ಕೊರೊನಾ ಲಸಿಕೆ ಪಡೆದ ಬಾಲಿವುಡ್ ನಟ ಸೋನು ಸೂದ್
ಜನಸಾಮಾನ್ಯರ ಪಾಲಿಗೆ ಸೂಪರ್ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಅವರು ಬುಧವಾರ ಪಂಜಾಬಿನ ಅಮೃತಸರದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡರು.
ನೆಟ್‌ವರ್ಕ್ 18 ಮತ್ತು ಫೆಡರಲ್ ಬ್ಯಾಂಕ್ ಜೊತೆಯಾಗಿ ಆರಂಭಿಸಿರುವ ಭಾರತದ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವ ''ಸಂಜೀವನಿ - ಎ ಶಾಟ್ ಆಫ್ ಲೈಫ್' ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿರುವ ಸೋನು ಸೂದ್ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ''ಸಮಾಜದಿಂದ ದೂರ ಉಳಿದ ಎಲ್ಲಾ ವರ್ಗದ ಜನರಿಗೆ ತಲುಪುವ ಈ ಅಪರೂಪದ ಅಭಿಯಾನದ ಒಂದು ಭಾಗವಾಗಲು ನನಗೆ ಅಪಾರ ಸಂತೋಷವಿದೆ. ವ್ಯಾಕ್ಸಿನೇಷನ್ ಮತ್ತು ರೋಗ ನಿರೋಧಕತೆಯ ಮಹತ್ವದ ಬಗ್ಗೆ ಜನರಿಗೆ ತಿಳಿದಿರುವುದನ್ನು ಖಚಿತ ಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಪ್ರಯತ್ನದಲ್ಲಿ, ನಾವೆಲ್ಲರೂ ಒಗ್ಗೂಡಿ ಸಮಾಜದ ಸುಧಾರಣೆಯತ್ತ ಕೆಲಸ ಮಾಡಬೇಕು'' ಎಂದು ಸಂತಸ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದಿಂದ ಜನಸಾಮಾನ್ಯರಿಂದ ಚಾಂಪಿಯನ್ ಎಂದು ಗುರುತಿಸಿಕೊಂಡಿರುವ ಸೋನು ಸೂದ್, ಲಾಕ್‌ಡೌನ್ ಆರಂಭವಾದ ಬಳಿಕ ದೇಶದ ವಲಸಿಗರಿಗೆ ಮಾರ್ಗದರ್ಶಕರಾಗಿದ್ದಾರೆ. ಹೊಸ ದಾರಿ ತೋರುವ ವ್ಯಕ್ತಿಯಾಗಿದ್ದಾರೆ.
ಸ್ವಂತಕ್ಕೆ ಯಾವುದೇ ಲಾಭ ಇಲ್ಲದಿದ್ದರೂ, ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿಕೊಟ್ಟು ಅವರು ಸುರಕ್ಷಿತವಾಗಿ ಮನೆಗೆ ತಲುಪುವಂತೆ ನೋಡಿಕೊಂಡರು. ಇದೀಗ ಇನ್ನೊಂದು ಬಾರಿ ಸಾಮಾಜಿಕ ಜವಾಬ್ದಾರಿ ತೋರಿಸುವ ಅವಕಾಶ ಅವರಿಗೆ ಲಭಿಸಿದ್ದು, 'ಸಂಜೀವನಿ - ಎ ಶಾಟ್ ಆಫ್ ಲೈಫ್' ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ನೆಟ್‌ವರ್ಕ್ 18 ಮತ್ತು ಫೆಡರಲ್ ಬ್ಯಾಂಕ್‌ನ ಒಂಬತ್ತು ತಿಂಗಳ ಈ ಸುದೀರ್ಘ ಅಭಿಯಾನವನ್ನು ಮೂರು ಉದ್ದೇಶಗಳಿಂದ ರೂಪಿಸಲಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು, ಲಸಿಕೆಯ ಕುರಿತಾದ ಹಿಂಜರಿಕೆಯನ್ನು ಹೋಗಲಾಡಿಸುವುದು ಮತ್ತು ಸಮಾಜದಲ್ಲಿ ಹಿಂದುಳಿದ ಹಾಗೂ ಗ್ರಾಮೀಣರಿಗೂ ಲಸಿಕೆ ದೊರೆಯುವಂತೆ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೂರದೃಷ್ಟಿ ಇಟ್ಟುಕೊಂಡಿದೆ.
ಸಾಧ್ಯವಾದಷ್ಟು ಬೇಗ ಸಮಾಜದ ಗರಿಷ್ಠ ಜನರನ್ನು ತಲುಪಲು ಮತ್ತು ಚುಚ್ಚುಮದ್ದನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ಅಭಿಯಾನವು ನೆಟ್‌ವರ್ಕ್ 18 ಮತ್ತು ಫೆಡರಲ್ ಬ್ಯಾಂಕ್ ನೇತೃತ್ವದಲ್ಲಿ ಅಮೃತಸರ, ನಾಸಿಕ್, ಇಂದೋರ್, ಗುಂಟೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ. ಈ ಪ್ರದೇಶಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಶಿಬಿರಗಳನ್ನು ಆಯೋಜಿಸಲಿದೆ.


Click it and Unblock the Notifications











