ಅಮಿತಾಭ್ ಬಚ್ಚನ್ ಅವರೇ ಈ ಕೂಡಲೇ ನಿಮ್ಮ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ- ಸೋನು ನಿಗಂ...!
2025ನೇ ಸಾಲಿನ ಮಹಾಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಹಠಯೋಗಿಗಳು, ಸಾಧುಗಳು, ಅಘೋರಿಗಳು, ಅಸಂಖ್ಯಾತ ಭಕ್ತರು ಈ ಮಹಾಕುಂಭ ಮೇಳಕ್ಕೆ ಬರುತ್ತಿದ್ದಾರೆ. ಆದರೆ, ಇಂತಹ ಮಹಾಕುಂಭ ಮೇಳದಲ್ಲಿ ಮೊನ್ನೆಯ ಮೌನಿ ಅಮವಾಸ್ಯೆಯಂದು ನಡೆಯಬಾರದ್ದ ದುರಂತ ನಡೆದು ಹೋಗಿತ್ತು. ಕಾಲ್ತುಳಿತದಲ್ಲಿ ಸಾವು ನೋವಾಗಿತ್ತು.
ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ನಿನ್ನೆ ಈ ವಿಚಾರದ ಕುರಿತು ಪ್ರಶ್ನೆ ಮಾಡಿದ್ದರು. ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿಯನ್ನು ನಡೆಸಿದ್ದರು. ಈ ದೇಶದ ಅತ್ಯಂತ ಕಲುಷಿತ ನೀರು ಎಲ್ಲಿದೆ ? ಎಂಬ ಪ್ರಶ್ನೆಯನ್ನು ಯಾರನ್ನೇ ನೀವು ಕೇಳಿದರೂ ಕೂಡ ಅದಕ್ಕೆ ಮಹಾಕುಂಭದಲ್ಲಿದೆ ಎಂದು ಉತ್ತರ ಬರುತ್ತೆ ಎಂದು ಹೇಳಿದ್ದರು. ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಶವಗಳನ್ನು ನದಿಗೆ ಎಸೆಯಲಾಗಿದೆ ಇದರಿಂದ ನೀರು ಇನ್ನೂ ಕಲುಷಿತಗೊಂಡಿದೆ ಎಂದು ಗಂಭೀರ ಆರೋಪವನ್ನು ಕೂಡ ಜಯಾ ಬಚ್ಚನ್ ಮಾಡಿದ್ದರು.

ಮುಂದುವರೆದು ಮಹಾಕುಂಭದಲ್ಲಿನ ಅಸಲಿ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ನಿಜವಾದ ಸಮಸ್ಯೆ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದಿದ್ದ ಜಯಾ ಬಚ್ಚನ್ ಜನಸಾಮಾನ್ಯರಿಗೆ ಅಲ್ಲಿ ಮೂಲ ಸೌಕರ್ಯಗಳಿಲ್ಲ ವಿಶೇಷ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಹೇಳಿದ್ದರು. ಅಲ್ಲಿ ಸಾಮಾನ್ಯ ಅಥವಾ ಬಡ ಜನರನ್ನು ಕಡೆಗಣಿಸಿ ಕೇವಲ ವಿಐಪಿ ಜನರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಕಿಡಿ ಕಾರಿದ್ದರು.
ಪ್ರಸ್ತುತ ಮಹಾಕುಂಭದಲ್ಲಿ ಹಿಂದೆಂದೂ ಇರದ ಕಲುಷಿತ ನೀರು ಇದೆ, ಮೃತ ದೇಹಗಳನ್ನು ನದಿಗೆ ಎಸೆದ ಪರಿಣಾಮ ನೀರು ಕಲುಷಿತಗೊಂಡಿದೆ ಆದರೆ ಅದೇ ನೀರನ್ನು ಸಾಮಾನ್ಯ ಜನರಿಗೆ ಪೂರೈಸಲಾಗುತ್ತಿದೆ ಎಂದು ಹೇಳಿದ್ದ ಜಯಾ ಬಚ್ಚನ್ ವಾಸ್ತವದ ಸಮಸ್ಯೆಗಳಿಗೆ ಯೋಗಿ ಸರ್ಕಾರ ಯಾವುದೇ ಉತ್ತರವನ್ನು ನೀಡುತ್ತಿಲ್ಲ ಎಂದು ಹೇಳಿದ್ದರು.
