ಅಯೋಧ್ಯೆಯಲ್ಲಿ ಮುದುಡಿದ ಕಮಲ, ಯಾವಾಗಲೂ ರಾಜನಿಗೆ ದ್ರೋಹವೇ ಆಗಿದೆ ಎಂದ ರಾಮಾಯಣದ ಲಕ್ಷ್ಮಣ... !
ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೂ ಬಿಜೆಪಿಯ ಬೆಳವಣಿಗೆಗೂ ಅವಿನಾಭಾವ ನಂಟು. 1984ರಲ್ಲಿ ಕೇವಲ ಎರಡು ಸಂಸದರನ್ನ ಹೊಂದಿದ್ದ ಬಿಜೆಪಿ, 2019ರ ಲೋಕಸಭಾ ಚುನಾವಣೆಯ ವೇಳೆಗೆ ಬರೋಬ್ಬರಿ 303 ಸ್ಥಾನ ಗಳಿಸುವವರೆಗೂ ಕಾಣಿಸುವುದು ಅಯೋಧ್ಯೆಯ ರಾಮಜನ್ಮಭೂಮಿ ಹೋರಾಟ ಮಾತ್ರ.
ಹೀಗಾಗಿಯೇ ಈ ಬಾರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ, ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಳಿಕ, ಈ ಬಾರಿಯ ಲೋಕಸಭಾ ಚುನಾ ವಣೆಯಲ್ಲಿ, ರಾಮನ ಪ್ರಭಾವಳಿಯಲ್ಲಿ ಮತ್ತಷ್ಟು ಬಲ ಹೆಚ್ಚಿಸಿಕೊಂಡು ತನ್ನ ಸಾರ್ವಕಾಲಿಕ ಸಾಧನೆಯ ದಾಖಲೆಯನ್ನು ಬರೆಯುವ ಕನಸಿನಲ್ಲಿ ಕಮಲ ಪಾಳಯ ಇತ್ತು. ಆದರೆ ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು. ಪ್ರಜಾಪ್ರಭುತ್ವದಲ್ಲಿ ಪ್ರಭುವಾಗಿರುವ ಮತದಾರರು ಈ ಬಾರಿ ಧರ್ಮ-ರಾಜಕಾರಣವನ್ನ ಒಪ್ಪಲಿಲ್ಲ. ಅಯೋಧ್ಯೆಯಲ್ಲಿ ಭವ್ಯ ಮಂದಿರ ಕಟ್ಟಿ ಜಗವೆಲ್ಲಾ ಕೊಂಡಾಡಿದರೂ ಬಿಜೆಪಿಗೆ ಈ ಬಾರಿ ಶ್ರೀರಾಮ ಒಲಿಯಲಿಲ್ಲ.

ಶ್ರೀರಾಮನ ಕೃಪಾಕಟಾಕ್ಷ ಸಿಗದ ಹಿನ್ನೆಲೆ ಸಹಜವಾಗಿ ಬಿಜೆಪಿ ಆಘಾತಕ್ಕೊಳಗಾಗಿದೆ. ಬಿಜೆಪಿಯಿಂದ ಪ್ರಭಾವಕ್ಕೊಳಗಾದ ಮತದಾರರಿಗೂ ಕೂಡ ನಿರಾಸೆಯಾಗಿದೆ. ಹಾಗಂಥ ಬಿಜೆಪಿಯ ಈ ಸೋಲಿಗೆ ಸಂಪೂರ್ಣ ಅಯೋಧ್ಯೆಯ ಮತದಾರರನ್ನ ಹೊಣೆಯಾಗಿಸುವುದು ಎಷ್ಟು ಸರಿ..? ಇಂತಹದ್ದೊಂದು ಪ್ರಶ್ನೆಯನ್ನ ಸನ್ಮಾನ್ಯ ಸುನಿಲ್ ಲಹರಿ ಅವರು ಹುಟ್ಟುಹಾಕಿದ್ದಾರೆ.
ಹೌದು.. ಸುನಿಲ್ ಲಹರಿ.. ಗೊತ್ತಲ್ವಾ..? ರಮಾನಂದ್ ಸಾಗರ ಅವರ ಜಗದ್ವಿಖ್ಯಾತ ಧಾರಾವಾಹಿ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದವರು. ಜೀವಮಾನವಿಡಿ ಇದೊಂದೇ ಪಾತ್ರ ಮತ್ತು ಧಾರಾವಾಹಿಯ ಮೂಲಕ ಗುರುತಿಸಿಕೊಂಡ ಸುನಿಲ್ ಲಹರಿ ಸದ್ಯಕ್ಕೆ ಅಯೋಧ್ಯೆಯ ಜನರ ಮೇಲೆ ಕೆಂಡ ಕಾರಿದ್ದಾರೆ. ಮನಸೋ ಇಚ್ಛೆ ನಿಂದಿಸಿದ್ದಾರೆ. ಬಿಜೆಪಿ ಪಕ್ಷವನ್ನ ಬಾಹುಬಲಿಗೆ ಮತ್ತು ಅಯೋಧ್ಯೆಯ ಮತದಾರರನ್ನ ಕಟ್ಟಪ್ಪನಿಗೆ ಕೂಡ ಹೋಲಿಸಿದ್ದಾರೆ.

