'KGF-2' ದಾಖಲೆ ಮುರಿದ 'ಸ್ತ್ರೀ-2'; ಕೋಟಿ ಕೋಟಿ ಬಾಚುತ್ತಿರುವ ಸಿನಿಮಾ ಸಕ್ಸಸ್ ಸೀಕ್ರೆಟ್ ಏನು?
ಅದ್ಯಾವ ಸಿನಿಮಾ ಅದ್ಯಾಕೆ ಹೇಗೆ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಸಿನಿಮಾ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ಆದರೆ ಒಳ್ಳೆ ಚಿತ್ರಗಳನ್ನು ಪ್ರೇಕ್ಷಕರು ಕೈಬಿಡಲ್ಲ. ಬಾಲಿವುಡ್‌ನಲ್ಲೀಗ 'ಸ್ತ್ರೀ-2' ಸಿನಿಮಾ ಆರ್ಭಟ ಜೋರಾಗಿದೆ. ಹಾರರ್ ಕಾಮಿಡಿ ಥ್ರಿಲ್ಲರ್ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಶ್ರದ್ಧಾ ಕಪೂರ್, ರಾಜ್‌ಕುಮಾರ್ ಹಿರಾನಿ, ಪಂಚಜ್ ತ್ರಿಪಾಠಿ ನಟನೆಯ 'ಸ್ತ್ರೀ-2' ಸಿನಿಮಾ ಈಗಾಗಲೇ 560 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 11 ದಿನಕ್ಕೆ ಸಿನಿಮಾ ಗಳಿಕೆ ಕಂಡು ಬಾಲಿವುಡ್ ಬಾಕ್ಸಾಫೀಸ್ ಪಂಡಿತರು ಹುಬ್ಬೇರಿಸಿದ್ದಾರೆ. ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳ ದಾಖಲೆ ಮುರಿದು ಈ ಚಿತ್ರ ಸದ್ದು ಮಾಡ್ತಿದೆ.

ಅಮರ್ ಕೌಶಿಕ್ 'ಸ್ತ್ರೀ'-2 ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮ್ಯಾಡಾಕ್ ಸೂಪರ್‌ನ್ಯಾಚುರಲ್ ಯೂನಿವರ್ಸ್‌ನಲ್ಲೇ ಈ ಸಿನಿಮಾ ಕೂಡ ಮೂಡಿ ಬಂದಿದೆ. ಈ ವರ್ಷ ಭಾರತದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ 'ಸ್ತ್ರೀ'-2 ಸಿನಿಮಾ ಇದೆ. ಪ್ಯಾನ್ ಇಂಡಿಯಾಮಟ್ಟದಲ್ಲಿ ತೆರೆಕಂಡ ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಮೊದಲ ಸ್ಥಾನದಲ್ಲಿದೆ.
ಎರಡು ವಾರಕ್ಕೆ 'ಸ್ತ್ರೀ'-2 ಗಳಿಕೆ ನೋಡುತ್ತಿದ್ದರೆ ಶೀಘ್ರದಲ್ಲೇ ಸಿನಿಮಾ 'ಕಲ್ಕಿ 2898AD' ದಾಖಲೆ ಮುರಿದು ಮೊದಲ ಸ್ಥಾನಕ್ಕೆ ಏರಲಿದೆ. ಅದೂ ಕೂಡ ಹಿಂದಿ ಭಾಷೆಯಲ್ಲಿ ಮಾತ್ರ ಸಿನಿಮಾ ತೆರೆಕಂಡು ಈ ಪಾಟಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಸ್ಟಾರ್ ನಟರು ಇಲ್ಲ, ಅಮರ್ ಕೌಶಿಕ್ ಕೂಡ ಸ್ಟಾರ್ ನಿರ್ದೇಶಕನಲ್ಲ. ಆದರೂ ಈ ಸಿನಿಮಾ ಇಷ್ಟರಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಸಿನಿಮಾ ಸಕ್ಸಸ್‌ಗೆ ನಿಜವಾದ ಕಾರಣ ಏನು? ಎನ್ನುವ ಚರ್ಚೆ ಹುಟ್ಟುಹಾಕಿದೆ.
