ಹಿಂದಿಯಲ್ಲಿ 'ಸೈರಾ' ಸೋತಿದ್ದು ಯಾಕೆ ಎಂಬ ಕಾರಣ ಬಿಚ್ಚಿಟ್ಟ ಸುದೀಪ್
ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಐತಿಹಾಸಿಕ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಅಕ್ಟೋಬರ್ 2 ರಂದು ಬಿಡುಗಡೆಯಾಗಿತ್ತು. ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ತೆರೆಕಂಡಿತ್ತು.
ದಕ್ಷಿಣ ಭಾರತದಲ್ಲಿ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಬಹುದೊಡ್ಡ ಸಕ್ಸಸ್ ಸಿಕ್ಕಿತ್ತು. ಸೌತ್ ಇಂಡಸ್ಟ್ರಿ ಬಾಕ್ಸ್ ಆಫೀಸ್ ನಲ್ಲಿ ಬಹುದೊಡ್ಡ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು. ಆದರೆ, ಬಾಲಿವುಡ್ನಲ್ಲಿ ಈ ಸಿನಿಮಾ ಹಿಟ್ ಆಗಲಿಲ್ಲ. ಭಾರಿ ನಿರೀಕ್ಷೆಯಿಂದ ತಯಾರಾಗಿದ್ದ ಚಿತ್ರ ಬಿಟೌನ್ ಇಂಡಸ್ಟ್ರಿಯಲ್ಲಿ ಸೋಲು ಕಂಡಿತು.
ಈ ಕುರಿತು ಕನ್ನಡ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಸೌತ್ ನಲ್ಲಿ ಸೂಪರ್ ಹಿಟ್ ಆದ ಸಿನಿಮಾ ಹಿಂದಿಯಲ್ಲಿ ಯಾಕೆ ಮಕಾಡೆ ಮಲಗಿತು ಎಂದು 'ಅವುಕ ರಾಜ' ಬಿಚ್ಚಿಟ್ಟಿದ್ದಾರೆ. ಸುದೀಪ್ ಕೊಟ್ಟ ಕಾರಣವೇನು? ಮುಂದೆ ಓದಿ.....

ವ್ಯಕ್ತಿಯ ಬಯೋಪಿಕ್ ಆಗಿತ್ತು
ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿ ಅವರ ಪರಿಚಯ ಉತ್ತರ ಭಾರತದ ಜನರಿಗೆ ಇರಲಿಲ್ಲ. ಅವರು ಯಾರೆಂದು ತಿಳಿದುಕೊಳ್ಳುವ ಆಸಕ್ತಿಯೂ ಅವರಿಗೆ ಮೂಡಲಿಲ್ಲ. ಯಾಕಂದ್ರೆ, ಸೌತ್ ಇಂಡಸ್ಟ್ರಿಗೆ ನರಸಿಂಹ ರೆಡ್ಡಿ ಹೆಚ್ಚು ಕನೆಕ್ಸ್ ಆಗಿದ್ದರು. ಹಾಗಾಗಿ, ಸೈರಾ ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿದ್ದಾರೆ.

ಮೇಕಿಂಗ್ ಬಗ್ಗೆ ಮೆಚ್ಚುಗೆ
''ಸೈರಾ ನರಸಿಂಹ ರೆಡ್ಡಿ ಸಿನಿಮಾದ ಮೇಕಿಂಗ್ ಬಗ್ಗೆ ಹಿಂದಿ ಆಡಿಯೆನ್ಸ್ ಮೆಚ್ಚುಕೊಂಡಿದ್ದರು. ತಾಂತ್ರಿಕವಾಗಿ ಸಿನಿಮಾ ಗಮನ ಸೆಳೆದಿತ್ತು. ಅದನ್ನು ಹೊರತು ಪಡಿಸಿದರೆ, ಈ ಚಿತ್ರದಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಹೆಚ್ಚಿದ್ದ ಕಾರಣ, ಬಾಲಿವುಡ್ ಮಂದಿ ಸ್ವೀಕರಿಸಲಿಲ್ಲ ಎಂದು ಹೇಳಬಹುದು'' ಎಂಬ ಕಾರಣ ಬಿಚ್ಚಿಟ್ಟಿದ್ದಾರೆ.