ಇನ್ನು ಕುಂಭ ಮೇಳಕ್ಕೆ ಹರಿದು ಬರುತ್ತಿರುವ ಜನ ಸಾಗರದ ಕುರಿತು ಕೂಡ ಪ್ರಶ್ನೆಯನ್ನು ಮಾಡಿದ್ದ ಜಯಾ ಬಚ್ಚನ್ 34 ಕೋಟಿಗೂ ಅಧಿಕ ಜನ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನ ಸೇರಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದ್ದರು.
ಜಯಾ ಬಚ್ಚನ್ ಅವರ ಈ ಹೇಳಿಕೆಯ ಕುರಿತು ಸದ್ಯ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಒಂದು ವರ್ಗ ಜಯಾ ಬಚ್ಚನ್ ಪರ ವಕಾಲತ್ತು ವಹಿಸಿದರೆ ಮತ್ತೊಂದು ವರ್ಗ ಜಯಾ ಬಚ್ಚನ್ ವಿರುದ್ಧ ಕಿಡಿ ಕಾರುತ್ತಿದೆ. ಇದರ ನಡುವೆ ಈಗ ಭಾರತದ ಖ್ಯಾತ ಗಾಯಕ ಸೋನು ನಿಗಂ, ಜಯಾ ಬಚ್ಚನ್ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜಯಾ ಬಚ್ಚನ್ ಮಾತನಾಡಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಸೋನು ನಿಗಂ ಜಯಾ ಬಚ್ಚನ್ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರೇ ಅವರನ್ನು ಉತ್ತಮವಾದ ವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಸೋನು ನಿಗಂ ಅವರ ಈ ಮಾತಿಗೆ ಅನೇಕರು ಸಮ್ಮತಿಯನ್ನು ಸೂಚಿಸಿದ್ದು, ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ಒಬ್ಬರು ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗದ ವ್ಯಕ್ತಿ ಬೇರೆಯವರಿಗೆ ಸಲಹೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದರೆ ದೆಹಲಿ, ಮುಂಬೈ, ಲಕ್ನೋ ಮತ್ತು ಪಾಟ್ನಾದಲ್ಲಿ ಕುಳಿತುಕೊಂಡು ಮಹಾಕುಂಭದಲ್ಲಿನ ಸಮಸ್ಯೆಯ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ, ಆದರೆ ಕುಂಭಕ್ಕೆ ಭೇಟಿ ನೀಡಿದವರು ಅಲ್ಲಿನ ವ್ಯವಸ್ಥೆಗಳಿಂದ ಸಂತೃಪ್ತರಾಗಿದ್ದಾರೆ, ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಟ್ವಿಟ್ ವೈರಲ್ ಆಗುತ್ತಿದ್ದಂತೆಯೇ ಆ ವ್ಯಕ್ತಿ ನಾನಲ್ಲ, ನಾನು ಎಕ್ಸ್ { ಟ್ವಿಟರ್ } ನಲ್ಲಿ ಇಲ್ಲವೇ ಇಲ್ಲ ಎಂದು ಸೋನು ನಿಗಂ ಹೇಳಿದ್ದಾರೆ. ನನ್ನ ಭಾವ ಚಿತ್ರಗಳನ್ನು ಬಳಸಿಕೊಂಡು ನನ್ನ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಇಲ್ಲ ಸಲ್ಲದ ಟ್ವಿಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ತಮ್ಮ ಹೆಸರಿನಲ್ಲಿ ವ್ಯಕ್ತಿಯೊಬ್ಬ ಟ್ವಿಟ್ ಮಾಡುತ್ತಿರುವ ವಿಚಾರ ಗೊತ್ತಿದ್ದರು ಕೂಡ ಸೋನು ನಿಗಂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯಾಕೆ ಎನ್ನುವುದು ಸದ್ಯಕ್ಕೆ ಹಲವರ ಪ್ರಶ್ನೆ.


Click it and Unblock the Notifications











