60ನೇ ವರ್ಷದಲ್ಲಿ ಮದುವೆಯಾದ ಲಗಾನ್ ನಟಿ ; ಫೇಸ್‌ಬುಕ್‌ನಲ್ಲಿ ಅರಳಿತು ಪ್ರೀತಿ, ಪರಿಚಯವಾಗಿ 75 ದಿನಗಳಲ್ಲಿ ಮದುವೆ
ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಪ್ರೀತಿಗೆ ಯಾವುದೇ ಗಡಿ ಎನ್ನುವುದು ಕೂಡ ಇರುವುದಿಲ್ಲ. ಪ್ರೀತಿಗೆ ಭಾಷೆ, ಜಾತಿ ಮತಗಳ ಹಂಗಿಲ್ಲ. ಅದು ಯಾವತ್ತು ಬೇಕಾದರೂ ಯಾರ ಮೇಲಾದರೂ ಆಗಬಹುದು. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ.
ಇಬ್ಬರಲ್ಲೂ ಪ್ರೀತಿಯು ಆಳವಾಗಿ ಇದ್ದಾಗ ಅದನ್ನು ಪ್ರಶ್ನಿಸುವ ಕೆಲಸ ಮಾಡಬಾರದು. ಯಾಕೆಂದರೆ ಬದುಕಿನ ಲವಲವಿಕೆಗೆ, ಪತಿ- ಪತ್ನಿ ನಡುವಿನ ಅನ್ಯೋನ್ಯತೆಗೆ, ಅವರ ನಡುವಿನ ಆತ್ಮೀಯತೆಗೆ ಯಾವ ಕೋನದಲ್ಲೂ ವಯಸ್ಸು ಮುಖ್ಯವಾಗುವುದಿಲ್ಲ. ಇದಕ್ಕೆ ಸುಹಾಸಿನಿ ಮುಲಾಯ್ ಅವರ ಪ್ರೇಮಕಥೆ ಅತ್ಯುತ್ತಮ ಉದಾಹರಣೆ.

ಹೌದು, ಸುಹಾಸಿನಿ ಮುಲಾಯ್.. ಬಾಲಿವುಡ್‌ನ ಖ್ಯಾತ ಹಿರಿಯ ನಟಿ. ಪ್ರಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರ ಭುವನ್ ಶೋಮ್ (1969) ಚಿತ್ರದ ಮೂಲಕ ಕೇವಲ 18ರ ಪ್ರಾಯದಲ್ಲೇ ಚಿತ್ರರಂಗಕ್ಕೆ ಬಂದ ಸುಹಾಸಿನಿ ಇಲ್ಲಿಯವರೆಗೆ ನೂರಾರು ಸಿನಿಮಾಗಳನ್ನು ಮಾಡಿದ್ದಾರೆ.
ಆ ಪೈಕಿ ''ಹು ತು ತು''.. ''ಲಗಾನ್''.. '' ದಿಲ್ ಚಾಹ್ತಾ ಹೈ''.. ''ಪೇಜ್ 3'' .. ''ಜೋಧಾ ಅಕ್ಬರ್''.. ''ಪ್ರೇಮ್ ರತನ್ ಧನ್ ಪಾಯೋ'' ಕೆಲ ಜನಪ್ರಿಯ ಚಿತ್ರಗಳು.
ಇಂಥಾ ಸುಹಾಸಿನಿ ಮುಲಾಯ್ ತಮ್ಮ 60ನೇ ವರ್ಷದವರೆಗೆ ಮದುವೆಯೇ ಆಗಿರಲಿಲ್ಲ. ಯಾಕೆಂದರೆ ಇವರಿಗೆ ಸೂಕ್ತವಾದ ಮತ್ತು ಯೋಗ್ಯವಾದ ವ್ಯಕ್ತಿ ಸಿಕ್ಕಿರಲಿಲ್ಲ. ಪ್ರೇಮಾಂಕುರವಾಗಿರಲಿಲ್ಲ. ಹೀಗಾಗಿ ಮದುವೆಯಾಗುವ ಆಸೆಯನ್ನೇ ಸುಹಾಸಿನಿ ಕೈ ಚೆಲ್ಲಿದ್ದರು. ಆದರೆ.. ಸಾಮಾಜಿಕ ಜಾಲತಾಣ ಇವರ ಬದುಕನ್ನು ಬದಲಿಸಿತು. 60ರ ಹರೆಯದಲ್ಲಿ ಕಂಕಣ ಭಾಗ್ಯ ಕೂಡಿ ಬಂತು.ತಮ್ಮ ಈ ಫೇಸ್ ಬುಕ್ ಲವ್ ಸ್ಟೋರಿ ಕುರಿತು ಸುಹಾಸಿನಿ ಸದ್ಯ
ಮಾತನಾಡಿದ್ದಾರೆ.