'ಸ್ತ್ರೀ'-2 ಚಿತ್ರದ ನಿಜವಾದ ಹೀರೊ ಕಥೆ. ಒಂದೊಳ್ಳೆ ಕಥೆ, ಕಲಾವಿದರ ಉತ್ತಮ ಅಭಿನಯ ಹಾಗೂ ಎಲ್ಲಾ ವಿಭಾಗದಲ್ಲೂ ಒಳ್ಳೆ ಔಟ್‌ಪುಟ್ ಇದ್ದರೆ ಸಿನಿಮಾ ಗೆಲ್ಲುತ್ತದೆ. ಪ್ರೇಕ್ಷಕರಿಗೆ ಕೊನೆಯದಾಗಿ ಬೇಕಿರುವುದು ಮನರಂಜನೆ. ಇಲ್ಲಿ ನಿರ್ದೇಶಕ, ಹೀರೊ-ಹೀರೋಯಿನ್ ಯಾರೂ ಕೂಡ ಲೆಕ್ಕಕ್ಕೆ ಬರಲ್ಲ. ತೆರೆಮೇಲೆ ಸಿನಿಮಾ ಮ್ಯಾಜಿಕ್ ಮಾಡಬೇಕು. ಆಗ ಮಾತ್ರ ಜನ ಮುಗಿಬಿದ್ದು ನೋಡುತ್ತಾರೆ.

6 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಸ್ತ್ರೀ' ಸಿನಿಮಾ ಸಕ್ಸಸ್ ಕಂಡಿತ್ತು. ಅಂದಾಜು 25-30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬರೋಬ್ಬರಿ 180 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಹಾಗಾಗಿ ಸಹಜವಾಗಿಯೇ 'ಸ್ತ್ರೀ'-2 ಬಗ್ಗೆ ನಿರೀಕ್ಷೆಯಿತ್ತು. ಆ ನಿರೀಕ್ಷೆಯನ್ನು ಮೀರಿಸುವಂತೆ ಸಿನಿಮಾ ಕಟ್ಟಿಕೊಟ್ಟು ಅಮರ್ ಕೌಶಿಕ್ ಟೀಂ ಗೆದ್ದಿದೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾಗಳು ದೊಡ್ಡದಾಗಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟ್ರೈನರ್‌ಗಾಗಿ ಸಿನಿರಸಿಕರು ಕಾಯುತ್ತಿದ್ದರು. 'ಸ್ತ್ರೀ-2' ಚೆನ್ನಾಗಿದೆ ಎಂದು ಗೊತ್ತಾಗುತ್ತಿದ್ದಂತೆ ನೋಡಲು ಮುಂದಾಗಿದ್ದಾರೆ. ಮೌತ್ ಟಾಕ್‌ನಿಂದ ಪ್ರೇಕ್ಷಕರು ಹೆಚ್ಚು ಹೆಚ್ಚು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಅದು ಸಹಜವಾಗಿಯೇ ಬಾಕ್ಸಾಫೀಸ್ ಗಳಿಕೆ ಮೇಲೆ ಪರಿಣಾಮ ಬೀರಿದೆ.
ಹಾರರ್ ಕಾಮಿಡಿ ಚಿತ್ರಗಳು ಅಷ್ಟು ಸುಲಭವಾಗಿ ಗೆಲ್ಲಲ್ಲ. ಇಂತಾದೊಂದು ಪ್ರಯತ್ನ ಮಾಡುವುದು ಬಹಳ ರಿಸ್ಕ್. ಆದರೆ ಆ ಪ್ರಯತ್ನದಲ್ಲಿ ಗೆದ್ದರೆ ಫಲಿತಾಂಶ ಈ ರೀತಿ ಇರುತ್ತದೆ. ಕಂಪ್ಲೀಟ್ ಹಾರರ್ ಅಥವಾ ಕಂಪ್ಲೀಟ್ ಕಾಮಿಡಿ ಸಿನಿಮಾಗಳಿಗೆ ಬೇರೆ ಬೇರೆ ಪ್ರೇಕ್ಷಕವರ್ಗವಿದೆ. ಆದರೆ ಎರಡನ್ನೂ ಸೇರಿಸಿದಾಗ ದೊಡ್ಡಮಟ್ಟದ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಯಿದೆ.
