‘ಆಜ್ ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ’ ಖ್ಯಾತಿಯ ಗಾಯಕಿ ಸುಮನ್ ಕಲ್ಯಾಣ್‌ಪುರ್ ನಿಧನ ; ಕನ್ನಡ ಚಿತ್ರಕ್ಕೂ ಕುಣಿದಿತ್ತು ಇವರ ಕಂಠ

ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಧರ್ಮೇಂದ್ರ.. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಕಾಮಿನಿ ಕೌಶಾಲ್.. ಆಶಾ ಭೋಸ್ಲೆ.. ಭರತ್ ಕಪೂರ್.. ಭರತ್ ಕಾಂತ್.. ಕೆ.ರಾಜನ್.. ದಿಲೀಪ್ ರಾಜ್.. ರಮಾಕಾಂತ್ ದಯಾಮ.. ಅನಿಕ್ ದತ್ತಾ..

ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಚಿತ್ರರಂಗ ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ಕಳೆದುಕೊಂಡಿದೆ. ಹೀಗಿರುವಾಗ ನಿನ್ನೆ (ಮೇ 31) ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಬಾಲಿವುಡ್‌ ಮತ್ತು ಮರಾಠಿ ಚಿತ್ರರಂಗದ ಖ್ಯಾತ ಗಾಯಕಿ ಸುಮನ್ ಕಲ್ಯಾಣ್‌ಪುರ್ (89) ಕೊನೆಯುಸಿರೆಳೆದಿದ್ದಾರೆ.

Suman Kalyanpur the Golden Voice of Aaj Kal Tere Mere Pyar Ke Charche Dies at 89

1937ರಲ್ಲಿ ಢಾಕಾದಲ್ಲಿ (ಪ್ರಸ್ತುತ ಬಾಂಗ್ಲಾದೇಶ) ಜನ್ಮ ಪಡೆದಿದ್ದ ಸುಮನ್ ಮುಂಬೈನ ಪ್ರತಿಷ್ಠಿತ ''ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ'' ಚಿತ್ರಕಲೆ ಕಲಿಯುತ್ತಿದ್ದರು. ಆದರೆ ಇವರಿಗೆ ಒಲಿದಿದ್ದು ಸಂಗೀತ. ಪಂಡಿತ್ ಕೇಶವರಾವ್ ಭೋಲೆ ಮತ್ತು ಉಸ್ತಾದ್ ಖಾನ್ ಅಬ್ದುಲ್ ರೆಹಮಾನ್ ಖಾನ್ ಅವರಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತ ಕಲಿತ ಸುಮನ್, ತಮ್ಮ ಚಿನ್ನದಂತಹ ಕಂಠದ ಮೂಲಕ ಅಂದಿನ ಶ್ರೇಷ್ಠ ಸಂಗೀತ ನಿರ್ದೇಶಕರಾದ ನೌಶಾದ್, ಎಸ್.ಡಿ. ಬರ್ಮನ್ ಮತ್ತು ಶಂಕರ್-ಜೈಕಿಶನ್ ಅವರ ಗಮನ ಸೆಳೆದರು.

1954ರಲ್ಲಿ ತೆರೆಗೆ ಬಂದ ''ಶುಕ್ರಚಿ ಚಾಂದನಿ'' ಮತ್ತು ''ಮಂಗು'' ಚಿತ್ರದ ಮೂಲಕ ಗಾಯಕಿಯಾಗಿ ತಮ್ಮ ವೃತ್ತಿ ಬದುಕು ಶುರು ಮಾಡಿದ ಸುಮನ್, ''ಶರಾಬಿ ಶರಾಬಿ ಯೇ ಸಾವನ್ ಕಾ ಮೌಸಂ''..''ನಾ ತುಮ್ ಹಮೇಂ ಜಾನೋ''.. ''ಪರ್ಬತೋಂ ಕೆ ಪೇಡೋಂ ಪರ್''.. ''ನಿಂಬೋನಿಚ್ಯಾ ಝಾಡಾ ಮಾಗೆ''.. ಸೇರಿದಂತೆ ಹಲವು ಮರೆಯಲಾಗದ ಹಾಡುಗಳಿಗೆ ಧ್ವನಿಯಾದರು. ಇವರ 'ಆಜ್‌ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ''.. ''ನಾ ನಾ ಕರ್ತೆ ಪ್ಯಾರ್''.. ಹಾಡುಗಳು ಇಂದಿಗೂ ಕೂಡ ಹಲವರ ನೆಚ್ಚಿನ ಗೀತೆಗಳು. ಮೊಹಮ್ಮದ್ ರಫಿ ಅವರ ಜೊತೆ ಇವರು ಹಾಡಿರುವ ಹಲವು ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು.

