ರಶ್ಮಿಕಾ ಮಂದಣ್ಣ ಬೆನ್ನಲ್ಲೇ ಬಾಲಿವುಡ್‌ನಲ್ಲಿ ಶ್ರೀಲೀಲಾ ದಂಡಯಾತ್ರೆ, ಲೇಡಿ ಬಾಂಡ್ ಆದ 'ಕಿಸ್' ಚೆಲುವೆ
ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ. ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಕೂಡ ಆ ಕಾಲದಲ್ಲಿ..
ಹತ್ ಹತ್ರ 90 ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ ''ಕಿಸ್'' ಚಿತ್ರದಿಂದ ಶ್ರೀಲೀಲಾ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದಾಚೆ ''ಭರಾಟೆ''.. ''ಬೈ ಟು ಲವ್''.. ಚಿತ್ರಗಳನ್ನು ಮಾಡಿದ ಶ್ರೀಲೀಲಾ ಆ ನಂತರ ಸೀದಾ ಹೋಗಿದ್ದು ಆಂಧ್ರ ಪ್ರದೇಶಕ್ಕೆ.

ಅಲ್ಲಿ ''ಧಮಾಕಾ'' .. ''ಭಗವಂತ್ ಕೇಸರಿ'' .. ''ಆದಿಕೇಶವ'' .. ''ಎಕ್ಸ್ಟ್ರಾ ಆರ್ಡಿನರಿ ಮ್ಯಾನ್''.. ''ಸ್ಕಂದ''.. ''ಗುಂಟೂರು ಖಾರಂ''..ಹೀಗೆ ಒಂದಾದ ಮೇಲೊಂದರಂತೆ ಸಿನಿಮಾ ಮಾಡಿದ ಶ್ರೀಲೀಲಾ ಸದ್ಯ ರಶ್ಮಿಕಾ ಮಂದಣ್ಣ ಅವರಂತೆಯೇ ಬಾಲಿವುಡ್ ನಲ್ಲಿ ಬಿಡಾರ ಹೂಡಿದ್ದಾರೆ.
ಕಾರ್ತಿಕ್ ಆರ್ಯನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್, ವರುಣ್ ಧವನ್ ಜೊತೆ ಕೂಡ ಸಿನಿಮಾ ಮಾಡ್ತಿದ್ದಾರೆ ಎನ್ನುವ ಸುದ್ದಿ ಇದೆ.
ಇಷ್ಟೇ ಅಲ್ಲ ರಣ್ವೀರ್ ಸಿಂಗ್ ಅವರ ಚಿತ್ರಕ್ಕೂ ಕೂಡ ಶ್ರೀಲೀಲಾ ನಾಯಕಿ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಸದ್ಯ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು ತೀವೃ ಕುತೂಹಲ ಮೂಡಿಸಿದೆ. ಯಾಕೆಂದರೆ.. ಬಿಡುಗಡೆಯಾದ ಈ ಪೋಸ್ಟರ್‌ನಲ್ಲಿ ಹಿಂದೆಂದೂ ಕಾಣಿಸದ ರಗಡ್ ರೂಪದಲ್ಲಿ ಶ್ರೀಲೀಲಾ ಪ್ರತ್ಯಕ್ಷರಾಗಿದ್ಧಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಏಜೆಂಟ್ ಮಿರ್ಚಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶ್ರೀಲೀಲಾ ರೆಡಿ, ಸ್ಟಡಿ, ಫೈರ್ ಅಕ್ಟೋಬರ್ 19ರಂದು ಬೆಂಕಿ ಹಚ್ಚಿ ಎಂದು ಹೇಳಿದ್ದಾರೆ. ಇನ್ನು ವಿಶೇಷ ಅಂದರೆ ನಿನ್ನೆಯಷ್ಟೇ ಬಾಬಿ ಡಿಯೋಲ್ ಅವರ ಪೋಸ್ಟರ್ ಕೂಡ ಒಂದು ಬಿಡುಗಡೆಯಾಗಿದೆ. ಬಾಬಿಯ ಪೋಸ್ಟರ್ ಮತ್ತು ಶ್ರೀಲೀಲಾರ ಪೋಸ್ಟರ್ ಥೀಮ್ ಒಂದೇ ಇರುವ ಹಿನ್ನೆಲೆ ಶ್ರೀಲೀಲಾ.. ರಣ್ವೀರ್ ಸಿಂಗ್ ಚಿತ್ರದಲ್ಲಿ ಬಾಬಿ ಡಿಯೋಲ್ ಕೂಡ ಇದ್ದಾರಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಸ್ಪಷ್ಟವಾದ ಉತ್ತರ ಅಕ್ಟೋಬರ್ 19ರಂದು ಸಿಗಲಿದೆ. ಚಿತ್ರದ ಹೆಸರು, ನಿರ್ದೇಶಕರ ಹೆಸರು ಮತ್ತು ಉಳಿದ ವಿವರಗಳು ಅವತ್ತೇ ಬಹಿರಂಗವಾಗುವ ಸಾಧ್ಯತೆ ಇದೆ.

ಸದ್ಯ ಶ್ರೀಲೀಲಾ ಅವರ ಈ ಹೊಸ ಅವತಾರಕ್ಕೆ ಹಲವರು ಮನಸೋತಿದ್ಧಾರೆ. ''ಲೇಡಿ ಜೇಮ್ಸ್ ಬಾಂಡ್'' ಎಂದು ಶ್ರೀಲೀಲಾ ಅವರಿಗೆ ಬಿರುದು ನೀಡಲು ಶುರು ಮಾಡಿದ್ದಾರೆ. ಲೀಲಾ ಆನ್ ಫೈಯರ್ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೊತೆಯಾಗಿ ಅಭಿನಯಿಸಿರುವ ಚಿತ್ರವನ್ನು ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಅನುರಾಗ್ ಬಸು ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲವಾದರೂ ಅನೇಕರು ''ಆಶಿಕಿ 3'' ಎಂದು ನಾಮಕರಣ ಮಾಡಿದರೆ ಸೂಕ್ತವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಈ ಚಿತ್ರ ಹೊರತು ಪಡಿಸಿದರೆ ಶ್ರೀಲೀಲಾ ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿನಯದ ''ಉಸ್ತಾದ್ ಭಗತ್ ಸಿಂಗ್'' ಮತ್ತು ಶಿವಕಾರ್ತಿಕೆಯನ್ ಅಭಿನಯದ ''ಪರಾಶಕ್ತಿ'' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರವಿತೇಜಾ ಜೊತೆ ''ಮಾಸ್ ಜಾತಾರಾ'' ಚಿತ್ರದಲ್ಲಿಯೂ ಕೂಡ ಶ್ರೀಲೀಲಾ ಅವರನ್ನು ಇವರ ಅಭಿಮಾನಿಗಳು ನೋಡಬಹುದು.


Click it and Unblock the Notifications











