ನ್ಯಾಯಾಲಯದ ಆವರಣದಿಂದಲೇ ನಟಿ ಜಾಕ್ವೆಲಿನ್‌ಗೆ ಆರೋಪಿ ಸುಕೇಶ್ ವ್ಯಾಲಂಟೈನ್ಸ್ ಡೇ ಶುಭಾಶಯ
ಎನ್ಐಎ ನ್ಯಾಯಾಲಯದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ಸುಕೇಶ್ ಚಂದ್ರಶೇಖರ್ ವಿಚಾರಣೆ ನಡೆಯುತ್ತಿದೆ. ಮಂಗಳವಾರ ವಿಚಾರಣೆ ನಂತರ ಎನ್ಐಎ ನ್ಯಾಯಾಲಯದ ಆವರಣದಿಂದ ಹೊರಬರುವ ವೇಳೆ ಸುಖೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದಾನೆ. ಈ ವೇಳೆ ಪ್ರಿಯತಮೆಗೆ ವ್ಯಾಲಂಟೈನ್ಸ್ ಡೇ ಶುಭಾಶಯ ತಿಳಿಸಿದ್ದಾನೆ.
ಸುಕೇಶ್ 217 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿರುವ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಎನ್‌ಐಎ ವಿಚಾರಣೆ ನಡೆಸುತ್ತಿದೆ. ಈತನಿಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪ್ರೇಯಸಿ ಎನ್ನುವ ವಿಚಾರ ಗೊತ್ತೇಯಿದೆ. ಹಾಗಾಗಿ ತನಿಖಾಧಿಕಾರಿಗಳು ಕೆಲ ದಿನಗಳ ಹಿಂದೆ ಆಕೆಯ ವಿಚಾರಣೆ ನಡೆಸಿ ಸಾಕಷ್ಟು ಮಹತ್ವದ ವಿಷಯಗಳನ್ನು ಕಲೆ ಹಾಕಿದ್ದರು. ಮಂಗಳವಾರ ಭಾರೀ ಭದ್ರತೆಯ ನಡುವೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ನ್ಯಾಯಾಲಯದ ಹೊರಗೆ ಸುಕೇಶ್ ಕಾಣಿಸಿಕೊಂಡಿದ್ದನು. ಈ ವೇಳೆ ಸಿಎನ್ಎನ್ನ್ಯೂಸ್18 ವರದಿಗಾರನ ಪ್ರಶ್ನೆಗಳಿಗೆ ಸುಖೇಶ್ ಉತ್ತರಿಸಿದ್ದಾನೆ.

"ನನ್ನನ್ನು ಸುಕೇಶ್ ಬಳಸಿಕೊಂಡಿದ್ದಾನೆ ಎನ್ನುವುದು ಜಾಕ್ವೆಲಿನ್ ಆರೋಪ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?" ಎನ್ನುವ ಪ್ರಶ್ನೆಗೆ "ನಾನು ಈ ಕುರಿತು ಏನನ್ನೂ ಹೇಳಲು ಇಚ್ಚಿಸುವುದಿಲ್ಲ. ಆಕೆ ಈ ರೀತಿ ಹೇಳಲು ಆಕೆಗೆ ಆಕೆಯದ್ದೇ ಕೆಲವು ಕಾರಣಗಳಿರುತ್ತವೆ" ಎಂದಿದ್ದಾನೆ. ನೀನು ಈಗಲೂ ಆಕೆಯನ್ನು ಪ್ರೀತಿಸುತ್ತೀಯಾ ಎಂದು ಕೇಳಿದ್ದಕ್ಕೆ "ನನ್ನ ಕಡೆಯಿಂದ ಆಕೆಗೆ ವ್ಯಾಲೆಂಟೈನ್ಸ್ ಡೇ ಶುಭಾಶಯ ತಿಳಿಸಿ" ಎಂದು ಹೇಳಿ ಭದ್ರತಾ ಸಿಬ್ಬಂದಿ ಜೊತೆ ಹೊರಟು ಹೋಗಿದ್ದಾನೆ. ಇನ್ನು ನೋರಾ ಫತೇಹಿ ಕುರಿತಾದ ಪ್ರಶ್ನೆಗೆ "ಗೋಲ್ಡ್ ಡಿಗ್ಗರ್ ಬಗ್ಗೆ ಏನು ಹೇಳಲ್ಲ" ಎಂದಿದ್ದಾನೆ.
ಕೆಲ ದಿನಗಳ ಹಿಂದೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದರು. "ಸುಕೇಶ್ ತನ್ನನ್ನು ತಾನು ಸನ್ ಟಿವಿ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದ. ಸಾಲದಕ್ಕೆ ಜಯಲಲಿತಾ ತನ್ನ ಅತ್ತೆ ಎಂದು ಕೂಡ ಹೇಳಿದ್ದ. ನನಗೆ ವೀರಾಭಿಮಾನಿ, ತಾನು ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡಬೇಕೆಂದಿದ್ದೇನೆ. ಸನ್ ಟಿವಿ ಮಾಲೀಕನಾಗಿ ಸಾಕಷ್ಟು ಪ್ರಾಜೆಕ್ಟ್‌ಗಳು ಲೈನಪ್ ಆಗಿದೆ. ಸೌತ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದ. ಆತ ನನ್ನ ಜೀವನ ಹಾಗೂ ವೃತ್ತಿ ಜೀವನ ಎರಡನ್ನೂ ಹಾಳು ಮಾಡಿಬಿಟ್ಟ" ಎಂದು ಜಾಕ್ವೆಲಿನ್ ಹೇಳಿದ್ದರು.

"ಆತನನ್ನು ಬಂಧಿಸಿದ ನಂತರವೇ ಸುಕೇಶ್ ಯಾರು? ಆತನ ನಿಜವಾದ ಹೆಸರೇನು? ಆತ ಏನು ಕೆಲಸ ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಯಿತು. ಪಿಂಕಿ ಮೋಸ ಮಾಡಿದಳು. ಆತನ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಆಕೆ ಹೇಳಿರಲಿಲ್ಲ. ಆಕೆಗೆ ಎಲ್ಲವೂ ಗೊತ್ತಿತ್ತು" ಎಂದು ಜಾಕ್ವೆಲಿನ್ ವಿಚಾರಣೆ ವೇಳೆ ವಿವರಿಸಿದ್ದರು.


Click it and Unblock the Notifications











