ಸೋನು ನಿಗಮ್ ಮೇಲೆ ಕಲ್ಲು ತೂರಾಟ, ಕೈ ಮುಗಿದು ಬೇಡಿಕೊಂಡ ಖ್ಯಾತ ಗಾಯಕ..!
ಭಾರತದ ಖ್ಯಾತ ಗಾಯಕರಲ್ಲಿ ಸೋನು ನಿಗಮ್ ಕೂಡ ಒಬ್ಬರು. ಇವರು ಹಾಡು ಹಾಡುತ್ತಿದ್ದರೆ ಕೇಳುಗರು ಮೈ ಮರೆಯುತ್ತಾರೆ. ಕೇವಲ ಬಾಲಿವುಡ್ ನಲ್ಲಿ ಅಷ್ಟೇ ಅಲ್ಲ, ಇವರನ್ನ ಆರಾಧಿಸುವ ಭಕ್ತರು ದೇಶದೆಲ್ಲೆಡೆ ಇದ್ದಾರೆ.
ಇನ್ನೂ ಹಿಂದಿ ಹೊರತು ಪಡಿಸಿ ಬೇರೆ ಭಾಷೆಗಳಿಗೆ ಹೋಲಿಸಿದರೆ ಸೋನು ನಿಗಮ್ ಕನ್ನಡಿಗರಿಗೆ ತುಸು ಹೆಚ್ಚೇ ಚಿರಪರಿಚಿತ ವ್ಯಕ್ತಿ. ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಹಾಡನ್ನು ಇವತ್ತು ಕೂಡ ಕನ್ನಡಿಗರು ಮರೆತಿಲ್ಲ. ಹೃದಯವೇ ಬಯಸಿದೇ ನಿನ್ನನ್ನೇ.. ನಿನ್ನಿಂದಲೇ.. ಕಣ್ ಕಣ್ಣ ಸಲಿಗೆ.. ಈ ಸಂಜೆ ಯಾಕಾಗಿದೆ.. ಮೊದಲ ಮಳೆಯಂತೆ.. ಹೀಗೆ ಹಲವಾರು ಕನ್ನಡದ ಹಾಡುಗಳನ್ನು ಹಾಡಿರುವ ಸೋನು ನಿಗಮ್ ಹಲವು ವೇದಿಕೆಗಳಲ್ಲಿ ಕನ್ನಡದ ಕುರಿತು ಕನ್ನಡ ಚಿತ್ರರಂಗದ ಕುರಿತು ಅಭಿಮಾನದ ಮಾತುಗಳನ್ನಾಡಿದ್ದಾರೆ. ಇಂಥಾ ಸೋನು ನಿಗಮ್ ಮೇಲೀಗ ಕಲ್ಲು ತೂರಲಾಗಿದೆ.

ಹೌದು, ಆಹ್ವಾನದ ಮೇರೆಗೆ ಸೋನು ನಿಗಮ್ ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ { DTU}ಎಂಜಿಫೆಸ್ಟ್ 2025ಕ್ಕೆ ಹಾಡು ಹಾಡಲು ಹೋಗಿದ್ದರು. ಕಾಲೇಜ್‌ನ ಕಾರ್ಯಕ್ರಮವಾದ ಕಾರಣ ಅನೇಕ ವಿದ್ಯಾರ್ಥಿಗಳು ಬಂದು ಸೇರಿದ್ದರು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೋನು ನಿಗಮ್ ಅವರ ಈ ಕಾರ್ಯಕ್ರಮದಲ್ಲಿ ಹಾಜರಾತಿಯನ್ನು ಹಾಕಿದ್ದರು. ಹೀಗಾಗಿ ಸೋನು ನಿಗಮ್ ಉತ್ಸಾಹದಿಂದ ಹಾಡನ್ನು ಹಾಡುತ್ತಿದ್ದರು.
ಆದರೆ ಇದೇ ಸಮಯದಲ್ಲಿ ವಿದ್ಯಾರ್ಥಿಗಳ ಒಂದು ಬಣ ವೇದಿಕೆಯತ್ತ ನಿರಂತರವಾಗಿ ಕಲ್ಲು ಮತ್ತು ಬಾಟಲಿಗಳನ್ನು ಎಸೆದಿದೆ. ವಾತಾವರಣಕ್ಕೆ ಭಂಗ ತರುವಂತ ಕೆಲಸ ಮಾಡಿದೆ. ಸೋನು ನಿಗಮ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ತಕ್ಷಣವೇ ಹಾಡನ್ನ ನಿಲ್ಲಿಸಿ ವೇದಿಕೆಯಿಂದ ಹೊರಟು ಹೋಗುತ್ತಿದ್ದರೋ ಏನೋ ಗೊತ್ತಿಲ್ಲ.
