RCB ಕ್ಯಾಪ್ಟನ್ ಸ್ಮೃತಿ ಮಂದಾನ ಮದುವೆ ಫಿಕ್ಸ್, ಈ ಖ್ಯಾತ ಸಂಗೀತ ನಿರ್ದೇಶಕನ ಕೈ ಹಿಡಿಯಲಿದ್ದಾರೆ ನ್ಯಾಷನಲ್ ಕ್ರಶ್
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ..
ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಸ್ಮೃತಿ ಮಂದಾನ ಇನ್ನೇನು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ. ಖುದ್ದು ಸ್ಮೃತಿ ಅವರ ಭಾವಿ ಪತಿ ಪಲಾಶ್ ಮುಚ್ಚಲ್ ಈ ಮಾತನ್ನು ಹೇಳಿದ್ದಾರೆ.

ಹೌದು, ಪಲಾಶ್ ಮುಚ್ಚಲ್.. ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸಹೋದರ. ಬಾಲಿವುಡ್‌ನಲ್ಲಿ ಈಗಾಗಲೇ ಸಂಗೀತ ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿರುವ ಪಲಾಶ್ ''ಡಿಶ್ಕ್ಯಾಂವ್''.. ''ಅರ್ಧ''.. ''ಭೂತನಾಥ್ ರಿಟರ್ನ್ಸ್''.. ''ಅಮಿತ್ ಸಹಾನಿ ಕಿ ಲಿಸ್ಟ್''.. ''ಮಿಸ್ ತನಕಪುರ ಹಾಜಿರ್ ಹೋ''.. ಅಂತಹ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.
ಬಾಲಿವುಡ್‌ನ ಅತೀ ಕಿರಿಯ ಸಂಗೀತ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಪಲಾಶ್ ''ಆರ್ಧ'' ಮತ್ತು ''ಕಾಮ್ ಚಾಲೂ ಹೈ'' ಚಿತ್ರಗಳ ನಿರ್ದೇಶಕ ಕೂಡ ಹೌದು. ಸದ್ಯ ''ರಾಜು ಬಾಜೇವಾಲಾ'' ಎಂಬ ಚಿತ್ರವನ್ನು ಪಲಾಶ್ ನಿರ್ದೇಶನ ಮಾಡುತ್ತಿದ್ದಾರೆ.
ಇಂಥಾ ಪಲಾಶ್ ಮತ್ತು ಸ್ಮೃತಿ ಮಂದಾನ ಪ್ರೇಮದ ಬಲೆಯಲ್ಲಿ ಸಿಲುಕಿ ಹಲವು ವರ್ಷಗಳಾಗಿವೆ. ಹಲವು ಬಾರಿ ಇವರ ಪ್ರೇಮಕಥೆಯ ಕುರಿತು ಚರ್ಚೆ ಕೂಡ ನಡೆದಿದೆ. ಆದರೆ.. ಈ ಲವ್ ಸ್ಟೋರಿಯ ಮೇಲೆ ಮದುವೆಯ ಮುದ್ರೆ ಬೀಳುವುದು ಯಾವಾಗ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗೆ ಕೂಡ ಉತ್ತರ ಸಿಕ್ಕಿದ್ದು, ಪಲಾಶ್ ಶೀಘ್ರದಲ್ಲಿಯೇ ಸ್ಮೃತಿ ಇಂಧೋರ್‌ನ ಸೊಸೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಶುಕ್ರವಾರ ( ಅಕ್ಟೋಬರ್ 17 ) ಸ್ಟೇಟ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಮಂದಾನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಪಲಾಶ್, ಶೀಘ್ರದಲ್ಲಿಯೇ ಅವರು ಇಂಧೋರನ ಸೊಸೆಯಾಗಲಿದ್ದಾರೆ. ನಿಮಗೆ ಬೇಕಿದ್ದ ಹೆಡ್ ಲೈನ್‌ನ ನಾನು ಹೇಳಿದ್ದೇನೆ. ಸದ್ಯಕ್ಕೆ ನಾನು ಹೇಳಬೇಕಿರುವುದು ಇಷ್ಟೇ ಎಂದು ಹೇಳಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ಇಂಧೋರನಲ್ಲಿಯೇ ಇಂದು ( ಅಕ್ಟೋಬರ್ 19 ) ಇಂಗ್ಲೆಂಡ್ ಜೊತೆ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಪಂದ್ಯದ ಕುರಿತು ಕೂಡ ಮಾತನಾಡಿರುವ ಪಲಾಶ್, ಸ್ಮೃತಿ ಮಂದಾನ ಮತ್ತು ಭಾರತೀಯ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಗುಡ್ ಲಕ್. ಭಾರತ ತಂಡ ಪ್ರತಿ ಪಂದ್ಯವನ್ನು ಗೆದ್ದು ದೇಶಕ್ಕೆ ಕೀರ್ತಿ ತರಬೇಕೆಂದು ನಾನು ಸದಾ ಬಯಸುತ್ತೇನೆ ಎಂದು ಹೇಳಿದ್ದಾರೆ.
