ಬಾಡಿಬಿಲ್ಡಿಂಗ್, ಡ್ಯಾನ್ಸ್ ಬಿಟ್ಟು, ನಟನೆಯತ್ತ ಗಮನಹರಿಸಿ: ಸನ್ನಿ ಡಿಯೋಲ್ ಹೇಳಿದ್ಯಾರಿಗೆ?
ಆಗಸ್ಟ್ 11 ರಂದು ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಗದರ್ 2 ಖುಷಿಯಲ್ಲಿದ್ದಾರೆ ಸನ್ನಿ ಡಿಯೋಲ್. ಗದರ್: ಏಕ್ ಪ್ರೇಮ್ ಕಥಾ ಬಿಡುಗಡೆಯಾದ 22 ವರ್ಷಗಳ ನಂತರ ಅದರ ಸೀಕ್ವೆಲ್ ಈಗ ಬಿಡುಗಡೆಯಾಗಿದೆ. ತಾರಾ ಸಿಂಗ್ ಆಗಿ ನಟ ಅಬ್ಬರಿಸಿದ್ದಾರೆ. ಮೊದಲ ದಿನವೇ ಚಿತ್ರವು ಸುಮಾರು 40 ಕೋಟಿ ಸಂಗ್ರಹಿಸಿದೆ. ಸಿನಿಮಾ ಯಶಸ್ಸಿನ ಜೊತೆಗೆ ಮಾತನಾಡುತ್ತಾ ಹೊಸ ತಲೆಮಾರಿನ ನಟರಿಗೆ ಸಲಹೆಗಳನ್ನು ನೀಡಿದ್ದಾರೆ.
65 ವರ್ಷ ವಯಸ್ಸಿನ ಸನ್ನಿ ಡಿಯೋಲ್ IMDB ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಹೊಸ ತಲೆಮಾರಿನ ನಟರಿಗೆ ಸಲಹೆಯನ್ನು ನೀಡಲು ಹೇಳಿದಾಗ, ಕೇವಲ ನೃತ್ಯ ಮತ್ತು ಬಾಡಿ ಬಿಲ್ಡಿಂಗ್ ಮಾಡುವುದಕ್ಕಿಂತ ಹೆಚ್ಚಾಗಿ ನಟನೆಯನ್ನು ಮಾಡಲು ಪ್ರಾರಂಭಿಸಬೇಕು ಎಂಬ ಸಲಹೆ ನೀಡಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಬರೀ ನೃತ್ಯ ಮತ್ತು ದೇಹ ಪ್ರದರ್ಶನ ಮಾಡುವ ನಟರಿಗೆ ಚಾಟಿ ಬೀಸಿದ್ದಾರೆ.

ಕಿರಿಯ ನಟರಿಗೆ ಸನ್ನಿ ಡಿಯೋಲ್ ಸಲಹೆ
"ಬಾಡಿಬಿಲ್ಡಿಂಗ್ ಮತ್ತು ನೃತ್ಯವನ್ನು ನಿಲ್ಲಿಸಿ. ನಟನೆಯತ್ತ ಗಮನ ಹರಿಸಿ. ನಿಮ್ಮಲ್ಲಿ ಪ್ರತಿಭೆ ಇದೆ. ಅದನ್ನು ಮುಂದಕ್ಕೆ ತೆಗೆದುಕೊಂಡು ಬನ್ನಿ. ಇಲ್ಲಿ ನಮಗೆ ಬೇಕಾಗಿರುವುದು ನಟನೆ. ನಾವು ಬಾಡಿಬಿಲ್ಡರ್‌ಗಳಲ್ಲ. ನೀವು ಫಿಟ್ ಆಗಿರಬೇಕು, ಸದೃಢವಾಗಿರಬೇಕು ಮತ್ತು ಆರೋಗ್ಯವಂತರಾಗಿರಬೇಕು. ಇದರ ಜೊತೆಗೆ ಸಂಗೀತವು ನಮ್ಮ ಸಂಸ್ಕೃತಿಯ ಭಾಗ" ಎಂದಿದ್ದಾರೆ.
ಮುಂದುವರಿದು ಮಾತನಾಡಿರುವ ಸನ್ನಿ ಡಿಯೋಲ್, "ನೀವೆಲ್ಲರೂ ನನ್ನ ಹಿಂದಿನ ಚಲನಚಿತ್ರಗಳನ್ನು ನೋಡಿದ್ದೀರಿ ಎಂದು ನನಗೆ ತಿಳಿದಿದೆ. ಹಿಂದಿನ ಹಲವು ದೊಡ್ಡ ದೊಡ್ಡ ನಟರು, ಜೊತೆಗೆ ಕೆಲವು ಹೊಸಬರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಮಾಂಸಖಂಡಗಳನ್ನು ಬೆಳೆಸುವ ಜನರಿಗಿಂತ ಇವರುಗಳು ನಿಮ್ಮ ನಾಯಕರಾಗಲಿ" ಎಂದು ಹೇಳಿದ್ದಾರೆ.

