿಲ್ಲ. ಆದರೂ ಒಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ವರ್ಷ ಶ್ರೀಲೀಲಾ ನಟನೆಯ ಒಂದು ತಮಿಳು ಹಾಗೂ ಒಂದು ತೆಲುಗು ಸಿನಿಮಾ ತೆರೆಗೆ ಬಂದಿದೆ. ಮತ್ತೆರಡು ಸಿನಿಮಾಗಳು ಆಕೆಯ ಕೈಯಲ್ಲಿವೆ. ತಮಿಳಿನ 'ಪರಾಶಕ್ತಿ' ಚಿತ್ರದಲ್ಲಿ ಕಿಸ್ ಬೆಡಗಿ ಮಿಂಚಿದ್ದರು. ಬಳಿಕ 'ಉಸ್ತಾಸ್ ಭಗತ್ ಸಿಂಗ್' ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಎರಡೂ ಸಿನಿಮಾಗಳು ಗೆಲ್ಲಲೇ ಇಲ್ಲ.
ಸದ್ಯ ಅನುರಾಗ್ ಬಸು ನಿರ್ದೇಶನದ ಇನ್ನು ಹೆಸರಿಡದ ಬಾಲಿವುಡ್ ಚಿತ್ರದಲ್ಲಿ ಶ್ರೀಲೀಲಾ ಬಣ್ಣ ಹಚ್ಚಿದ್ದಾರೆ. ಕಾರ್ತಿಕ್ ಆರ್ಯನ್ ಜೋಡಿಯಾಗಿ ಮಿಂಚುತ್ತಿದ್ದಾರೆ. ಮತ್ತೊಂದು ಕಡೆ ತಮಿಳಿನಲ್ಲಿ ಧನುಷ್ ನಟನೆಯ 'ಓಂ' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ತೆಲುಗಿನಲ್ಲಿ ಯಾವುದೇ ಸಿನಿಮಾ ಆಕೆಯ ಕೈಯಲ್ಲಿ ಇಲ್ಲ.


Click it and Unblock the Notifications