ಚುನಾವಣೆ ಕಣಕ್ಕಿಳಿದ ನಟ ಸೋನು ಸೂದ್ ಸಹೋದರಿ
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡಿದ್ದ ನಟ ಸೋನು ಸೂದ್ ತಾವು ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದರು. ಆದರೆ ಈಗ ಪರೋಕ್ಷವಾಗಿ ಚುನಾವಣಾ ರಾಜಕೀಯಕ್ಕೆ ಇಳಿದಿದ್ದಾರೆ.
ಸೋನು ಸೂದ್ ಸ್ವತಃ ತಾವು ಚುನಾವಣೆಗೆ ನಿಂತಿಲ್ಲವಾದರೂ ತಮ್ಮ ಸಹೋದರಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಸೋನು ಸೂದ್ ತಿಳಿಸಿದ್ದಾರೆ.
ಪಂಜಾಬ್‌ನ ಮೋಗಾದಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ಸೋನು ಸೂದ್, ''ನನ್ನ ಸಹೋದರಿ ಮಾಳವಿಕಾ ಸೂದ್ ಈ ಬಾರಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ'' ಎಂದು ಘೋಷಿಸಿದರು. ಆದರೆ ಯಾವ ರಾಜಕೀಯ ಪಕ್ಷದಿಂದ ಮಾಳವಿಕ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂಬುದನ್ನು ಸೋನು ಸೂದ್ ಬಹಿರಂಗಗೊಳಿಸಿಲ್ಲ.

ಸಹೋದರಿಯನ್ನು ಚುನಾವಣೆಗೆ ನಿಲ್ಲಿಸಿದ ಸೋನು ಸೂದ್
ಮುಂದಿನ ವರ್ಷಾರಂಭದಲ್ಲಿ ಪಂಜಾಬ್ ರಾಜ್ಯ ವಿಧಾನಸಭೆ ಚುನಾವಣೆ ಜರುಗಲಿದ್ದು ಪಕ್ಷಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಸ್ವತಃ ಸೋನು ಸೂದ್ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು, ಆದರೆ ಈಗ ಹಠಾತ್ತನೆ ತಮ್ಮ ಸಹೋದರಿಯನ್ನು ಚುನಾವಣೆಗೆ ನಿಲ್ಲಿಸುತ್ತಿರುವುದು ಕುತೂಹಲ ಮೂಡಿಸಿದೆ.

ರಾಜಕೀಯ ಪ್ರವೇಶದ ಮುನ್ಸೂಚನೆ
ಸೋನು ಸೂದ್ ಮೂಲತಃ ಪಂಜಾಬ್‌ನ ಮೋಗಾನವರೇ ಆಗಿದ್ದು, ಅದೇ ಕ್ಷೇತ್ರದಿಂದ ಸಹೋದರಿ ಮಾಳವಿಕ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ತಮ್ಮ ಸಹೋದರಿಯನ್ನು ಚುನಾವಣೆಗೆ ನಿಲ್ಲಿಸಲಿರುವ ಸೋನು ಸೂದ್ ಭವಿಷ್ಯದಲ್ಲಿ ತಾವೂ ಸಹ ಸಕ್ರಿಯ ರಾಜಕೀಯಕ್ಕೆ ಧುಮುಕವ ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾಲಿ ಚುನಾವಣೆಯಲ್ಲಿ ಸಹೋದರಿಯ ಪರವಾಗಿ ಪ್ರಚಾರ ಕಾರ್ಯದಲ್ಲಿ ಸಹ ಸೋನು ಸೂದ್ ಪಾಲ್ಗೊಳ್ಳಲಿದ್ದಾರೆ.

ಪಂಜಾಬ್ ಚುನಾವಣೆಯಲ್ಲಿ ಎಎಪಿ ಪ್ರಮುಖ ಪಾತ್ರ
ಸೋನು ಸೂದ್ ಇತ್ತೀಚೆಗೆ ಎಎಪಿ ಪಕ್ಷದ ಮುಖಂಡರೊಡನೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದಾರೆ. ಇದನ್ನು ಆಧರಿಸಿ ಸೋನು ಸೂದ್ ಸಹೋದರಿ ಎಎಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಊಹಿಸಲಾಗುತ್ತಿದೆ. ಎಎಪಿ ಪಕ್ಷವು ಈ ಬಾರಿಯ ಪಂಜಾಬ್ ಚುನಾವಣೆಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಲಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.

ಸೋನು ಸೂದ್ ಮೇಲೆ ಐಟಿ ದಾಳಿ
ಸೋನು ಸೂದ್ ಅನ್ನು ರಾಜಕೀಯಕ್ಕೆ ಸೆಳೆಯಲು ದೇಶದ ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಹಲವು ಪ್ರಯತ್ನಗಳನ್ನು ಮಾಡಿವೆ. ಇದನ್ನು ಸೋನು ಸೂದ್ ಸಹ ಹೇಳಿಕೊಂಡಿದ್ದಾರೆ. ಆದರೆ ಅವರು ಯಾವ ರಾಜಕೀಯ ಪಕ್ಷವನ್ನೂ ಈವರೆಗೆ ಸೇರಿಲ್ಲ. ಆದರೆ ಎಎಪಿ ಜೊತೆ ಆತ್ಮೀಯತೆ ಹೆಚ್ಚಿಸಿಕೊಂಡ ಬಳಿಕ ಸೋನು ಸೂದ್ ನಿವಾಸ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ಇದನ್ನು ಕೆಲವರು ಬಿಜೆಪಿಯ ಬೆದರಿಕೆ ತಂತ್ರವೆಂದೇ ವಿಶ್ಲೇಷಿಸಿದ್ದರು.

'ಮಸೀಯಾ ಆಫ್ ಮೈಗ್ರೆಂಟ್ಸ್'
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಸಾವಿರಾರು ಮಂದಿಗೆ ಸಹಾಯ ಮಾಡಿದ್ದರು. ತಮ್ಮ ಮಾನವೀಯ ಕಾರ್ಯಗಳಿಂದ 'ಮಸೀಯಾ ಆಫ್ ಮೈಗ್ರೆಂಟ್ಸ್' (ವಲಸಿಗರ ದೇವರು) ಎಂಬ ಹೆಸರು ಪಡೆದುಕೊಂಡಿದ್ದರು. ಸೋನು ಸೂದ್ ಸಕ್ರಿಯ ರಾಜಕೀಯ ಸೇರಬೇಕು ಎಂದು ಹಲವರು ಒತ್ತಾಯಿಸಿದ್ದರು. ಕೆಲವರು ಸೋನು ಸೂದ್ ಈ ಸಮಾಜ ಸೇವೆ ಮಾಡುತ್ತಿರುವುದೇ ರಾಜಕೀಯ ಲಾಭಕ್ಕಾಗಿ ಎಂದು ಟೀಕಿಸಿದ್ದರು ಸಹ.


Click it and Unblock the Notifications