ಸೀಕ್ವೆಲ್ ಸಿನಿಮಾಗಳನ್ನು ಗೆಲ್ಲಿಸುವುದು ಸುಲಭವಲ್ಲ. ಗೊತ್ತಿರುವ ಪಾತ್ರಗಳು, ಪಾತ್ರ ಪೋಷಣೆ ಗೊತ್ತಾದಮೇಲೆ ಮುಂದೆ ಏನಾಗುತ್ತದೆ ಎಂದು ಕುತೂಹಲ ಮೂಡಿಸುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು. ಆ ನಿಟ್ಟಿನಲ್ಲಿ ಅಮರ್ ಕೌಶಿಕ್ ಮತ್ತು ತಂಡ ಗೆದ್ದಿದೆ. ನಿಜ ಹೇಳಬೇಕು ಅಂದ್ರೆ 'ಸ್ತ್ರೀ' ಚಿತ್ರದ ಮೊದಲ ಸನ್ನಿವೇಶವೇ ಭಯ ಹುಟ್ಟಿಸುತ್ತದೆ. ಕಾರಣ ಕ್ಯಾಮರಾ ವರ್ಕ್, ಸೌಂಡ್ ಡಿಸೈನ್, ನಿರ್ದೇಶನ. ಹಾಗಾಗಿ ಫಸ್ಟ್ ಹಾಫ್ ಎಷ್ಟು ಬೇಗ ಮುಗಿದುಬಿಡುತ್ತದೆ ಎನ್ನುವುದೇ ಗೊತ್ತಾಗಲ್ಲ.
ನಟನೆ ವಿಚಾರಕ್ಕೆ ಬಂದರೆ ಶ್ರದ್ಧಾ ಕಪೂರ್ ಮೋಡಿ ಮಾಡುತ್ತಾರೆ. ಕೆಲ ಸನ್ನಿವೇಶಗಳಲ್ಲಿ ಬರೀ ಕಣ್ಣಲ್ಲೇ ಅವರು ನಟಿಸಿ ಗಮನ ಸೆಳೆಯುತ್ತಾರೆ. ಕಲಾವಿದರು ನಟನೆಗ ಕೂಡ 'ಸ್ತ್ರೀ'-2 ಚಿತ್ರದ ಸಕ್ಸಸ್ ಸೀಕ್ರೆಟ್ ಎಂದರೆ ತಪ್ಪಾಗಲ್ಲ. ಇನ್ನು ಚಿತ್ರದ ಹಾಡುಗಳು ಪ್ಲಸ್ ಆಗಿದೆ. ತಮನ್ನಾ ಹೆಜ್ಜೆ ಹಾಕಿರುವ 'ಆಜ್ ಕಿ ರಾತ್' ಸಾಂಗ್ ಚಿತ್ರಕ್ಕೆ ಗ್ಲಾಮರ್ ಟಚ್ ಕೊಟ್ಟಿದೆ. ಇನ್ನು ಅಕ್ಷಯ್ ಕುಮಾರ್, ವರುಣ್ ಧವನ್ ಕೆಮಿಯೋ ವರ್ಕ್‌ಔಟ್ ಆಗಿದೆ.
'ಸ್ತ್ರೀ'-2 ಚಿತ್ರದಲ್ಲಿ ನಿಮಗೆ ಕಾಮಿಡಿ ಬೇಕು ಅಂದ್ರೆ ಕಾಮಿಡಿ ಇದೆ. ನೀವು ಭಯಪಡಬೇಕಾ? ಖಂಡಿತ ಚಿತ್ರದ ಕೆಲ ಸನ್ನಿವೇಶಗಳು ಎದೆ ಝಲ್ ಎನಿಸುತ್ತವೆ. ಇನ್ನು ನೀವು ಥ್ರಿಲ್ ಆಗಬೇಕು ಅಂದ್ರೆ ಆ ಅಂಶವೂ ಚಿತ್ರದಲ್ಲಿದೆ. ಒಟ್ಟಾರೆ ನಗಿಸಿ, ಭಯಪಡಿಸಿ ಇಡೀ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ. ಅದೇ ಕಾರಣಕ್ಕೆ ಸಿನಿಮಾ ನೋಡಿದ ಪ್ರೇಕ್ಷಕರ ಫಿದಾ ಆಗಿದ್ದಾರೆ. ನೋಡಿದವರು ಮತ್ತಷ್ಟು ಜನರನ್ನು ಚಿತ್ರಮಂದಿರಕ್ಕೆ ಕಳುಹಿಸುತ್ತಿದ್ದಾರೆ.


Click it and Unblock the Notifications











