''ಸ್ತ್ರೀ 2'' ಅಬ್ಬರ ''ಬಾಹುಬಲಿ 2'' ದಾಖಲೆ ಉಡೀಸ್, ಉಳಿದ ಈ 03 ಚಿತ್ರಗಳನ್ನು ಹಿಂದಿಕ್ಕುತ್ತಾರಾ ಶ್ರದ್ಧಾ ಕಪೂರ್..?
ಚಿತ್ರರಂಗನೇ ಹಾಗೇ. ಇಲ್ಲಿ ಯಾವತ್ತೂ ಯಾವ ಚಿತ್ರ ಗೆಲ್ಲುತ್ತೆ, ಯಾವ ಚಿತ್ರ ಸೋಲುತ್ತೆ ಎಂದು ಹೇಳುವುದು ಅಸಾಧ್ಯ. ಕೆಲವೊಮ್ಮೆ ವಿಪರೀತ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾಗಳು ದೊಪ್ಪನೆ ನೆಲಕ್ಕುರುಳಿದರೆ, ಇನ್ನೂ ಕೆಲವೊಮ್ಮೆ ಹಾಕಿದ ಬಂಡವಾಳದ ಮೇಲೆ ಒಂದೈದು ಹತ್ತು ಕೋಟಿಯಷ್ಟೇ ಲಾಭ ಮಾಡಬಹುದು ಎಂದುಕೊಂಡ ಸಿನಿಮಾದಿಂದ ಹಣದ ಹೊಳೆಯೆ ಹರಿಯುತ್ತೆ. ಇದಕ್ಕೆ ಸ್ತ್ರೀ 2 ಅತ್ಯುತ್ತಮ ಉದಾಹರಣೆ.
ಹೌದು, ಕಳೆದ ಮೂರು ವಾರಗಳಿಂದ ಬಾಲಿವುಡ್‌ನಲ್ಲಿ ಹಣದ ಮಳೆ ಬೀಳ್ತಿದೆ. ಇದಕ್ಕೆ ಕಾರಣ ಶ್ರದ್ಧಾ ಕಪೂರ್, ರಾಜ್ ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ, ಪಂಕಲ್ ತ್ರಿಪಾಠಿ ಅಭಿನಯದ ಸ್ತ್ರೀ 2 ಸಿನಿಮಾ. ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಒಂದಿಲ್ಲೊಂದು ದಾಖಲೆಯನ್ನು ಮುರಿಯುತ್ತಾನೇ ಬಂದ ಸ್ತ್ರೀ 2 ಈಗ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮುರಿದಿದೆ.

ಹೌದು, ಅಸಲಿಗೆ ಬಾಹುಬಲಿ -02 ಚಿತ್ರ ತನ್ನ ಮೂರನೇ ವಾರದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 69 ಕೋಟಿ 25 ಲಕ್ಷ ಗಳಿಸಿತ್ತು. ಈ ಗಳಿಕೆಯನ್ನು ಮುರಿದಿರುವ ಸ್ತ್ರೀ 2 ಮೂರನೇ ವಾರ 70 ಕೋಟಿ 25 ಲಕ್ಷವನ್ನು ಗಳಿಸಿದೆ. ಮೂರನೇ ವಾರದ ಈ ಜಿದ್ದಾ ಜಿದ್ದಿನ ಕದನದಲ್ಲಿ ಸ್ತ್ರೀ 2 ಕೇವಲ ಬಾಹುಬಲಿಯನ್ನಷ್ಟೇ ಹಿಂದಿಕ್ಕಿಲ್ಲ. ಶಾರುಖ್ ಖಾನ್ ಅಭಿನಯದ ಜವಾನ್ ಮತ್ತು ರಣ್‌ಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರವನ್ನೂ ಕೂಡ ಸ್ತ್ರೀ 2 ಸೆಡ್ಡು ಹೊಡೆದಿದೆ. ತನ್ನ ಮೂರನೇ ವಾರದಲ್ಲಿ ಜವಾನ್ 52 ಕೋಟಿಯನ್ನೂ ಗಳಿಸಿದ್ದರೆ, ಅನಿಮಲ್ 50 ಕೋಟಿಯನ್ನೂ ಗಳಿಸಿತ್ತು. ಆದರೆ ಸ್ತ್ರೀ 2 ಆಗಲೇ ಹೇಳಿದಂತೆ 70 ಕೋಟಿಯನ್ನು ಗಳಿಸಿದೆ.
ಇನ್ನೂ ಬಾಹುಬಲಿ 2 ಚಿತ್ರಮಂದಿರದಿಂದ ಎತ್ತಂಗಡಿ ಆಗುವ ಮುನ್ನ 1030 ಕೋಟಿಯನ್ನೂ ಗಳಿಸಿತ್ತು. ಆ ಪೈಕಿ ಕೇವಲ ಹಿಂದಿ ಅವತರಣಿಕೆಯೇ 510 ಕೋಟಿಯನ್ನೂ ಗಳಿಸಿತ್ತು. ಈ ದಾಖಲೆ ಕೂಡ ಸ್ತ್ರೀ 2 ಚಿತ್ರದ ಅಬ್ಬರ ಮುಂದೆ ಧೂಳಿಪಟವಾಗಿದೆ. ಬಾಹುಬಲಿ 02 ಚಿತ್ರವನ್ನು ಹಿಂದಿಕ್ಕಿದ ಸ್ತ್ರೀ 2 ಚಿತ್ರ ಈ ಮೂರು ವಾರದಲ್ಲಿ 516 ಕೋಟಿಯನ್ನೂ ಕೊಳ್ಳೆ ಹೊಡೆದಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ನಾಲ್ಕನೇ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ಸ್ತ್ರೀ 2 ಚಿತ್ರದ ಮುಂದೆ ಜವಾನ್, ಪಠಾಣ್ ಮತ್ತು ಅನಿಮಲ್ ಚಿತ್ರಗಳಿಂದ ಸೃಷ್ಟಿಯಾದ ದಾಖಲೆಗಳಿವೆ. ಭಾರತದ ಮಾರುಕಟ್ಟೆಯಲ್ಲಿ ಜವಾನ್ 643 ಕೋಟಿಯನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ 556 ಕೋಟಿಯನ್ನು ಗಳಿಸಿರುವ ಅನಿಮಲ್ ಚಿತ್ರ ಇದೆ. ಇನ್ನೂ ಮೂರನೇ ಸ್ಥಾನದಲ್ಲಿ 543 ಕೋಟಿಯನ್ನು ಗಳಿಸಿರುವ ಶಾರುಖ್ ಖಾನ್ ಅವ್ರದ್ದೇ ಮತ್ತೊಂದು ಚಿತ್ರ ಪಠಾಣ್ ಇದೆ. ಈ ಮೂರು ಚಿತ್ರಗಳನ್ನೂ ಹಿಂದಿಕ್ಕಿದರೆ ಸ್ತ್ರೀ 2 ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೊದಲನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯಕ್ಕೆ ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ಸ್ತ್ರೀ 2 ಚಿತ್ರ ಎರಡನೇ ಸ್ಥಾನಕ್ಕೇರುವುದಂತೂ ಖಚಿತ.


Click it and Unblock the Notifications