ಬಾಹುಬಲಿ ಗೆದ್ದಿದ್ದು ಯಾಕೆ?
ತೆಲುಗು ನಿರ್ದೇಶಕ, ತೆಲುಗು ನಟ ಕಾಣಿಸಿಕೊಂಡಿದ್ದ ಬಾಹುಬಲಿ ಸಿನಿಮಾ ಗೆದ್ದಿದ್ದು ಯಾಕೆ ಎಂದು ಕೂಡ ಸುದೀಪ್ ಮಾತನಾಡಿದ್ದಾರೆ. ''ಬಾಹುಬಲಿ ಸಿನಿಮಾದ ಕಥೆ ಕಾಲ್ಪನಿಕ. ಯಾವ ಇಂಡಸ್ಟ್ರಿ ಬೇಕಾದರೂ ಅದನ್ನು ಸ್ವಾಗತಿಸುತ್ತಾರೆ. ಅದು ಯಾವುದು ಇತಿಹಾಸದಲ್ಲಿ ನಡೆದಿಲ್ಲ. ಆದರೆ, ಸೈರಾ ನರಸಿಂಹ ರೆಡ್ಡಿ ಇತಿಹಾಸದಲ್ಲಿದೆ. ತೆಲುಗು ಮಣ್ಣಿನಲ್ಲಿ ಆ ವ್ಯಕ್ತಿಯ ಹೆಸರಿದೆ. ಹಾಗಾಗಿ, ಅದು ತೆಲುಗು ಆಡಿಯನ್ಸ್ ಗೆ ಹೆಚ್ಚು ಹತ್ತಿರ ಇತ್ತು'' ಎಂದು ವಿವರಿಸಿದ್ದಾರೆ.

ಎರಡು ಚಿತ್ರದಲ್ಲೂ ಸುದೀಪ್ ಇದ್ದರೂ
ಬಾಹುಬಲಿ ಮೊದಲ ಭಾಗದಲ್ಲಿ ಸುದೀಪ್ ನಟಿಸಿದ್ದರು. ಈ ವರ್ಷ ತೆರೆಕಂಡ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಕಿಚ್ಚ ಕಾಣಿಸಿಕೊಂಡಿದ್ದರು. ಅವುಕ ರಾಜ ಎಂಬ ಪಾಳೇಗಾರನ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ಸುದೀಪ್, ಇಡೀ ಸಿನಿಮಾದಲ್ಲಿ ಚಿರಂಜೀವಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಕಿಚ್ಚನ ನಟನೆಗೆ ವೈಯಕ್ತಿಕವಾಗಿ ಪ್ರಶಂಸೆ ವ್ಯಕ್ತವಾಗಿತ್ತು.

ದಬಾಂಗ್ 3 ಚಿತ್ರದಲ್ಲಿ ಕಿಚ್ಚ
ಸಲ್ಮಾನ್ ಖಾನ್ ನಟಿಸಿರುವ ದಬಾಂಗ್-3 ಚಿತ್ರದಲ್ಲಿ ಕಿಚ್ಚ ಸುದೀಪ್ ಖಳನಾಯಕನಾಗಿ ನಟಿಸಿದ್ದಾರೆ. ಡಿಸೆಂಬರ್ 20 ರಂದು ದಬಾಂಗ್ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದ ಸಮಯದಲ್ಲಿ ಸೈರಾ ಸಿನಿಮಾ ಕುರಿತು ಮಾತನಾಡಿದ್ದಾರೆ.


Click it and Unblock the Notifications