ಈ ಕುರಿತು ''ಸುಹಾನ ಸಫರ್'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುಹಾಸಿನಿ, ಉದ್ಯೋಗ ಮತ್ತು ಕಲಾತ್ಮಕ ಅವಕಾಶಗಳಿಗಾಗಿ ಫೇಸ್ ಬುಕ್ ಖಾತೆ ತೆರೆಯುವಂತೆ ನನಗೆ ನನ್ನ ಸಹ ನಟಿಯೊಬ್ಬರು ಸಲಹೆ ನೀಡಿದ್ದರು ಎಂದು ಹೇಳಿದ್ಧಾರೆ.

ಅವರು ನೀಡಿದ ಸಲಹೆಯ ಮೇರೆಗೆ ನಾನು ನನ್ನ ಅರವತ್ತನೇ ವರ್ಷದಲ್ಲಿ ಫೇಸ್ ಬುಕ್ ಖಾತೆ ತೆರೆದೆ ಎಂದು ಹೇಳಿರುವ ಸುಹಾಸಿನಿ ಮುಲಾಯ್ , ಅದೊಂದು ದಿನ ನನಗೆ ಡಾ. ಅತುಲ್ ಗುರ್ತು ಅವರ ಪ್ರೊಫೈಲ್ ಕಾಣಿಸಿತು ಎಂದು ಹೇಳಿದ್ದಾರೆ.
ನನಗೆ ಮೊದಲಿಂದ ವಿಜ್ಞಾನದಲ್ಲಿ ಆಸಕ್ತಿ. ಹೀಗಾಗಿ ಶಿಫಾರಸು ಪಟ್ಟಿಯಲ್ಲಿ ಅತುಲ್ ಅವರನ್ನು ಕಂಡು ಭೌತ ವಿಜ್ಞಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿದ್ದಾರಾ ಎಂದು ಆಶ್ಚರ್ಯವಾಯ್ತು ಎಂದು ಹೇಳಿರುವ ಸುಹಾಸಿನಿ, ಅವರು ಆಗ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಕೆಲಸ ಮಾಡುತ್ತಿದ್ದರು, ನಾನು ಸೀದಾ ಅವರಿಗೆ ಎಲ್‌ಹೆಚ್‌ಸಿ (ಲಾರ್ಜ್ ಹ್ಯಾಡ್ರಾನ್ ಕೊಲೈಡರ್) ಅಂದರೆ ಏನು ಎಂದು ಮೆಸೇಜ್ ಮಾಡಿದೆ ಎಂದಿದ್ದಾರೆ. ಈ ಸಾಮಾನ್ಯ ಜ್ಞಾನದ ದಾಹ ನಮ್ಮ ಸಂಬಂಧಕ್ಕೆ ಅಡಿಪಾಯ ಹಾಕಿತು ಎಂದು ತಮ್ಮ ಅಪರೂಪದ ಪ್ರೇಮಕತೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಹೀಗೆ ಶುರುವಾದ ಮಾತುಕಥೆ ಆ ನಂತರ ಮುಂದುವರೆಯಿತು. ನಮ್ಮ ಸಂಬಂಧ ಗಾಢವಾಯ್ತು ಎಂದು ಹೇಳಿರುವ ಸುಹಾಸಿನಿ, ಇಮೇಲ್ ಮತ್ತು ಫೇಸ್ ಬುಕ್‌ನಲ್ಲಿ ಒಂದು ತಿಂಗಳು ನಾವು ನಿರಂತರವಾಗಿ ಮಾತನಾಡಿದೆವು, ಕೊನೆಗೊಂದು ದಿನ ಮುಖಾಮುಖಿ ಭೇಟಿಯಾದೆವು ಎಂದು ಹೇಳಿದ್ದಾರೆ.
