ಕೆಲ ಚುನಾವಣೆ, ಬೆರಳೆಣಿಕೆಯಷ್ಟು ಜನ ದೇಶದ ಪ್ರಾಚೀನ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ: ಜಾವೇದ್ ಅಖ್ತರ್
"ಭಾರತದ ಆತ್ಮ ಅಮರವಾಗಿದೆ. ಯಾವುದೇ ತಾತ್ಕಾಲಿಕ ಘಟನೆಗಳು ಅದನ್ನು ನಾಶಮಾಡಲು ಸಾಧ್ಯವಿಲ್ಲ. ಕೆಲವು ಚುನಾವಣೆಗಳು ಮತ್ತು ಬೆರಳೆಣಿಕೆಯಷ್ಟು ಜನರು ದೇಶದ ಪ್ರಾಚೀನ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ಹಿಂದೂಸ್ತಾನದ ನಿಜವಾದ ಆತ್ಮ" ಎಂದು ಪದ್ಮಭೂಷಣ ಜಾವೇದ್ ಅಖ್ತರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
9ನೇ ಅಜಂತಾ ಎಲ್ಲೋರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಚಲನಚಿತ್ರೋತ್ಸವದ ಎರಡನೇ ದಿನದ ವಿಶೇಷ ಸಂದರ್ಶನದಲ್ಲಿ ಜಾವೇದ್ ಅಖ್ತರ್ ಮಾತನಾಡಿದ್ದಾರೆ. ಈ ವಿಶೇಷ ಸಂದರ್ಶನವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಜಯಪ್ರದ್ ದೇಸಾಯಿ ನಡೆಸಿಕೊಡುತ್ತಿದ್ದರು.

9ನೇ AIFF ನಲ್ಲಿ ಜಾವೇದ್ ಅಖ್ತರ್
1960 ರ ದಶಕದ ಚಲನಚಿತ್ರಗಳ ನಾಯಕ ನಟರು ವಿನಯವಂತರು, ಅಂತಹ ಹಿನ್ನೆಲೆಯಿಂದ ಬಂದವರು ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. "ಅವರಲ್ಲಿ ಹೆಚ್ಚು ಮಂದಿ ಟ್ಯಾಕ್ಸಿ ಡ್ರೈವರ್, ರಿಕ್ಷಾ ಎಳೆಯುವವರು, ಕಾರ್ಮಿಕರು ಅಥವಾ ಶಿಕ್ಷಕರಾಗಿದ್ದರು. ಇಂದಿನ ದಿನಗಳಲ್ಲಿ ಚಿತ್ರಣವೇ ಬದಲಾಗಿದೆ. ಇಂದಿನ ನಾಯಕರು ಶ್ರೀಮಂತ ಕುಟುಂಬಗಳಿಗೆ ಸೇರಿದವರು. ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಇಂದಿನ ಚಲನಚಿತ್ರಗಳು ರಾಜಕೀಯ ವಿಷಯಗಳು ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಅವರು ತಮ್ಮದೆ ವೈಯಕ್ತಿಕ ಕಥೆಗಳಲ್ಲಿ ಮಾತ್ರ ಆನಂದ ಪಡುತ್ತಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
"ಭಾಷೆ ಕೇವಲ ಸಂವಹನ ಸಾಧನವಲ್ಲ, ಇದು ಸಂಸ್ಕೃತಿಯ ನೀರಿನಿಂದ ಹರಿಯುವ ನದಿಯಾಗಿದೆ. ಜನರನ್ನು ಅವರ ಭಾಷೆಯಿಂದ ಕತ್ತರಿಸುವುದು ಮರದ ಬೇರುಗಳನ್ನು ಕತ್ತರಿಸಿದಂತೆ. ನಾವು ನಮ್ಮ ಭಾಷೆಯನ್ನು ಕಳೆದುಕೊಂಡರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಕಥೆಗಳನ್ನೂ ಕಳೆದುಕೊಳ್ಳುತ್ತೇವೆ. ಆದರೆ ದುರದೃಷ್ಟವಶಾತ್, ಇಂದು ಭಾಷೆಯ ಮಹತ್ವವನ್ನೇ ಅರ್ಥಮಾಡಿಕೊಳ್ಳದ ಜನರು ಅದರ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಅಜಂತಾ-ಎಲ್ಲೋರಾ ಗುಹೆ ನೋಡಿ ಭಾವುಕರಾದ ಜಾವೇದ್ ಅಖ್ತರ್
ಇದೇ ಸಂದರ್ಶನದಲ್ಲಿ ಮಾತನಾಡಿದ ಅವರು, ಅಜಂತಾ ಎಲ್ಲೋರಾ ಗುಹೆಗಳ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದ ಅನುಭವವನ್ನು ವಿವರಿಸಿದ್ದಾರೆ. "ಎಲ್ಲೋರಾ ಗುಹೆಗಳ ವೈಭವದ ಶಿಲ್ಪಗಳನ್ನು ನೋಡಿ ನಾನು ತುಂಬಾ ಭಾವುಕನಾಗಿದ್ದೇನೆ. ನಾನು ಅದನ್ನು ಮೊದಲೇ ಏಕೆ ನೋಡಲು ಬರಲಿಲ್ಲ ಎಂದು ಆಶ್ಚರ್ಯ ಪಡುತ್ತೇನೆ ಜೊತೆಗೆ ಈ ಬಗ್ಗೆ ತುಂಬಾ ಪಶ್ಚಾತ್ತಾಪಪಡುತ್ತೇನೆ" ಎಂದಿದ್ದಾರೆ.
"ಇಂತಹ ಸಮ್ಮೋಹನಗೊಳಿಸುವ ಕಲಾಕೃತಿಯನ್ನು ರಚಿಸಿದ ಜನರು ಅದನ್ನು ಉತ್ಸಾಹದಿಂದ ಮಾಡಿದ್ದಾರೆಯೇ ಹೊರತು ಹಣಕ್ಕಾಗಿ ಅಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ತಲೆಮಾರುಗಳ ನಂತರ ತಲೆಮಾರುಗಳು ಈ ಖುಷಿಯನ್ನು ಅನುಸರಿಸಿವೆ. ಅವರ ಬದ್ಧತೆ ಮತ್ತು ಸಮರ್ಪಣಾ ಭಾವವನ್ನು ನಾವು ಗ್ರಹಿಸಲು ಕೂಡ ಸಹ ಸಾಧ್ಯವಿಲ್ಲ. ನಾವೇನಾದರೂ ಅವರ ಉತ್ಸಾಹ ಮತ್ತು ಸಮರ್ಪಣಾ ಭಾವದ ಸಾವಿರ ಪಾಲಲ್ಲಿ ಒಂದು ಪಾಲು ಮಾಡಲು ಸಾಧ್ಯವಾದರೇ ಈ ರಾಷ್ಟ್ರವನ್ನು ಸ್ವರ್ಗವಾಗಿ ಪರಿವರ್ತಿಸುತ್ತೇವೆ" ಎಂದು ಹೇಳಿದ್ದಾರೆ.
9ನೇ ಅಜಂತಾ-ಎಲ್ಲೋರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಅನುಭವ್ ಸಿನ್ಹಾ, ಎಐಎಫ್‌ಎಫ್ ಸಂಘಟನಾ ಸಮಿತಿ ಸಂಸ್ಥಾಪಕ ಮತ್ತು ಅಧ್ಯಕ್ಷ ನಂದಕಿಶೋರ್ ಕಗ್ಲಿವಾಲ್, ಎಂಜಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಲಾಸ್ ಸಪ್ಕಾಲ್, ಉತ್ಸವದ ನಿರ್ದೇಶಕ ಅಶೋಕ್ ರಾಣೆ, ನಿರ್ದೇಶಕ ಚಂದ್ರಕಾಂತ್ ಕುಲಕರ್ಣಿ ಸೇರಿದಂತೆ ಅಪಾರ ಸಂಖ್ಯೆಯ ಕಲಾವಿದರು ಪಾಲ್ಗೊಂಡಿದ್ದರು.


Click it and Unblock the Notifications











