ಈಗೋ ಕ್ಲ್ಯಾಶ್; 'ಟಾಕ್ಸಿಕ್' ನಿರ್ದೇಶಕಿಯನ್ನು ಮೂಲೆಗುಂಪು ಮಾಡಿದ್ರಾ ಯಶ್?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಮಾರ್ಗದರ್ಶನದಲ್ಲಿ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ಬಹಳ ಅದ್ಧೂರಿಯಾಗಿ ಅಷ್ಟೇ ರೋಚಕವಾಗಿ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗ್ತಿದೆ.
ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಾರೆ ಎನ್ನಲಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೆಲ್ಲದರ ನಡುವೆ ಚಿತ್ರದ ಬಗ್ಗೆ ಹೊಸದೊಂದು ವದಂತಿ ಹರಿದಾಡುತ್ತಿದೆ.

ನಟ ಯಶ್ ಮೊದಲಿನಿಂದಲೂ ತಮ್ಮ ಸಿನಿಮಾಗಳ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ. ಕಥೆ, ಚಿತ್ರಕಥೆ, ಕಲಾವಿದರು, ತಂತ್ರಜ್ಞರ ಬಳಗ ಹೀಗೆ ಎಲ್ಲದರ ಕುರಿತು ಆಸಕ್ತಿಯಿಂದ ನೋಡಿಕೊಳ್ಳುತ್ತಾರೆ. 'KGF' ಚಿತ್ರಕ್ಕೂ ಅವರ ಕೊಡುಗೆ ಎಷ್ಟಿದೆ ಎನ್ನುವುದು ಗೊತ್ತೇಯಿದೆ. ಪ್ರಶಾಂತ್ ನೀಲ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ದೊಡ್ಡ ಕನಸು ಕಾಣುವ ಯಶ್ ಅದನ್ನು ನನಸು ಮಾಡಿಕೊಳ್ಳಲು ಹಗಳಿರುಳು ಶ್ರಮಿಸುತ್ತಾರೆ.
'KGF'-2 ಬಳಿಕ ಮುಂದೇನು? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಖುದ್ದು ಯಶ್‌ಗೂ ಇದು ದೊಡ್ಡ ಪ್ರಶ್ನೆಯೇ ಆಗಿತ್ತು. ಸಾಕಷ್ಟು ಕಥೆಗಳನ್ನು ಕೇಳಿ ಕೊನೆಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಹೇಳಿದ ಕಥೆ ಒಪ್ಪಿಕೊಂಡಿದ್ದರು. ಕಥೆ, ಚಿತ್ರಕಥೆ ಮಾಡುವುದಕ್ಕೆ ಸಲಹೆ, ಸೂಚನೆ ನೀಡಿದ್ದರು. ಸದ್ಯ ಸಿನಿಮಾ 60% ರಷ್ಟು ಚಿತ್ರೀಕರಣ ಮುಗಿದಿದೆ. ಆದರೆ ಗೀತು ಮೋಹನ್ ದಾಸ್ ಅವರನ್ನು ಬಿಟ್ಟು ಯಶ್ ತಾವೇ 'ಟಾಕ್ಸಿಕ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ, ಇಬ್ಬರ ನಡುವೆ ಈಗೋ ಕ್ಲ್ಯಾಶ್ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ.

ಎಲ್ಲಾ ಅಂತೆ ಕಂತೆಗಳಿಗೆ ಮಲಯಾಳಂ ನಟ ಸುದೇವ್ ನಾಯರ್ ಪ್ರತಿಕ್ರಿಯಿಸಿದ್ದಾರೆ. ಯಶ್ ಜೊತೆ 'ಟಾಕ್ಸಿಕ್' ಚಿತ್ರದಲ್ಲಿ ಸುದೇವ್ ನಟಿಸಿದ್ದಾರೆ. ಎಲ್ಲಾ ವದಂತಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ನಟ ಹಾಗೂ ನಿರ್ದೇಶಕರ ನಡುವಿನ ಯಾವುದೇ ಈಗೋ ಕ್ಲ್ಯಾಶ್ ನಾನು ಎಂದಿಗೂ ನೋಡಿಲ್ಲ" ಎಂದು ಸುದೇವ್ ಹೇಳಿದ್ದಾರೆ.
ಮಾತು ಮುಂದುವರೆಸಿ "ಇದು ನಾನು ಇದುವರೆಗೆ ಕೆಲಸ ಮಾಡಿದ ಅದ್ಭುತ ತಂಡ. ಯಾವುದೇ ಒತ್ತಡ ಇಲ್ಲದೇ ಇದ್ದ ಸೆಟ್ ಅದು. ಸದ್ಯ ಹರಿದಾಡುತ್ತಿರುವ ಗಾಳಿಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಕೆಲವರು ಅಸೂಯೆಯಿಂದ ಇಂತಹ ವದಂತಿ ಹರಡುತ್ತಿದ್ದಾರೆ. ಇಡೀ ತಂಡ ಒಟ್ಟಾಗಿ ಕೆಲಸ ಮಾಡುವುದಕ್ಕೆ 'ಟಾಕ್ಸಿಕ್' ಒಳ್ಳೆ ಉದಾಹರಣೆ. ಯಶ್ ಬಹಳ ದೊಡ್ಡ ಸ್ಟಾರ್ ಆಗಿದ್ದರೂ ಪ್ರೇಕ್ಷಕರ ನಾಡಿಮಿಡಿತ ಗೊತ್ತು. ಗೀತು ಮೋಹನ್ ದಾಸ್ ಕೊಡುವ ಇನ್‌ಫುಟ್ ಯಶ್ ತೆಗೆದುಕೊಳ್ಳುತ್ತಾರೆ. ಇಬ್ಬರಿಗೂ ಸಿನಿಮಾ ಚೆನ್ನಾಗಿ ಮೂಡಿ ಬರಬೇಕು ಎನ್ನುವುದೊಂದೇ ಗುರಿ. ಅದು ಬಿಟ್ಟು ಯಾವುದೇ ಈಗೋ ಇಬ್ಬರ ನಡುವೆ ಇಲ್ಲ" ಎಂದು ಹೇಳಿದ್ದಾರೆ.
ಯಶ್ ಹಾಗೂ ಗೀತು ಇಬ್ಬರೂ ಸಿನಿಮಾ ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ಬಹಳ ಚರ್ಚಿಸುತ್ತಾರೆ. ಪರಸ್ಪರ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಾರೆ. ಚಿತ್ರೀರಣದ ವೇಳೆ ಸೆಟ್‌ನಲ್ಲಿ ಉತ್ತಮ ವಾತಾವರಣ ಇದೆ ಎಂದು ಸುದೇವ್ ನಾಯರ್ ವಿವರಿಸಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರಲಿದೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ಅಕ್ಷಯ್ ಒಬೆರಾಯ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