ಇನ್ನು ಸುಮನ್ ಅವರ ಧ್ವನಿಯನ್ನು ಹಲವರು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಧ್ವನಿ ಜೊತೆ ಹೋಲಿಸುತ್ತಿದ್ದರು.ಬಹುತೇಕ ಬಾರಿ ಸುಮನ್ ಹಾಡಿದ್ದ ಹಾಡನ್ನು ಲತಾ ಅವರು ಹಾಡಿದ್ದಾರೆ ಎಂದು ತಪ್ಪಾಗಿ ತಿಳಿದುಕೊಳ್ಳುತ್ತಿದ್ದರು. ''ಆಜ್ ಕಲ್ ತೇರೆ ಮೇರೆ ಪ್ಯಾರ್ ಕೇ ಚರ್ಚೆ'' ಹಾಡು ಇದಕ್ಕೊಂದು ಉದಾಹರಣೆ.

ಆದರೂ ಕೂಡ ಸುಮನ್ ಕಲ್ಯಾಣ್‌ಪುರ್ ಈ ವಿಚಾರದಲ್ಲಿ ಯಾವತ್ತು ಬೇಸರ ಮಾಡಿಕೊಂಡಿರಲಿಲ್ಲ. ಯಾವುದೇ ಮತ್ಸರ ಇಲ್ಲದೇ ಲತಾ ಮಂಗೇಶ್ಕರ್ ಅವರನ್ನು ಆತ್ಮೀಯ ಗೆಳತಿ ಎಂದೇ ಕರೆಯುತ್ತಿದ್ದ ಸುಮನ್, ''ಚಾಂದ್'' ಚಿತ್ರದಲ್ಲಿ ಲತಾ ಮಂಗೇಶ್ಕರ್ ಅವರ ಜೊತೆ ''ಕಭೀ ಆಜ್ ಕಭಿ ಕಲ್'' ಹಾಡನ್ನು ಹಾಡಿದ್ದರು.

ಇನ್ನು ಸುಮನ್ ಕಲ್ಯಾಣ್‌ಪುರ್ ಕೇವಲ ಹಿಂದಿ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ ಮರಾಠಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ ಮತ್ತು ಭೋಜ್‌ಪುರಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ 800ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು ಸುಮನ್.

1964ರಲ್ಲಿ ಬಿಡುಗಡೆಯಾದ ಉದಯ್ ಕುಮಾರ್, ಜಯಂತಿ ಅಭಿನಯದ, ಜಿಕೆ ವೆಂಕಟೇಶ್ ಮತ್ತು ಲಕ್ಷ್ಮಣ್ ಬೆರಳೆಕರ್ ಸಂಗೀತ ನಿರ್ದೇಶನದ ''ಕಲಾವತಿ'' ಚಿತ್ರದ ''ಓಡನಾಡಿ ಬೇಕೆಂದು'' ಹಾಡಿಗೆ ತಮ್ಮ ಕಂಠ ಕುಣಿಸಿದ್ದರು ಸುಮನ್ ಕಲ್ಯಾಣ್ ಪುರ್. ಈ ಸುಮಧುರ ಪ್ರೇಮಗೀತೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದರು.

ಮರಾಠಿಯಲ್ಲಿ ಇವರು ಹಾಡಿದ "ಕೇಶವಾ ಮಾಧವಾ" ಭಕ್ತಿಗೀತೆ ಇಂದಿಗೂ ಅಲ್ಲಿನ ಮನೆಮನೆಗಳಲ್ಲಿ ಮೊಳಗುತ್ತದೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಈ ಅಪ್ರತಿಮ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರ 2023ರಲ್ಲಿ ಅವರಿಗೆ ದೇಶದ ಉನ್ನತ ನಾಗರಿಕ ಪ್ರಶಸ್ತಿಯಾದ ''ಪದ್ಮಭೂಷಣ'' ನೀಡಿ ಗೌರವಿಸಿತ್ತು.

ಸುಮನ್ ಕಲ್ಯಾಣ್‌ಪುರ್ ಅವರ ನಿಧನಕ್ಕೆ ಚಿತ್ರರಂಗದ ಹಲವು ತಾರೆಯರು ಕಂಬನಿ ಮಿಡಿದಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂತಾಪ ಸೂಚಿಸಿದ್ದಾರೆ. ಇದು ಭಾರತೀಯ ಸಂಗೀತ ಲೋಕಕ್ಕೆ ಭರಿಸಲಾಗದ ನಷ್ಟ ಎಂದಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಶ್ರದ್ಧಾಂಜಲಿ ಸಲ್ಲಿಸಿದ್ದು ಅವರ ಹಾಡುಗಳು ಸದಾ ಪ್ರತಿಧ್ವನಿಸುತ್ತವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. 1958ರಲ್ಲಿ ಉದ್ಯಮಿ ರಾಮಾನಂದ ಕಲ್ಯಾಣಪುರ್ ಅವರನ್ನು ಸುಮನ್ ಮದುವೆಯಾಗಿದ್ದರು. ಪುತ್ರಿ ಚಾರು ಅಗ್ನಿ ಅವರನ್ನು ಸುಮನ್ ಅಗಲಿದ್ದಾರೆ.

English summary
"Iconic singer Suman Kalyanpur passes away at 89 due to age-related health issues. Relive the timeless legacy of Bollywood's golden-era songstress."
Read more about: death singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X