ನಮ್ಮ ಸಮಾಜಕ್ಕೆ ಈ ಪುರುಷರೇ ಕಳಂಕ ; ತನ್ನ ಅಶ್ಲೀಲ ಫೋಟೊ ನೋಡಿ ಕೆರಳಿ ಕೆಂಡವಾದ ನಟಿ
ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ. ಹೆಸರೇ ಗೊತ್ತಾಗದಂತೆ ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಬೇರೆ ಯಾವದ್ದೋ ಖಾತೆಯಲ್ಲಿ ಹಂಚಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಇದಕ್ಕೆಲ್ಲ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಉರ್ಫಿ ಜಾವೇದ್‌ಗೆ ಇತ್ತೀಚೆಗೆ ಆದ ಅನುಭವ ಮತ್ತೊಂದು ಉದಾಹರಣೆ.
ಹೌದು, ಉರ್ಫಿ ಜಾವೇದ್.. ಬಾಲಿವುಡ್‌ನ ಚೆಲುವೆ. ಸದಾ ಕಾಲ ತಮ್ಮ ಬಟ್ಟೆಯ ಮೂಲಕವೇ ಸುದ್ದಿ ಮಾಡುವ ಉರ್ಫಿ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಸ್ತುವಾಗಿದ್ದಾರೆ.

ಆದರೆ ಟ್ರೋಲ್ ಕೂಡ ಕೆಲವರಿಗೆ ಮಜಾ ಕೊಡುತ್ತೆ. ಸುದ್ದಿಯಲ್ಲಿದ್ದರೆ ಸಾಕು ಎಂಬ ಭಾವನೆ ಇದಕ್ಕೆ ಕಾರಣ. ಇದೇ ಮನೋಭಾವದ ಉರ್ಫಿಗೆ ಸದ್ಯ ಸೋಶಿಯಲ್ ಮೀಡಿಯಾ ಮೂಲಕ ಒಬ್ಬ ವ್ಯಕ್ತಿ ಕಿರುಕುಳ ನೀಡುತ್ತಿದ್ದಾನೆ. ಫೋಟೊಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದ್ದಾನೆ. ಇಷ್ಟೇ ಅಲ್ಲ ಫೋಟೊವೊಂದನ್ನು ಎಡಿಟ್ ಮಾಡಿ ಅದನ್ನು ನೇರವಾಗಿ ಸ್ಯಾಂಪಲ್ ಎಂಬಂತೆ ಉರ್ಫಿಗೆ ಕಳುಹಿಸಿದ್ದಾನೆ.
ಇದರಿಂದ ಕೆರಳಿ ಕೆಂಡವಾಗಿರುವ ಉರ್ಫಿ ಜಾವೇದ್ ಸದ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮಗೆ ಕಿರುಕುಳ ನೀಡುತ್ತಿದ್ದವನ ಜನ್ಮ ಜಾಲಾಡಿದ್ದಾರೆ. ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ಉರ್ಫಿ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡು ಈ ಪುರುಷರು ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲರು ಎಂಬ ವಿಚಾರವನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ನಾನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ಈ ವ್ಯಕ್ತಿಯ ವಿರುದ್ಧ ನಾನು ಪೊಲೀಸರಿಗೆ ದೂರು ಸಲ್ಲಿಸಲಿದ್ದೇನೆ ಎಂದು ಹೇಳಿರುವ ಉರ್ಫಿ ಜಾವೇದ್, ಮಹಿಳೆಯರೇ ಇಂತಹ ಸಂದರ್ಭ ನಿಮಗೆ ಎದುರಾದರೆ ಯಾರೆಂದರೆ ಯಾರಿಗೂ ಹೆದರಬೇಡಿ, ಮುಲಾಜಿಲ್ಲದೇ ನೇರವಾಗಿ ಹೋಗಿ ದೂರು ದಾಖಲಿಸಿ ಎಂದು ಕರೆಯನ್ನು ಕೂಡ ನೀಡಿದ್ದಾರೆ. ನಮ್ಮ ಸಮಾಜಕ್ಕೆ ಈ ಪುರುಷರೇ ಕಳಂಕ ಎಂದು ಕಿಡಿ ಕಾರಿದ್ದಾರೆ.
ಸದ್ಯ ಹಲವಾರು ಜನ ಉರ್ಫಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅಶ್ಲೀಲ ಮೆಸೇಜ್ ಮತ್ತು ಫೋಟೊ ಕಳುಹಿಸಿದ ವ್ಯಕ್ತಿಯನ್ನು ಬಿಡಬೇಡಿ, ದೂರು ಸಲ್ಲಿಸಿ ಎಂದು ಹೇಳುತ್ತಿದ್ಧಾರೆ. ಉರ್ಫಿ ಹಂಚಿಕೊಂಡ ಆ ವ್ಯಕ್ತಿಯ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಇನ್ನುಳಿದಂತೆ ಉರ್ಫಿ ಜಾವೇದ್ '' ದಿ ಟ್ರೇಟರ್ಸ್'' ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ನಿಕಿತಾ ಲೂಥರ್ ಅವರ ಜೊತೆ ಸೇರಿ ಈ ಕಾರ್ಯಕ್ರಮವನ್ನು ಗೆದ್ದರು ಕೂಡ. 70.5 ಲಕ್ಷ ಹಣ ಈ ಕಾರ್ಯಕ್ರಮದ ಮೂಲಕ ಉರ್ಫಿಗೆ ಸಿಕ್ಕಿತ್ತು. ಅಮೆಜಾನ್ ಫ್ರೈಮ್‌ನಲ್ಲಿ ಪ್ರಸಾರವಾಗಿದ್ದ ಈ ರಿಯಾಲಿಟಿ ಶೋವನ್ನು ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಉರ್ಫಿ ಜೊತೆ ಈ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ.. ಕರಣ್ ಕುಂದ್ರಾ.. ಜಾಸ್ಮಿನ್ ಭಾಸಿನ್, ಮಹೀಪ್ ಕಪೂರ್, ಜನ್ನತ್ ಸುಬೈರ್, ಸುಧಾಂಶು ಪಾಂಡೆ, ಹೀಗೆ 20 ಸೆಲೆಬ್ರೆಟಿಗಳು ಸ್ಫರ್ಧಿಸಿದ್ದರು. ಇವರೆಲ್ಲರನ್ನು ಹಿಂದಿಕ್ಕಿ ಉರ್ಫಿ ಜಾವೇದ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು ವಿಶೇಷ.


Click it and Unblock the Notifications











