ಬಾಲಿವುಡ್‌ಗೆ ಭೂಗತ ಜಗತ್ತಿನ ನಂಟಿತ್ತು: ನಟಿ ಸೊನಾಲಿ ಬೇಂದ್ರೆ
ಐಶ್ವರ್ಯಾ ರೈ, ಮಾಧುರಿ, ಕಾಜಲ್, ರಾಣಿ ಮುಖರ್ಜಿಯಂತೆ ಸೊನಾಲಿ ಬೇಂದ್ರೆ ಬಾಲಿವುಡ್‌ನಲ್ಲಿ ಬಹು ದೊಡ್ಡ ಹೆಸರು ಮಾಡಲಾಗಲಿಲ್ಲ. ಹಾಗೆಂದು ತೀರ ಸಾಮಾನ್ಯ ನಟಿಯಾಗಿಯೂ ಉಳಿಯಲಿಲ್ಲ.
ಸೊನಾಲಿ ಬೇಂದ್ರೆಗೆ ಅವರದ್ದೇ ಆದ ಸೀಮಿತ ಅಭಿಮಾನಿ ವರ್ಗವೂ ಇದೆ. ಬಾಲಿವುಡ್ ಮಾತ್ರವೇ ಅಲ್ಲದೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ಸೊನಾಲಿ ಬೇಂದ್ರೆಗೆ ಬಾಲಿವುಡ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಸಿಗಲಿಲ್ಲವೆಂದೇ ಹೇಳಬೇಕು.
ಇದೀಗ ಸೊನಾಲಿ ಬೇಂದ್ರೆ, ತಮಗೇಕೆ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಏಕೆ ತಾವು ಬಾಲಿವುಡ್‌ನ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಹಾಗೂ ಬಾಲಿವುಡ್‌ನಲ್ಲಿ ತಮಗೇಕೆ ಹೆಚ್ಚು ಅವಕಾಶಗಳು ದೊರೆಯಲಿಲ್ಲ ಎಂಬ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಬಾಲಿವುಡ್‌ಗೆ ಭೂಗತ ಜಗತ್ತಿನ ನಂಟಿತ್ತು ಎಂಬ ವಿಷಯವನ್ನು ಧೈರ್ಯವಾಗಿ ಹೇಳಿದ್ದಾರೆ ನಟಿ.

90ರ ದಶಕದಲ್ಲಿ ಭಾರಿ ಡಿಮ್ಯಾಂಡ್ ಇತ್ತು
90 ರ ದಶಕದಲ್ಲಿ ಸೊನಾಲಿ ಬೇಂದ್ರೆಗೆ ಸಾಕಷ್ಟು ಡಿಮ್ಯಾಂಡ್ ಇತ್ತು. ಆದರೆ ಆ ಸಮಯದಲ್ಲಿ ಬಾಲಿವುಡ್ ಮೇಲಿದ್ದ ಭೂಗತ ಲೋಕದ ಪ್ರಭಾವದಿಂದಾಗಿ ತಮಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ ಅಥವಾ ಸಿಕ್ಕ ಅವಕಾಶಗಳು ಬೇರೆಯವರ ಪಾಲಾದವು ಎಂದು ನಟಿ ಸೊನಾಲಿ ಬೇಂದ್ರೆ ಹೇಳಿಕೊಂಡಿದ್ದಾರೆ. ಕೆಟ್ಟ ಸಮಯದಲ್ಲಿ ತಮ್ಮ ಈಗಿನ ಪತಿ ನಿರ್ಮಾಪಕ ಗೋಲ್ಡಿ ಬೇಲ್ ಸಹಾಯ ಮಾಡಿದರೆಂದು ಸಹ ಹೇಳಿಕೊಂಡಿದ್ದಾರೆ.

