ಹೊಸ ಉದ್ಯಮಕ್ಕೆ ಕೈ ಹಾಕಿದ ಸನ್ನಿ ಲಿಯೋನ್, ಆದರೆ ಆರಂಭದಲ್ಲಿಯೇ ವಿಘ್ನ..!
ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎಂಬ ಮಾತು ಚಿತ್ರರಂಗದ ಅನೇಕ ತಾರೆಯರಿಗೆ ಸೂಕ್ತವಾಗುತ್ತೆ. ಯಾಕೆಂದರೆ ಸಾಮಾಜಿಕ ಸಮಸ್ಯೆಗಳ ವಿರುದ್ಧ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದ ಕುರಿತು ಗಂಟೆ ಗಟ್ಟಲೆ ಮಾತನಾಡುವ ಇವರು ಆ ನಂತರ ತಾವು ಹೇಳಿದ್ದ ಮಾತುಗಳನ್ನೇ ಮರೆಯುತ್ತಾರೆ. ಹೀಗೆ ಮಾಡಬೇಡಿ, ಹಾಗೇ ಮಾಡಬೇಡಿ ಎಂದು ಲೆಕ್ಚರ್ ನೀಡಿ ಆ ನಂತರ ತಾವೇ ಆ ಕೆಲಸವನ್ನು ಮಾಡ್ತಾರೆ. ಇದಕ್ಕೆ ಸನ್ನಿ ಲಿಯೋನ್ ಸದ್ಯದ ಉದಾಹರಣೆ.
ಹೌದು, ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ 'ನೀಲಿ' ನೆರಳು ಏನೇ ಇರಬಹುದು. ಆದರೆ ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ. ನಟಿಯಾಗಿ ನೆಲೆಯೂರಿದ್ದಾರೆ. ಇವತ್ತು ಸನ್ನಿ ಲಿಯೋನ್ ಬಳಿ ಕೈ ತುಂಬಾ ಅವಕಾಶಗಳಿವೆ. ದಕ್ಷಿಣದಿಂದ ಉತ್ತರದವರೆಗೆ ಅಭಿಮಾನಿ ಬಳಗ ಇದೆ.

ಇಂಥಾ ಸನ್ನಿ ಲಿಯೋನ್ ಉತ್ತರ ಪ್ರದೇಶದ ಲಕ್ನೋದ ಜನರಿಗೆಲ್ಲ ಎಣ್ಣೆ ಹೊಡೆಸಲು ಮುಂದಾಗಿದ್ದಾರೆ. ಲಕ್ನೋ ಹೃದಯ ಭಾಗದಲ್ಲಿಯೇ 'ಚಿಕಾ ಲೋಕಾ' ಹೆಸರಿನಲ್ಲಿ ಬಾರ್ & ರೆಸ್ಟೋರೆಂಟ್ ತೆರೆಯಲು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಜಾಗವನ್ನು ಖರೀದಿಸಿ ತಮ್ಮ ಬಾರ್ ಮತ್ತು ರೆಸ್ಟೋರೆಂಟ್‌ಗೆ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಈಗ ಪ್ರೇಮ್ ಸಿನ್ಹಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಯಾಕೆಂದರೆ ಸನ್ನಿ ಲಿಯೋನ್ ನಿರ್ಮಾಣ ಮಾಡುತ್ತಿರುವ ಈ ಬಾರ್ ಇಂದಿರಾ ಗಾಂಧಿ ಪ್ರತಿಷ್ಠಾನ ಮತ್ತು ಹೈಕೋರ್ಟ್‌ನ ಕೂಗಳತೆಯ ದೂರದಲ್ಲಿದೆ. ಈ ಹಿನ್ನೆಲೆ ಇಲ್ಲಿ ಬಾರ್ ತೆರೆಯುವುದರಿಂದ ಪ್ರದೇಶದ ಸುರಕ್ಷತೆ ಮತ್ತು ನಾಗರಿಕರ ಅನುಕೂಲಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಪ್ರೇಮ್ ಸಿನ್ಹಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಿಷ್ಟೇ ಅಲ್ಲ ತಮ್ಮ ಬಾರ್ ಆಂಡ್ ರೆಸ್ಟೋರೆಂಟ್‌ಗಾಗಿ ಸನ್ನಿ ಲಿಯೋನ್ ಮಕ್ಕಳ ಆಟದ ಮೈದಾನವನ್ನು ಕೂಡ ಆಕ್ರಮಿಸಿಕೊಂಡಿದ್ದಾರೆ, ಹಿರಿಯ ನಾಗರೀಕರಿಗೆ ಮೀಸಲಾದ ಪ್ರದೇಶವನ್ನು ಕೂಡ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರೇಮ್ ಸಿನ್ಹಾ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಈ ಒಂದು ಬಾರ್ ಆಂಡ್ ರೆಸ್ಟೋರೆಂಟ್‌ದಿಂದ ಸುತ್ತಮುತ್ತಲಿನ ಜನರ ಹಲವಾರು ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಿಯ ನಾಗರೀಕರ ಸುರಕ್ಷತೆ ಮತ್ತು ಶಾಂತಿಯ ಬಗ್ಗೆ ಕೂಡ ಪ್ರಶ್ನೆ ಮಾಡಿದ್ದಾರೆ.
ನಿರ್ಮಾಣದ ಕೆಲಸವನ್ನು ಕೂಡಲೇ ನಿಲ್ಲಿಸುವಂತೆ ಹೇಳಿದ್ದಾರೆ. ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆ ನೀಡಿದ್ದಾರೆ. ಇನ್ನು ಲಕ್ನೋ ಅಭಿವೃದ್ದಿ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಕೂಡ ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಅಶೋಕ್ ಕುಮಾರ್ ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದ್ದಾರೆ.
ಸಹಜವಾಗಿ ನ್ಯಾಯಾಲಯ ನೀಡಿದ ಈ ಆದೇಶದಿಂದ ಸನ್ನಿ ಲಿಯೋನ್ ಅವರಿಗೆ ಆತಂಕ ಶುರುವಾಗಿದೆ. ಒಂದ್ವೇಳೆ ಪರವಾನಗಿ ರದ್ದು ಆದರೆ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿದೆ. ಇನ್ನು ಸನ್ನಿ ಲಿಯೋನ್ ತಮ್ಮ ಈ ಬಾರ್ ಆಂಡ್ ರೆಸ್ಟೋರೆಂಟ್ ಕಟ್ಟಡಕ್ಕೆ ನಿರ್ಮಾಣಕ್ಕೆ ಈಗಾಗಲೇ ಕೋಟ್ಯಂತರ ಹಣವನ್ನು ಖರ್ಚು ಮಾಡಿದ್ದಾರೆ. ಇನ್ನೇನು ಕೆಲ ದಿನಗಳ ಕೆಲಸ ಮುಗಿದರೆ ಕಟ್ಟಡ ನಿರ್ಮಾಣದ ಸಂಪೂರ್ಣ ಕೆಲಸ ಮುಗಿಯಲಿದೆ. ಹೀಗಿರುವಾಗ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಯಾರೇ ಆಗಿರಲಿ ಹಣಕಾಸಿನ ವಿಚಾರದಲ್ಲಿ ಟೆನ್ಷನ್ ಮಾಡಿಕೊಳ್ಳುವುದು ಸರ್ವೆ ಸಾಮಾನ್ಯ. ಸದ್ಯ ಸನ್ನಿ ಲಿಯೋನ್ ನ್ಯಾಯಾಲಯದ ಈ ತೀರ್ಪಿನ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಬೇಕಿದೆ.


Click it and Unblock the Notifications











