ಲೈವ್ ಕಾನ್ಸರ್ಟ್ ವೇಳೆಯೇ ದಿಢೀರ್ ಆಸ್ಪತ್ರೆ ಸೇರಿದ ಗಾಯಕ ಸೋನು ನಿಗಮ್
ಖ್ಯಾತ ಗಾಯಕ ಸೋನು ನಿಗಮ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ನಿನ್ನೆ(ಫೆಬ್ರವರಿ 2) ಸಂಜೆ ಪುಣೆಯಲ್ಲಿ ಲೈವ್ ಕಾನ್ಸರ್ಟ್‌ನಲ್ಲಿ ಅವರು ಹಾಡಬೇಕಿತ್ತು. ಅದಕ್ಕೂ ಮುನ್ನ ಬೆನ್ನು ನೋವಿನಿಂದ ಬಳಲಿದ್ದರು. ಕೊಂಚ ವಿಶ್ರಾಂತಿ ಪಡೆದು ಮಸಾಜ್ ಮಾಡಿಸಿಕೊಂಡು ವೇದಿಕೆ ಏರಿದ್ದರು. ಆದರೂ ಅರ್ಧಕ್ಕೆ ಹಾಡು ನಿಲ್ಲಿಸಿ ಆಸ್ಪತ್ರೆ ಸೇರುವಂತಾಯಿತು.
ಬೆನ್ನು ನೋವಿನ ಸಮಸ್ಯೆ ಬಗ್ಗೆ ಸೋನು ನಿಗಮ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಒಂದು ವೀಡಿಯೋ ಮಾಡಿ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದರು. "ಈ ವರ್ಷ ಅಪಘಾತಗಳು ಹಾಗೂ ವೈದ್ಯಕೀಯ ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ಕೆಲವರು ಭವಿಷ್ಯ ಹೇಳಿದ್ರು. ಅದು ನಿಜ ಎಂದು ನಾನು ಭಾವಿಸುತ್ತೇನೆ. ಪುಣೆಯಲ್ಲಿ ನಾನು ಹೀಗೆ ವೇದಿಕೆಗೆ ಹೋಗುವಂತಾಗಿದೆ. ಇದು ತುಂಬಾ ಕಷ್ಟಕರವಾದ ವೃತ್ತಿ. ಸರಸ್ವತಿ ದೇವಿನನ್ನ ಕೈಯನ್ನು ಇನ್ನಷ್ಟು ಬಲವಾಗಿ ಹಿಡಿಯಲಿ" ಎಂದು ಬರೆದುಕೊಂಡಿದ್ದರು.

ಸೋನು ನಿಗಮ್ ವೀಡಿಯೋ ನೋಡಿ ಎಲ್ಲರೂ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದರು. ಸಂಜೆ ವೇಳೆಗೆ ಅಂತೂ ಇಂತೂ ವೇದಿಕೆ ಏರಿದ್ದರು. ಹಾಡು ಹಾಡಿ ಜೋಶ್‌ನಿಂದ ಕುಣಿಯುತ್ತ ಎಲ್ಲರನ್ನು ರಂಜಿಸುತ್ತಿದ್ದರು. ನೋವಿನ ನಡುವೆಯೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಾರೆ. ನಡುವೆಯೇ ನೋವು ತಾಳಲಾರದೇ ವೇದಿಕೆ ಇಳಿದು ಬಂದಿದ್ದಾರೆ. ವೇದಿಕೆ ಹಿಂಭಾಗದಲ್ಲೇ ವ್ಯಾಯಾಮ ಮಾಡಿ ನೋವು ನಿವಾರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಸೋನು ತಮ್ಮ ಬೆನ್ನು ನೋವಿನ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. "ಇದು ನನ್ನ ಜೀವನದ ಬಹಳ ಕಷ್ಟಕರ ದಿನ. ನಾನು ಹಾಡುತ್ತಾ ವೇದಿಕೆ ಮೇಲೆ ಓಡಾಡುತ್ತಿದ್ದೆ. ಇದ್ದಕ್ಕಿದಂತೆ ನೋವು ಕಾಣಿಸಿಕೊಂಡಿತ್ತು. ಹೇಗೋ ಸಂಭಾಳಿಸಿದೆ. ಜನ ಏನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಮ್ಮಿ ಕೊಡಲು ನನಗೆ ಇಷ್ಟವಿಲ್ಲ. ಅತಿಯಾದ ನೋವು ಕಾಣಿಸಿಕೊಂಡಿತ್ತು. ಬೆನ್ನುಹುರಿಗೆ ಇಂಜೆಕ್ಷನ್ ಕೊಟ್ರು ಅನ್ನಿಸುತ್ತದೆ. ಕೊಂಚ ಅಲುಗಾಡಿದರೂ ಬಹಳ ನೋವಾಗುತ್ತಿತ್ತು" ಎಂದು ವಿವರಿಸಿದ್ದಾರೆ.
"ಆ ಸರಸ್ವತಿಯೇ ನನ್ನ ಕೈ ಹಿಡಿದಳು" ಎಂದು ಕ್ಯಾಪ್ಷನ್ ಕೊಟ್ಟು ಸೋನು ನಿಗಮ್ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಸೋನು ನಿಗಮ್ ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತ ಸಿನಿಮಾಗಳಲ್ಲಿ ಕೂಡ ಹಾಡಿದ್ದಾರೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಗೀತೆಗಳಿಗೆ ದನಿಯಾಗಿದ್ದಾರೆ. ತಮ್ಮದೇ ಬ್ಯಾಂಡ್ ಹೊಂದಿರುವ ಸೋನು ಸಂಗೀತ ಸಂಜೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.
ಕನ್ನಡದ ಮೇಲೆ ಸೋನು ನಿಗಮ್‌ಗೆ ಬಹಳ ಅಭಿಮಾನವಿದೆ. ಕನ್ನಡದ ಮನೆಮಗ ಎನ್ನುವಂತಾಗಿಬಿಟ್ಟಿದ್ದಾರೆ. ಕನ್ನಡ ಸಂಗೀತ ಪ್ರೇಮಿಗಳು ಅವರ ಕಂಠಕ್ಕೆ ಮಾರು ಹೋಗಿದ್ದಾರೆ. 'ಮುಂಗಾರು ಮಳೆ' ಚಿತ್ರದ 'ಅನಿಸುತ್ತಿದೆ ಯಾಕೋ' ಹಾಡು ದೊಡ್ಡ ಬ್ರೇಕ್ ಕೊಟ್ಟಿತ್ತು. 'ಸ್ಪರ್ಶ' ಚಿತ್ರದಿಂದಲೇ ಕನ್ನಡದಲ್ಲಿ ಹಾಡಲು ಆರಂಭಿಸಿದರು. ಆದರೆ 'ಮುಂಗಾರು ಮಳೆ' ಬಳಿಕ ಹೆಚ್ಚು ಜನಪ್ರಿಯತೆ ಗಳಿಸಿದರು. ಅದಕ್ಕೂ ಮುನ್ನ 'ಹುಚ್ಚ' ಚಿತ್ರದ 'ಉಸಿರೇ ಉಸಿರೇ', 'ಮೆಜೆಸ್ಟಿಕ್' ಚಿತ್ರದ 'ಮುದ್ದು ಮನಸೇ' ಸೇರಿ ಹಲವು ಹಿಟ್ ಗೀತೆಗಳಿಗೆ ದನಿಯಾಗಿದ್ದರು.


Click it and Unblock the Notifications