ಗದರ್ 2 ಸಿನಿಮಾದಲ್ಲಿ ಸನ್ನಿ ಡಿಯೋಲ್ ತಾರಾ ಸಿಂಗ್ ಆಗಿ ಕಾಣಿಸಿಕೊಂಡಿದ್ದು, ಅವರ ಪತ್ನಿ ಸಕೀನಾ ಪಾತ್ರದಲ್ಲಿ ಅಮೀಶಾ ಪಟೇಲ್ ಮತ್ತು ಬಾಲ ನಟ ಉತ್ಕರ್ಷ್ ಶರ್ಮಾ ಅವರ ಯವ್ವನದ ಹೊಸ್ತಿಲಲ್ಲಿರುವ ಮಗ ಚರಂಜಿತ್ ಆಗಿ ಕಾಣಿಸಿಕೊಂಡಿದ್ದಾರೆ. 2001 ರ ಗದರ್ ಮೊದಲ ಭಾಗವು 1945 ರಿಂದ 1952 ರವರೆಗಿನ ಚಿತ್ರಣವಾದರೇ, ಗದರ್ 2 1971 ರಲ್ಲಿ ನಡೆಯುವ ಕಥೆಯಾಗಿ ಚಿತ್ರಿಸಲಾಗಿದೆ.
ಚಿತ್ರ ನಿರ್ಮಾಣ ಬದಲಾಗಿದೆಯೇ?
ಇಷ್ಟು ವರ್ಷಗಳಲ್ಲಿ ಚಿತ್ರ ನಿರ್ಮಾಣ ಬದಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ಚಲನಚಿತ್ರ ನಿರ್ಮಾಣ ಬದಲಾಗಿಲ್ಲ, ವಿಕಸನಗೊಂಡಿದೆ. ತಂತ್ರಜ್ಞಾನವು ವಿಕಸನಗೊಳ್ಳುತ್ತಿದೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ನಾವು ನಮ್ಮ ಕಥೆಗಳನ್ನು ಬದಲಿಸಬೇಬೇಕಾಗಿಲ್ಲ ಏಕೆಂದರೆ ಏನೇ ಆದರೂ ಕೊನೆಯಲ್ಲಿ, ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಇತಿಹಾಸ ಯಾವಾಗಲೂ ಒಂದೇ ಆಗಿರುತ್ತದೆ" ಎಂದು ಹೇಳಿದ್ದಾರೆ.
"ಇಂದಿನ ಪೀಳಿಗೆಯವರು ತಾವು ಯಾರು, ತಾವು ಎಲ್ಲಿಂದ ಬಂದರು ಎಂಬ ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರಿಗೆ ತಿಳಿದಿಲ್ಲದ ವಿಷಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ನಾವು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಕೆದುಕಬೇಕು. ಆ ರೀತಿಯ ಚಲನಚಿತ್ರಗಳನ್ನು ಹೆಚ್ಚು ಹೆಚ್ಚು ಪರದೆ ಮೇಲೆ ತರಲು ಪ್ರಾರಂಭಿಸಲು ಇದು ಒಳ್ಳೆಯ ಸಮಯ" ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.


Click it and Unblock the Notifications