ಶ್ರೀರಾಮನನ್ನು ಬಹುವಾಗಿ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವ ಮೂಲಕ ಹಿಂದುಗಳನ್ನು ಭಾವನಾತ್ಮಕವಾಗಿ ಪ್ರಭಾವಗೊಳಿಸುವ ಪ್ರಯತ್ನ ವಿಫಲವಾದ ಬೆನ್ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷಗೊಂಡ ಸುನಿಲ್ ಲಹರಿ ವನವಾಸದಿಂದ ಹಿಂದಿರುಗಿದ ನಂತರ ಸೀತಾದೇವಿಯನ್ನು ಅನುಮಾನಿಸಿದ ಅಯೋಧ್ಯೆಯ ಪ್ರಜೆಗಳು ಇವರೇ ಎಂಬುದನ್ನು ನಾವು ಮರೆಯುತ್ತಿದ್ದೇವೆ ಎಂದಿದ್ದಾರೆ. ದೇವರನ್ನು ನಿರಾಕರಿಸುವ ವ್ಯಕ್ತಿಯನ್ನು ನೀವು ಏನೆಂದು ಕರೆಯುತ್ತೀರಿ? ಎಂಬ ಪ್ರಶ್ನೆಯನ್ನ ಕೇಳಿ ಸ್ವಾರ್ಥಿ ಎಂಬ ಉತ್ತರವನ್ನೂ ತಾವೇ ಕೊಟ್ಟಿದ್ದಾರೆ.
ಅಯೋಧ್ಯೆಯ ಪ್ರಜೆಗಳು ಯಾವಾಗಲೂ ತಮ್ಮ ರಾಜನಿಗೆ ದ್ರೋಹ ಬಗೆದಿದ್ದಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅವರಿಗೆ ನಾಚಿಕೆಯಾಗಬೇಕು ಎಂದು ಬರೆದುಕೊಂಡಿದ್ದಾರೆ ಲಕ್ಷ್ಮಣ ಪಾತ್ರವನ್ನ ನಿರ್ವಹಿಸಿದ್ದ ಸುನಿಲ್ ಲಹರಿ.
ಮುಂದುವರೆದು ಮಾತನಾಡಿರುವ ಸುನಿಲ್ ನಾನು ಯಾವಾಗಲೂ ವೋಟ್ ಮಾಡಿ ವೋಟ್ ಮಾಡಿ ಎಂದು ಹೇಳುತ್ತಿದ್ದೆ. ಆದರೆ ಯಾರೂ ನನ್ನ ಮಾತು ಕೇಳಲಿಲ್ಲ. ಈಗ ಫಲಿತಾಂಶವನ್ನು ನೋಡಿ. ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಈ ಸರ್ಕಾರ 5 ವರ್ಷ ಇರಬಹುದೇ?' ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.
ಸದ್ಯಕ್ಕೆ ಸುನಿಲ್ ಲಹರಿ ಅವರ ಈ ಅಭಿಪ್ರಾಯವನ್ನ ಕೇಳಿ ಅಯೋಧ್ಯೆಯ ಮತದಾರರು ಕೂಡ ಕೆರಳಿದ್ದಾರೆ. ದೇಶದ ಬೇರೆ ಬೇರೆ ಭಾಗದ ಜನರು ಕೂಡ ಸುನಿಲ್ ಲಹರಿ ಅವರ ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸೋಲಾಗಲಿ..ಗೆಲುವಾಗಲಿ.. ಯಾವುದು ಶಾಶ್ವತವಲ್ಲ ನಿಮ್ಮ ತಪ್ಪುಗಳನ್ನ ಸರಿಪಡಿಸಿಕೊಂಡು ಹೋರಾಟದ ಗುಣವನ್ನು ರೂಢಿಸಿಕೊಳ್ಳಿ ಎಂಬ ಕಿವಿ ಮಾತನ್ನೂ ಹೇಳುತ್ತಿದ್ದಾರೆ. ಧರ್ಮ, ದೇವರು, ಮಂದಿರ ಇವೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಬದುಕಿನ ಮೂಲಭೂತ ಅವಶ್ಯಕತೆಗಳು ಮೊದಲ ಆದ್ಯತೆಯಾಗಿವೆ ಎಂಬುದನ್ನು ಅಯೋಧ್ಯೆಯ ಮತದಾರರು ಸಾಬೀತುಪಡಿಸಿದ್ದಾರೆ ಎಂದು ಸುನಿಲ್ ಲಹರಿ ಅವರ ಕಿವಿಯನ್ನೂ ಕೂಡ ಜನಸಾಮಾನ್ಯರು ಹಿಂಡುತ್ತಿದ್ದಾರೆ.


Click it and Unblock the Notifications











