ಗಂಡ- ಹೆಂಡತಿಗೆ ಈಗೋ ಇರಬಾರದು; ಡಿವೋರ್ಸ್ ಬಗ್ಗೆ ನಟ ಸೊಹೈಲ್ ಖಾನ್ ಮಾತು
ಬಾಲಿವುಡ್ ನಟ ಸೊಹೈಲ್ ಖಾನ್ ತಮ್ಮ ಡಿವೋರ್ಸ್ ಬಗ್ಗೆ ಬಹಳ ದಿನಗಳ ಬಗ್ಗೆ ಮೌನ ಮುರಿದಿದ್ದಾರೆ. ಸೀಮಾ ಸಜ್ದೇವ್ ಅವರಿಂದ ವಿಚ್ಛೇದನ ಪಡೆದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವಿಚ್ಛೇದನಕ್ಕೆ ದಾರಿಮಾಡಿಕೊಟ್ಟ ವೈವಾಹಿಕ ಸಂಘರ್ಷಗಳು ಮತ್ತು ಮಕ್ಕಳ ಮೇಲೆ ಅದರ ಪರಿಣಾಮದ ಬಗ್ಗೆ ಇಟಿಡೈಮ್ಸ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನಿರಂತರ ಸಂಘರ್ಷಗಳು ತಮ್ಮ ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದು ಸೊಹೈಲ್ ಖಾನ್ ತಿಳಿಸಿದ್ದಾರೆ. ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್‌ಗಾಗಿ ನಾವಿಬ್ಬರು ನಿರ್ಧಾರ ಕೈಗೊಂಡೆವು ಎಂದು ಅವರು ಹೇಳಿದ್ದಾರೆ. ಪತಿ-ಪತ್ನಿಯರ ಜಗಳ ಮಕ್ಕಳಿಗೆ ಮಾನಸಿಕ ತೊಂದರೆ ನೀಡುತ್ತದೆ ಎಂದಿದ್ದಾರೆ. "ಗಂಡ ಮತ್ತು ಹೆಂಡತಿ ಜಗಳವಾಡಲು ಪ್ರಾರಂಭಿಸಿದಾಗ, ಅದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದಿದ್ದಾರೆ.

"ಗಂಡ ಮತ್ತು ಹೆಂಡತಿಯ ಈಗೋ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರಿಗೆ ಗೊತ್ತಾಗಲ್ಲ. ಅದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಅವರ ಜೀವನವನ್ನು ಮಾತ್ರವಲ್ಲ, ಅವರು ತಮ್ಮ ಮುಂದಿನ ಪೀಳಿಗೆಯನ್ನು ಹಾಳುಮಾಡುತ್ತಿದ್ದಾರೆ. ಆಗ ನಿಮ್ಮ ಮಕ್ಕಳು ತೊಂದರೆಗೊಳಗಾದ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ನಾನು ಮತ್ತು ಸೀಮಾ ಅದನ್ನೇ ನಿರ್ಧರಿಸಿದೆವು - ನಮಗೆ ಅದು ಬೇಡವಾಗಿತ್ತು" ಎಂದು ಸೊಹೈಲ್ ವಿವರಿಸಿದ್ದಾರೆ.
ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಅವರು, "ನಾನು 24 ವರ್ಷ ಸೀಮಾ ಜೊತೆ ಇದ್ದೇನೆ. ಅವಳು ಒಳ್ಳೆ ಹುಡುಗಿ, ಎಲ್ಲೋ ಕೆಲ ವಿಚಾರಗಳು ಹೊಂದಾಣಿಕೆ ಆಗಲಿಲ್ಲ. ಅವಳು ಒಳ್ಳೆಯ ವ್ಯಕ್ತಿ ಮತ್ತು ಕಾಳಜಿಯುಳ್ಳ ತಾಯಿ" ಎಂದು ಹೇಳಿದರು. ಮಕ್ಕಳೊಂದಿಗೆ ನಾವಿಬ್ಬರು ಒಟ್ಟಾಗಿ ವರ್ಷಕ್ಕೊಮ್ಮೆ ಪ್ರವಾಸ ಹೋಗಬೇಕು ಎಂದು ಮೊದಲೇ ನಿರ್ಧರಿಸಿದ್ದೇವೆ. "ನಾವು ಪ್ರತ್ಯೇಕ ಪೋಷಕರಾಗಿ ಸಂತೋಷದಿಂದ ಇರುತ್ತೇವೆ" ಎಂದಿದ್ದಾರೆ.

ಸೊಹೈಲ್ ಖಾನ್ ಮತ್ತು ಸೀಮಾ ಸಜ್ದೇವ್ 1998 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅವರಿಬ್ಬರೂ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಚಿತ್ರದ ಸಮಯದಲ್ಲಿ ಮೊದಲಿಗೆ ಭೇಟಿಯಾಗಿದ್ದರು ಎನ್ನಲಾಗುತ್ತದೆ. ಧಾರ್ಮಿಕ ಮತ್ತು ಕುಟುಂಬ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ, ಅವರು ಆರ್ಯ ಸಮಾಜ ವಿವಾಹವಾಗಿದ್ದರು. ನಂತರ ನಿಕಾಹ್ ಮತ್ತು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.
2022ರಲ್ಲಿ ಈ ಜೋಡಿ ಅಧಿಕೃತವಾಗಿ ವಿಚ್ಛೇದನ ಪಡೆಯುವ ಮೂಲಕ ಎರಡು ದಶಕಗಳ ದಾಂಪತ್ಯಕ್ಕೆ ಅಂತ್ಯ ಹಾಡಿತು. ಸೀಮಾ ಈ ಹಿಂದೆ ನೆಟ್‌ಫ್ಲಿಕ್ಸ್‌ನ 'ಫ್ಯಾಬ್ಯುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್'ನಲ್ಲಿ ತಮ್ಮ ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಸೊಹೈಲ್ ಖಾನ್ ಈ ಬಗ್ಗೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಅರ್ಜುನ್ ಸನ್ ಆಫ್ ವೈಜಯಂತಿ' ತೆಲುಗು ಚಿತ್ರದಲ್ಲಿ ಕೊನೆಯದಾಗಿ ಸೊಹೈಲ್ ಖಾನ್ ನಟಿಸಿದ್ದರು.


Click it and Unblock the Notifications