ನನ್ನ ಪಾತ್ರ ಬೇರೆಯವರ ಪಾಲಾಗುತ್ತಿತ್ತು: ಸೊನಾಲಿ ಬೇಂದ್ರೆ
''ಅಪರಾಧಿ ಹಿನ್ನೆಲೆಯುಳ್ಳವರು ಹಣ ಹೂಡಿದ ಸಿನಿಮಾಗಳಲ್ಲಿ ನಟಿಸುದರಿಂದ ನಾನು ಹಿಂದೆ ಸರಿದೆ. ಆ ಸಮಯದಲ್ಲಿ ನನ್ನ ಬಾಯ್‌ಫ್ರೆಂಡ್ ಆಗಿದ್ದ, ಈಗ ಪತಿಯಾಗಿರುವ ಗೋಲ್ಡಿ ಬೇಲ್ ಆ ವಿಷಯದಲ್ಲಿ ನನಗೆ ಸಹಾಯ ಮಾಡಿದರು. ಇನ್ನು ಕೆಲವೊಮ್ಮೆ, ಒಂದು ಪಾತ್ರಕ್ಕೆ ನಾನು ಫಿಕ್ಸ್ ಆಗಿರುತ್ತಿದ್ದೆ, ನಂತರ ಯಾರೋ ಒತ್ತಾಯಕ್ಕೆ ಮಣಿದು ಆ ಪಾತ್ರವನ್ನು ನನ್ನಿಂದ ಹಿಂಪಡೆದು ಬೇರೆಯವರಿಗೆ ನೀಡಲಾಗುತ್ತಿತ್ತು, ಆಗ ನಿರ್ದೇಶಕರೊ, ಸಹ ನಟರೋ ಕರೆ ಮಾಡಿ ಕ್ಷಮೆ ಕೇಳುವುದು, ನಾನು ಪರವಾಗಿಲ್ಲ ಎನ್ನುವುದು ನಡೆಯುತ್ತಿತ್ತು'' ಎಂದು ನೆನಪು ಮಾಡಿದ್ದಾರೆ ಸೊನಾಲಿ ಬೇಂದ್ರೆ.

ನಮ್ಮಲ್ಲಿ ಸೂಕ್ತ ವ್ಯವಸ್ಥೆ ಇಲ್ಲ: ಸೊನಾಲಿ ಬೇಂದ್ರೆ
''ಹಲವು ಸ್ವಚ್ಛ ವ್ಯಕ್ತಿಗಳು, ಸೂಕ್ತ ರೀತಿಯಿಂದ ಸಿನಿಮಾದ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಆದರೆ ಕೆಲವರು ಅಶುದ್ಧ (ಕಪ್ಪುಹಣ) ಹಣವನ್ನು ಸಹ ಸಿನಿಮಾಗಳ ಮೇಲೆ ಹೂಡುತ್ತಿದ್ದಾರೆ. ಯಾವ ರೀತಿಯ ಹಣ ಸಿನಿಮಾಗಳ ಮೇಲೆ ಹೂಡಿಕೆ ಆಗುತ್ತಿದೆ ಎಂದು ತಿಳಿಯಲು ನಮ್ಮಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಅಲ್ಲದೆ ನಮ್ಮದು ಬಹಳ ದೊಡ್ಡ ಉದ್ಯಮ ಆದ್ದರಿಂದ ಪ್ರತಿ ಸಿನಿಮಾಗಳ, ನಿರ್ಮಾಪಕರ ಹಿನ್ನೆಲೆ ಪರಿಶೀಲಿಸುವುದು ಸಹ ಅಸಾಧ್ಯ'' ಎಂದಿದ್ದಾರೆ ಸೊನಾಲಿ.

ಒಟಿಟಿಗೆ ಪದಾರ್ಪಣೆ ಮಾಡಿದ ಸೊನಾಲಿ ಬೇಂದ್ರೆ
ಸೊನಾಲಿ ಬೇಂದ್ರೆ ಇದೀಗ ಒಟಿಟಿಗೆ ಪದಾರ್ಪಣೆ ಮಾಡುತ್ತಿದ್ದಾರೆ. 1994 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸೊನಾಲಿ ಬೇಂದ್ರೆ, ಕನ್ನಡದ 'ಪ್ರೀತ್ಸೆ' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ 'ಇಂದ್ರ', 'ಮುರಾರಿ', 'ಖಡ್ಗಂ', 'ಶಂಕರ್ ದಾದಾ ಎಂಬಿಬಿಎಸ್', ತಮಿಳಿನಲ್ಲಿ 'ಕಾದಲರ್ ದಿನಂ', 'ಕಣ್ಣೋಡು ಕಣ್ಬತ್ತೆಲ್ಲಂ', 'ಬಾಂಬೆ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ 'ದಿ ಬ್ರೋಕನ್ ನ್ಯೂಸ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications










