ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಜೊತೆ ಶ್ರೀಲೀಲಾ ರೋಮ್ಯಾನ್ಸ್...?
ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿದವರಲ್ಲಿ ಶ್ರೀಲೀಲಾ ಕೂಡಾ ಒಬ್ಬರು ಮತ್ತು ಪ್ರಮುಖರು. ರಶ್ಮಿಕಾ ಮಂದಣ್ಣ ನಂತರ ಒಂದಾದ ಮೇಲೊಂದರಂತೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆ ಕೂಡ ಇವರದ್ದೇ.
ಧಮಾಕಾ ಚಿತ್ರದ ಮೂಲಕ ರವಿತೇಜಾ ಜೊತೆ ಟಾಲಿವುಡ್‌ಗೆ ಧಮಾಕೇಧಾರ್ ಎಂಟ್ರಿ ಕೊಟ್ಟಿದ್ದ ಶ್ರೀಲೀಲಾ , ಕೇವಲ ಒಂದೂವರೆ ವರ್ಷದಲ್ಲಿಯೇ ಅರ್ಧ ಡಜನ್ ತೆಲುಗು ಹೀರೋಗಳ ಜೊತೆ ಕಾಣಿಸಿಕೊಂಡು ದಾಖಲೆ ಬರೆದರು. ಕಳೆದ ಕೆಲ ದಿನಗಳಿಂದ.. ತಮ್ಮ ಚಿತ್ರ ಚಟುವಟಿಕೆಗಳಿಗೆ ಅಲ್ಪ ವಿರಾಮ ಹಾಕಿದ್ದರು. ಸೋಲುಗಳಿಂದ ಪಾಠ ಕಲಿತು ಲೆಕ್ಕ ಹಾಕಿ ಚಿತ್ರ ಆಯ್ಕೆ ಮಾಡಿಕೊಳ್ಳಲು ಮುಂದಾದರು. ಆ ಪೈಕಿ ಈಗ ರವಿತೇಜಾ ಜೊತೆ ಇನ್ನೊಂದು ಚಿತ್ರವನ್ನ ಶ್ರೀಲೀಲಾ ಮಾಡುತ್ತಿದ್ದಾರೆ.

ಇಂಥ ಶ್ರೀಲೀಲಾ ಈಗ ಟಾಲಿವುಡ್ಡಿಗೂ ಟಾಟಾ ಹೇಳಿ ರಶ್ಮಿಕಾ ಮಂದಣ್ಣ ಅವರಂತೆಯೇ ಬಾಲಿವುಡ್‌ನ ಪ್ಲೈಟ್ ಹತ್ತಲು ಸಿದ್ಧರಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಸೌತ್ To ನಾರ್ತ್ ಕೇಳಿ ಬರುತ್ತಿದೆ.
ಇನ್ನೂ ಅಪ್ಪ ಸ್ಟಾರ್ ಆದರೆ ಮಗನೂ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿಯಾಗುವುದು ಈಗೀಗ ಕಾಮನ್ನು. ಇದಕ್ಕೆ ಕೈಗನ್ನಡಿ ಎಂಬಂತೆ ಬಾಲಿವುಡ್‌ನ ಚೋಟೆ ನವಾಬ್ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಕೂಡ ಬಣ್ಣದ ಪ್ರಪಂಚಕ್ಕೆ ಬರಲು ಸಕಲ ತಯಾರಿಗಳನ್ನ ಮಾಡಿಕೊಂಡು ಸಿದ್ಧರಾಗಿದ್ದಾರೆ. ಡೈಲರ್ ಎಂಬ ಚಿತ್ರವನ್ನ ಒಪ್ಪಿಕೊಂಡು ಈ ಆಗಸ್ಟ್‌ನಿಂದ ಅಖಾಡಕ್ಕಿಳಿಯಲಿದ್ದಾರೆ. ಇದೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅನ್ನುವ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ. ಶ್ರೀಲೀಲಾ ಜೊತೆ ಮಾತುಕಥೆ ಕೂಡ ನಡೆದಿದ್ದು ಬಂದ ಈ ಸುವರ್ಣ ಅವಕಾಶದಿಂದ ಶ್ರೀಲೀಲಾ ಥೈ ಥಕ ಕುಣಿ..ಕುಣಿ..ಕುಣಿದಿದ್ದಾರೆ ಅನ್ನುವ ಸುದ್ದಿಯೂ ಕೂಡ ಪಕ್ಕದ ಆಂಧ್ರದಲ್ಲಿ ಕೇಳಿ ಬರುತ್ತಿದೆ.

ಅಂದ್ಹಾಗೇ ಹಿಂದೊಮ್ಮೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಚಿತ್ರರಂಗಕ್ಕಿಂತ ಕ್ರಿಕೆಟ್ ನಲ್ಲಿ ತುಸು ಹೆಚ್ಚೇ ಆಸಕ್ತಿ ಇದೆ ಅನ್ನುವ ಸುದ್ದಿ ಸದ್ದು ಮಾಡಿತ್ತು. ಇದಕ್ಕೆ ಪೂರಕವಾಗಿ ಇಬ್ರಾಹಿಂ ಮುಂಬೈ ಜಿಮ್ ಖಾನದಲ್ಲಿ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದ ಫೋಟೋ ವೈರಲ್ ಆಗಿತ್ತು. ಇನ್ನು ನಿಮಗೆ ಗೊತ್ತು ಸೈಫ್- ಅಮೃತಾ ದಂಪತಿ ಮಗಳು ಸಾರಾ ಅಲಿ ಖಾನ್ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿಯೇ ಕ್ರಿಕೆಟ್ ಲೋಕದಲ್ಲಿ ಒಂದು ಕೈ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಇಬ್ರಾಹಿಂ ಬಂದಿದ್ದಾರೆ. ಕ್ರಿಕೆಟ್ ಕೈ ಹಿಡಿಯದಿದ್ದರೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ನವಾಬ ಕುಡಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬೆಲ್ಲ ಸುದ್ದಿ ಕೇಳಿ ಬಂದಿತ್ತು.ಅದೃಷ್ಟ ಅಲ್ಲಿ ಕೈಹಿಡಿಯಲಿಲ್ಲವಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಇಬ್ರಾಹಿಂ ಮೈದಾನದ ಹೊರ ಬಂದು ಚಿತ್ರರಂಗ ಎಂಬ ಮಾಯಾಪ್ರಪಂಚಕ್ಕೆ ಬರಲು ಸಿದ್ಧರಾಗಿದ್ದಾರೆ
ಉಳಿದಂತೆ ಈ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಮತ್ತು ಶ್ರೀಲೀಲಾ ಅಭಿನಯದ ಈ ಚಿತ್ರಕ್ಕೆ ನಿರ್ದೇಶಕ ಯಾರು, ನಿರ್ಮಾಪಕ ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ. ಹರಿದಾಡುತ್ತಿರುವ ಈ ಸುದ್ದಿಯ ಕುರಿತು ಶ್ರೀಲೀಲಾ ಕೂಡ ಇನ್ನೂ ಏನು ಮಾತನಾಡಿಲ್ಲ.


Click it and Unblock the Notifications