ಆದರೆ ಸೋನು ನಿಗಮ್ ಮಾತ್ರ ನಿಂತ ಜಾಗದಿಂದ ಕದಲಲಿಲ್ಲ. ಬದಲಿಗೆ ಸಮಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ನಾನು ನಿಮಗೋಸ್ಕರ ಹಾಡು ಹಾಡಲು ಇಲ್ಲಿಯವರೆಗೆ ಬಂದಿದ್ದೇನೆ, ನಿಮಗೆ ನನ್ನ ಹಾಡುಗಳು ಇಷ್ಟವಾಗಿಲ್ಲ ಅಂದರೂ ಪರವಾಗಿಲ್ಲ ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡರು.ಆ ನಂತರ ಕೆಲ ಹೊತ್ತು ಅಲ್ಲಿಯೇ ನಿಂತು ಪರಿಸ್ಥಿತಿ ಸುಧಾರಿಸಿದ ನಂತರ ಬೇಸರ ಮಾಡಿಕೊಳ್ಳದೇ ಮತ್ತೆ ಹಾಡುಗಳನ್ನು ಹಾಡಿದರು.
ಸದ್ಯ ಕಾಲೇಜಿನಲ್ಲಿ ಸೋನು ನಿಗಮ್ ಹಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಹುತೇಕರು ವಿದ್ಯಾರ್ಥಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಕೋಟ್ಯಂತರ ಜನರ ಹೃದಯವನ್ನು ತನ್ನ ಕಂಠದಿಂದ ಗೆದ್ದ ಗಾಯಕನಿಗೆ ಈ ರೀತಿ ಅವಮಾನ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಕೂಡ ಆಕ್ರೋಶವನ್ನು ಹೊರ ಹಾಕುತ್ತಿದ್ದು, ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಲ್ಲು ತೂರುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಹೇಳಿ ಕೊಡಲಾಗುತ್ತಿದೆಯಾ ಎಂದು ಕಿಡಿ ಕಾರುತ್ತಿದ್ದಾರೆ.
ಈ ಕುರಿತು ಬೇರೆ ಬೇರೆ ಕಾಲೇಜ್‌ನ ವಿದ್ಯಾರ್ಥಿಗಳು ಕೂಡ ತಮ್ಮ ಅಭಿಪ್ರಾಯವನ್ನು ಮಾಧ್ಯಮದವರ ಎದುರು ಹಂಚಿಕೊಂಡಿದ್ದು ಕೆಲವು ವಿದ್ಯಾರ್ಥಿಗಳ ಅಶಿಸ್ತಿನಿಂದ ಇಡೀ ವಿಶ್ವವಿದ್ಯಾಲಯಕ್ಕೆ ಸೋನು ನಿಗಮ್ ಸಂಗೀತ ಸಂಜೆ ಕಪ್ಪು ಚುಕ್ಕೆಯಾಯ್ತು ಎಂದು ದೌಲತ್ ರಾಮ್ ಕಾಲೇಜಿನಿ ವಿದ್ಯಾರ್ಥಿನಿ ಗೀತಿಕಾ ಹೇಳಿದ್ದಾರೆ. ಸೋನು ನಿಗಮ್ ಅವರಂತಹ ಲೆಜೆಂಡರಿ ಗಾಯಕ ವಿದ್ಯಾರ್ಥಿಗಳಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ನಮಗೆ ನಾಚಿಕೆಯಾಗುತ್ತೆ ಎಂದು ಹೇಳಿದ್ದಾರೆ. ಇನ್ನು ಹಲವಾರು ವಿದ್ಯಾರ್ಥಿಗಳು ತನ್ನ ಮೇಲೆ ಕಲ್ಲು ತೂರಿದರು ಕೂಡ ಸೋನು ನಿಗಮ್ ತಾಳ್ಮೆ ಮತ್ತು ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ ಸೋನು ನಿಗಮ್ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.


Click it and Unblock the Notifications