ಹೀಗೆ ಪಲಾಶ್ ಮಾತನಾಡಿದ ಬೆನ್ನಲ್ಲಿಯೇ ಇದೀಗ ಸ್ಮೃತಿ ಮಂದಾನ ಮತ್ತು ಪಲಾಶ್ ಮದುವೆ ಚರ್ಚೆಗಳು ಗರಿಗೇದರಿವೆ. ಖುದ್ದು ಪಲಾಶ್ ಶೀಘ್ರದಲ್ಲಿಯೇ ಇಂಧೋರನ ಸೊಸೆಯಾಗುತ್ತಾರೆ ಎಂದು ಹೇಳಿದ ಹಿನ್ನೆಲೆ ಈ ವಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಇಬ್ಬರು ಹಸೆಮಣೆ ಏರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಂದ್ಹಾಗೇ ಸ್ಮೃತಿ ಮತ್ತು ಪಲಾಶ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ 2019ರಲ್ಲಿ ಹಲವರಿಗೆ ಬಂದಿತ್ತು. 2019ರಿಂದ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಹಿಂಬಾಲಿಸಲು ಶುರು ಮಾಡಿದ ಇಬ್ಬರು ಹಲವು ಕಡೆ ಕಾಣಿಸಿಕೊಂಡರು.
ಆದರೆ ಎಲ್ಲಯೂ ತಮ್ಮ ಸಂಬಂಧದ ಕುರಿತು ಅಧಿಕೃತವಾಗಿ ಇಬ್ಬರು ಮಾತನಾಡಿರಲಿಲ್ಲ. ವರದಿಗಳ ಪ್ರಕಾರ ಸಹೋದರಿ ಲೈವ್ ಕನ್ಸರ್ಟ್‌ನಲ್ಲಿಯೇ ಸ್ಮೃತಿ ಅವರಿಗೆ ಹಾಡನ್ನು ಅರ್ಪಿಸಿದ್ದ ಪಲಾಶ್ ತಮ್ಮ ಸಹೋದರಿ ಪಲಕ್ ಎದುರು ಸ್ಮೃತಿ ಮಂದನಾಗೆ ಪ್ರಪೋಸ್ ಮಾಡಿದ್ದರು. 2024ರಲ್ಲಿ ತಮ್ಮ ಸಂಬಂಧ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಕೇಕ್ ಕಟ್ ಮಾಡಿ ಇಬ್ಬರು ಸಂಭ್ರಮಿಸಿದ್ದರು. ಇದೀಗ ಪಲಾಶ್ ಮುಚಲ್ ಶೀಘ್ರದಲ್ಲಿಯೇ ಮದುವೆಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ಧಾರೆ.


Click it and Unblock the Notifications











