ರಾಮನ ಮನೆಗೆ ಕನ್ನ ಹಾಕಿದ್ದಾರೆ, ನಾವೆಲ್ಲಿಯ ವಿಶ್ವಗುರು? ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಗಾಯಕಿ ಅನುರಾಧಾ ಪೌಡ್ವಾಲ್
ಭಾರತ ವಿಶ್ವಗುರು ಆಗುತ್ತಿದೆ. ಇಡೀ ಜಗತ್ತೇ ಭಾರತದತ್ತ ಬೆರಗು ಕಣ್ಣಿಂದ ನೋಡುತ್ತಿದೆ. ಜಗತ್ತಿನವರೆಲ್ಲಾ ಭಾರತದ ಸನಾತನ ಸಂಸ್ಕೃತಿಯಿಂದ ಆಕರ್ಷಿತರಾಗಿದ್ದಾರೆ. ಜಗತ್ತಿನ ಎಲ್ಲ ದೇಶಗಳ ಎದುರು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದೆ..! ಹೀಗೆ ದೇಶದ ಕುರಿತು ಕಳೆದ ಒಂದೂವರೆ ದಶಕದಿಂದ ನಿಮ್ಮ ಸುತ್ತ ಮುತ್ತಲು ಈ ಮಾತುಗಳನ್ನು ನೀವು ಕೇಳಿರಬಹುದು. ಚರ್ಚೆಯಲ್ಲಿ ನೀವು ಕೂಡ ಭಾಗವಹಿಸರಬಹುದು.
ಆದರೆ.. ವಾಸ್ತವದಲ್ಲಿ ಇದು ರಂಗು ರಂಗಿನ ಕನಸು ಮಾತ್ರ. ಗುರಿ ಚೆನ್ನಾಗಿದೆ. ಆದರೆ ಇದೇ ಸಮಯದಲ್ಲಿ ಸಮಸ್ಯೆಗಳ ಸಾಗರವೂ ಇದೆ. ಇನ್ನು. ನಮ್ಮನ್ನು ''ಗುರು'' ಎಂದು ಬೇರೆ ದೇಶಗಳು ತಾವಾಗಿಯೇ ಒಪ್ಪಿಕೊಳ್ಳುವಂತೆ ನಾವು ಬೆಳೆಯ ಬೇಕು. ಆದರೆ ಅದರ ಬದಲು ನಾವು ನಾವೇ ''ವಿಶ್ವಗುರು'' ಎಂದು ಘೋಷಿಸಿಕೊಂಡು ಸಂಭ್ರಮ ಪಡುತ್ತಿದ್ದೇವೆ. ಅನುರಾಧಾ ಪೌಡ್ವಾಲ್ ಇದೇ ವಿಚಾರಕ್ಕೆ ಸದ್ಯ ಕಿಡಿ ಕಾರಿದ್ದಾರೆ.

ಹೌದು, ಅನುರಾಧಾ ಪೌಡ್ವಾಲ್.. ಭಾರತದ ಖ್ಯಾತ ಗಾಯಕಿ. ಕಳೆದ 50 ವರ್ಷಗಳಿಂದ ದಣಿವರಿಯದೇ ತಮ್ಮ ಕಂಠವನ್ನು ಕುಣಿಸುತ್ತಿರುವ ಅನುರಾಧಾ ಪೌಡ್ವಾಲ್ ಇಲ್ಲಿಯವರೆಗೆ ಹತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ಲತಾ ಮಂಗೇಶ್ಕರ್ ಮತ್ತು ಆಶಾ ಬೋಸ್ಲೆ ಅವರ ಕಾಲದಲ್ಲೇ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡ ಅನುರಾಧಾ ಪೌಡ್ವಾಲ್ ಅವರ ''ಆಶಿಕಿ''.. ''ದಿಲ್''.. ''ತೇಜಾಬ್''.. ''ಬೇಟಾ'' .. ''ಸಾಜನ್'' ಚಿತ್ರಗಳ ಹಾಡುಗಳನ್ನು 90's ಕಿಡ್ಸ್ ಹೇಗೆ ತಾನೇ ಮರೆಯಲು ಸಾಧ್ಯ.
ಇನ್ನು ಅನುರಾಧಾ ಕೇವಲ ಹಿಂದಿಗೆ ಸೀಮಿತವಾದವರಲ್ಲ. ಬೆಂಗಾಲಿ..ತೆಲುಗು.. ತಮಿಳು.. ಒಡಿಯಾ ಸೇರಿ ಹಲವು ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಕನ್ನಡದಲ್ಲಿ ''ಜೀವನದಿ'' ಚಿತ್ರದ ಕನ್ನಡ ನಾಡಿನ ಜೀವನದಿ ಈ ಕಾವೇರಿ ಹಾಡು ಮರೆಯಲು ಸಾಧ್ಯವಾ..? ''ಕರಿಯ'' ಚಿತ್ರದ ಎಲ್ ಎಲ್ಲಿಂದ ಹಾಡು ಕೂಡ ಅಷ್ಟೇ.
ಕೇವಲ ಇವೆರಡು ಹಾಡು ಮಾತ್ರ ಅಲ್ಲ ಹಲವು ಹಾಡುಗಳನ್ನು ಅನುರಾಧಾ ಪೌಡ್ವಾಲ್ ಕನ್ನಡದಲ್ಲಿ ಹಾಡಿದ್ದಾರೆ. ಇಂಥಾ ಅನುರಾಧಾ ಪೌಡ್ವಾಲ್ ಸದ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ವಿಶ್ವಗುರು ಎಂದು ಬೆನ್ನು ತಟ್ಟಿಕೊಳ್ಳುವುದನ್ನು ಮೊದಲು ನಿಲ್ಲಿಸಿ ಎಂದಿದ್ದಾರೆ.