ಇಬ್ಬರ ಆಲೋಚನೆ, ಬದುಕಿನ ಮೌಲ್ಯ, ಭವಿಷ್ಯದ ಹಂಬಲ, ಹೊಂದಾಣಿಕೆಯಾದ ಕಾರಣ ಪರಿಚಯವಾದ 75 ದಿನಗಳಲ್ಲಿ ಮದುವೆಯಾಗುವ ತೀರ್ಮಾನಕ್ಕೆ ನಾವು ಬಂದೆವು ಎಂದು ಹೇಳಿರುವ ಸುಹಾಸಿನಿ ಅತುಲ್ ಅವರದ್ದು ಅದ್ಭುತವಾದ ವ್ಯಕ್ತಿತ್ವ, ತುಂಬಾನೇ ಮೃದು ಸ್ವಭಾವದವರು, ವಿಜ್ಞಾನದ ಬಗ್ಗೆ ಅವರು ಮಾತನಾಡಲು ಆರಂಭಿಸಿದರೆ ನನಗೆ ಹೆಚ್ಚು ಅರ್ಥವಾಗುವುದಿಲ್ಲ ಎಂದಿದ್ದಾರೆ.
ಇನ್ನು ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳಲು ಮುಂದಾದಾಗ, ಹಲವರಿಗೆ ನೋಡಿದವರು ಏನಂತಾರೆ ಎನ್ನುವ ಭಯ ಇರುತ್ತೆ. ಈ ಕುರಿತು ಕೂಡ ಮಾತನಾಡಿರುವ ಸುಹಾಸಿನಿ, ಕುಟುಂಬದವರ ಬೆಂಬಲ ಮುಖ್ಯ, ಆರಂಭದಲ್ಲಿ ನನ್ನ ತಾಯಿಗೆ ನಂಬಿಕೆಯೇ ಬರಲಿಲ್ಲ, ಕೊನೆಗೆ ಖುಷಿಯಿಂದ ಬರ ಮಾಡಿಕೊಂಡರು ಎಂದು ಹೇಳಿದ್ದಾರೆ. ಸ್ನೇಹಿತರು ಕೂಡ ಈ ವಯಸ್ಸಿನಲ್ಲಿ ಮದುವೆಯಾಗುವುದರಲ್ಲಿ ತಪ್ಪೇನು ಇಲ್ಲ ಎಂದು ಧೈರ್ಯ ತುಂಬಿದರು ಎಂದಿದ್ದಾರೆ.
ಅಂದ್ಹಾಗೇ ಸುಹಾಸಿನಿ ಅವರಿಗೆ ಇದು ಮೊದಲನೇ ಮದುವೆಯಾದರೆ, ಅತುಲ್ ಅವರಿಗೆ ಇದು ಎರಡನೇ ಮದುವೆ. ಅತುಲ್ ಅವರ ಮೊದಲ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದರು. ಇವರಿಗೆ ಮಗ ಇದ್ದನಾದರೂ ಕೂಡ ದುರದೃಷ್ಟವಶಾತ್, ಆ ಮಗ ಕೂಡ 1991ರಲ್ಲೇ ಇಹಲೋಕ ತ್ಯಜಿಸಿದರು.
ಇನ್ನುಳಿದಂತೆ ಭಾರತದ ಅತ್ಯಂತ ಶ್ರೇಷ್ಠ ಪರಮಾಣು ಸಂಶೋಧನಾ ಸಂಸ್ಥೆ ''ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್''ನಲ್ಲಿ ಅತುಲ್ ಗುರ್ತು ಹಿರಿಯ ವಿಜ್ಞಾನಿಯಾಗಿದ್ದರು. ಜಿನೀವಾದಲ್ಲಿ ನಡೆದ ಯೂರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ಒಕ್ಕೂಟದ ಸಂಶೋಧನೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದ್ದು. ಸದ್ಯ ಸುಹಾಸಿನಿ ಮತ್ತು ಅತುಲ್ ಅವರ ದಾಂಪತ್ಯ ಜೀವನಕ್ಕೆ 14 ವರ್ಷಗಳಾಗಿದ್ದು, ಸುಹಾಸಿನಿ ಮುಲಾಯ್ ಅವರಿಗೆ ಈಗ 75 ವರ್ಷವಾಗಿದೆ.


Click it and Unblock the Notifications