ಹೌದು, ಎಲ್ಲರಿಗೆ ರಾಮನೂರಿನಲ್ಲಿಯೇ ರಾಮ ಸುರಕ್ಷಿತವಾಗಿಲ್ಲ.ಅಯೋಧ್ಯೆಯ ರಾಮಮಂದಿರದಲ್ಲಿನ ದೇಣಿಗೆ ಹಣ ಕಳ್ಳತನದಿಂದ ಇಂದು ಎಲ್ಲರೆದುರು ಭಾರತೀಯರು ತಲೆ ತಗ್ಗಿಸುವಂತಾಗಿದೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನುರಾಧಾ ಪೌಡ್ವಾಲ್ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ಈ ಕುರಿತು ಶುಭಾಂಕರ್ ಮಿಶ್ರಾ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅನುರಾಧಾ ಪೌಡ್ವಾಲ್, ಇದೆಲ್ಲ ನೋಡುತ್ತಿದ್ದರೆ ಭಾರತ ಹೇಗೆ ತಾನೇ ವಿಶ್ವಗುರು ಆಗಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲದೆ, ಸರ್ಕಾರದ ವಿರುದ್ಧ ನೇರವಾಗಿಯೇ ಕಿಡಿಕಾರಿರುವ ಅನುರಾಧಾ ಪೌಡ್ವಾಲ್, ವಿಶ್ವಗುರು ಆಗುವ ಮಾತನ್ನು ಈಗ ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ನನಗೂ ಭಾರತ ವಿಶ್ವಗುರು ಆಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಈಗ ಕಣ್ಣೆದುರು ನಡೆಯುತ್ತಿರುವುದನ್ನು ನೋಡಿದರೆ, ಇದೆಲ್ಲಾ ವಿಶ್ವಗುರು ಪಟ್ಟಕ್ಕೆ ಉಲ್ಟಾ ಹೊಡೆಯುವ ಹಾಗೆ ಕಾಣಿಸುತ್ತಿದೆ ಎಂದು ಹೇಳಿರುವ ಅನುರಾಧಾ ಪೌಡ್ವಾಲ್ ಮೊದಲು ಈ ನಾಟಕವನ್ನು ನಿಲ್ಲಿಸಿ ಎಂದು ಕಿಡಿ ಕಾರಿದ್ದಾರೆ. ನಾವು ಇನ್ನು ಹೆಚ್ಚು ಹೆಚ್ಚು ಸುಶಿಕ್ಷಿತರಾಗುತ್ತಿದ್ದೇವೆ ಎಂದು ಹೇಳಲಾಗುತ್ತಿದೆ, ಆದರೆ ದೇಶದಲ್ಲಿ ಈಗಾಗಲೇ 93 ಸಾವಿರ ಶಾಲೆಗಳು ಮುಚ್ಚಿಹೋಗಿವೆ ಎಂದು ತಮ್ಮ ಅಸಮಾಧಾನ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮುಂದುವರೆದು 2047ರ ಸಮಯಕ್ಕೆ ಭಾರತ ವಿಶ್ವಗುರು ಆಗಲಿದೆ ಎಂಬ ಪ್ರಧಾನಮಂತ್ರಿ ಮೋದಿ ಅವರ ಹೇಳಿಕೆಯನ್ನು ಕೂಡ ಖಂಡಿಸಿರುವ ಅನುರಾಧಾ ಪೌಡ್ವಾಲ್, ವಿಶ್ವಗುರು ಆಗಲು ನಮ್ಮಲ್ಲಿ ಇರುವ ವೇದಿಕೆಯಾದರೂ ಎಂತಹದ್ದು..? ಕೊನೆಗೆ ರಾಮಮಂದಿರಕ್ಕೂ ಕನ್ನ ಬಿತ್ತು ಎಂದಿದ್ದಾರೆ. ಭ್ರಷ್ಟಾಚಾರ ನಡೆದ ವಿಷಯಗಳ ಕುರಿತು ನಮಗೆ ಮಾಹಿತಿ ಕೊಡಿ ನಾವೇ ಆಕ್ಷನ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಅಂದ್ಹಾಗೇ ಭಾರತೀಯ ಚಿತ್ರರಂಗಕ್ಕೆ ಇವರು ಸಲ್ಲಿಸಿರುವ ಸೇವೆ ಗುರುತಿಸಿ, ಭಾರತ ಸರ್ಕಾರ ಇವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಶ್ರೀ' ನೀಡಿ ಗೌರವಿಸಿದೆ. ಇನ್ನುಳಿದಂತೆ ಅನುರಾಧಾ ಪೌಡ್ವಾಲ್ ಕೇವಲ ಸಿನಿಮಾ ಹಾಡುಗಳು ಮಾತ್ರ ಹಾಡಿಲ್ಲ. ಹಲವಾರು ಭಕ್ತಿ ಗೀತೆಗಳನ್ನು ಭಾವಪೂರ್ಣವಾಗಿ ಹಾಡಿದ್ದಾರೆ. ಈ ಹಿನ್ನೆಲೆ ಇವರನ್ನು ಭಜನ್ ಕ್ವೀನ್ ಎಂದೇ ಕರೆಯಲಾಗುತ್ತೆ. ಸದ್ಯ ಅನುರಾಧಾ ಅವರಾಡಿದ ವಿಶ್ವಗುರು ಮಾತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications