'ದಿ ಡರ್ಟಿ ಪಿಕ್ಟರ್' ಸೀಕ್ವೆಲ್ ಫಿಕ್ಸ್: ನಾಯಕಿ ಯಾರು?
ಬಾಲಿವುಡ್ ಸೂಪರ್ ಹಿಟ್ ಬಯೋಪಿಕ್ ಸಿನಿಮಾ 'ದಿ ಡರ್ಟಿ ಪಿಕ್ಚರ್'. 11 ವರ್ಷಗಳ ಹಿಂದೆ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನ ಕಥೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್‌ಗೆ ಭರ್ಜರಿ ಪ್ಲ್ಯಾನ್ ನಡೀತಿದೆ.
ಸಿನಿಜಗತ್ತಿನಲ್ಲಿ ಸೀಕ್ವೆಲ್ ಸಿನಿಮಾಗಳ ಸಂಖ್ಯೆ ಹೆಚ್ಚಾಗ್ತಿದೆ. ಕಥೆಯನ್ನು ಎರಡು ಭಾಗಗಳಾಗಿ ಸಿನಿಮಾ ಮಾಡಿ ಕಟ್ಟಿಕೊಟ್ಟು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆಯುವ ಟ್ರೆಂಡ್ ಜೋರಾಗಿದೆ. 'ಬಾಹುಬಲಿ', 'ಕೆಜಿಎಫ್', 'ಪುಷ್ಪ' ಸರಣಿ ಸಕ್ಸಸ್‌ನಿಂದ ಈಗ ಹಳೇ ಸಿನಿಮಾಗಳ ಕಥೆಯನ್ನು ಮುಂದುವರೆಸುವ ಪ್ರಯತ್ನ ಶುರುವಾಗಿದೆ. ಮಿಲನ್ ಲುಥ್ರಿಯಾ ನಿರ್ದೇಶನದಲ್ಲಿ ವಿದ್ಯಾಬಾಲನ್ ನಟಿಸಿದ್ದ 'ದಿ ಡರ್ಟಿ ಪಿಕ್ಚರ್' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈಗ ಕಥೆಯನ್ನು ಮುಂದುವರೆಸಲು ಬಿಟೌನ್ ಅಂಗಳದಲ್ಲಿ ಕಸರತ್ತು ಶುರುವಾಗಿದೆ.
'ದಿ ಡರ್ಟಿ ಪಿಕ್ಚರ್' ಸಿನಿಮಾ ಕಥೆ ಮುಗಿದು ಹೋಗಿದೆ. ಸಿಲ್ಕ್ ಸ್ಮಿತಾ ಬಾಲ್ಯದಿಂದ ಹಿಡಿದು ಆಕೆ ಸಾವಿನವರೆಗೆ ಸಂಪೂರ್ಣ ಕಥೆಯನ್ನು ಈಗಾಗಲೇ ಆ ಚಿತ್ರದಲ್ಲಿ ಹೇಳಿದ್ದಾಯ್ತು. ಈಗ ಸೀಕ್ವೆಲ್ ಹೇಗೆ ಸಾಧ್ಯ ಅನ್ನುವ ಅನುಮಾನ ಮೂಡುವುದು ಸಹಜ. ಆದರೆ ತೆರೆಮೇಲೆ ಎಲ್ಲವೂ ಸಾಧ್ಯ. ಅದೇ ಕಾರಣಕ್ಕೆ 'ದಿ ಡರ್ಟಿ ಪಿಕ್ಚರ್' ಸೀಕ್ವೆಲ್ ಬಗ್ಗೆ ಭಾರೀ ಕುತೂಹಲ ಮೂಡಿದೆ. ಸೂಪರ್ ಹಿಟ್ ಸಿನಿಮಾ ಕಥೆಗೆ ಮತ್ತೆ ಜೀವ ಕೊಡುವ ಮಾತುಗಳು ಕೇಳಿಬರುತ್ತಿದೆ. ಆದರೆ ನಾಯಕಿಯಾಗಿ ವಿದ್ಯಾಬಾಲನ್ ನಟಿಸ್ತಾರಾ ಇಲ್ವಾ ಅನ್ನುವ ಪ್ರಶ್ನೆ ಶುರುವಾಗಿದೆ.

ಸೀಕ್ವೆಲ್‌ನಲ್ಲಿ ವಿದ್ಯಾಬಾಲನ್ ಇರಲ್ವಾ?
ದುರಂತ ಅಂತ್ಯ ಕಂಡಿದ್ದ ನಟಿ ಸಿಲ್ಕ್ ಸ್ಮಿತಾ ಜೀವನದ ವಿವಿಧ ಮಜಲುಗಳನ್ನು 'ದಿ ಡರ್ಟಿ ಪಿಕ್ಚರ್' ಚಿತ್ರದಲ್ಲಿ ಕಣ್ಣಿಗೆ ಕಟ್ಟಿದಂತೆ ಹೇಳಲಾಗಿತ್ತು. ಸಿಲ್ಕ್ ಪಾತ್ರದಲ್ಲಿ ವಿದ್ಯಾಬಾಲನ್ ನಟಿಸಿದ್ದರು ಅನ್ನುವುದಕ್ಕಿಂತ ಜೀವಿಸಿದ್ದರು ಎನ್ನಬಹುದು. ಆದರೆ ಸೀಕ್ವೆಲ್‌ನಲ್ಲಿ ಆಕೆ ನಟಿಸುತ್ತಾರಾ ಇಲ್ವಾ ಅನ್ನುವ ಪ್ರಶ್ನೆ ಎದ್ದಿದೆ. ಕಾರಣ 'ಡರ್ಟಿ ಪಿಕ್ಚರ್' ಪಾರ್ಟ್ 2 ಬಗ್ಗೆ ಈವರೆಗೆ ವಿದ್ಯಾಬಾಲನ್ ಜೊತೆ ಚರ್ಚೆ ನಡೆಸಿಯೇ ಇಲ್ಲವಂತೆ. ಸದ್ದಿಲ್ಲದೇ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದ್ದು, ನಾಯಕಿಯಾಗಿ ಬೇರೆ ನಟಿಯ ಆಗಮನವಾಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

'ದಿ ಡರ್ಟಿ ಪಿಕ್ಚರ್' ಸೀಕ್ವೆಲ್ ಹೇಗೆ ಸಾಧ್ಯ?
ಮೊದಲೇ ಹೇಳಿದಂತೆ 'ದಿ ಡರ್ಟಿ ಪಿಕ್ಚರ್' ಸಿನಿಮಾ ಕಥೆಗೆ ಶುಭಂ ಹೇಳಿದ್ದಾಗಿದೆ. ಸಿಲ್ಕ್ ಸ್ಮಿತಾ ಸತ್ತು ಆಕೆಯ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ತೋರಿಸಲಾಗಿದೆ. ಈಗ ಕಥೆ ಹೇಗೆ ಮುಂದುವರೆಸಲು ಸಾಧ್ಯ ಅನ್ನುವ ಕುತೂಹಲ ಮೂಡಿದೆ. 11 ವರ್ಷಗಳ ಹಿಂದೆ ಸೀಕ್ವೆಲ್ ಸಿನಿಮಾ ಕಾನ್ಸೆಪ್ಟ್ ಇರಲಿಲ್ಲ. ಹಾಗಾಗಿ ಸಿಲ್ಕ್ ಸ್ಮಿತಾ ಕಥೆಯನ್ನು ಎರಡೂವರೆ ಗಂಟೆಯಲ್ಲಿ ಹೇಳಿ ಮುಗಿಸಲಾಗಿತ್ತು. ಸಿನಿಮಾ ಕಾಲಾವಧಿಯ ಹೆಚ್ಚಾಗುತ್ತದೆ ಅನ್ನುವ ಕಾರಣಕ್ಕೆ ಸಾಕಷ್ಟು ಸಂಗತಿಗಳನ್ನು ಬಿಟ್ಟು ಕಥೆ ಹೇಳಿದ್ದರು. ಪ್ರೀಕ್ವೆಲ್‌ನಲ್ಲಿ ಹೇಳದೇ ಬಿಟ್ಟ ಸಂಗತಿಗಳನ್ನು ಸೀಕ್ವೆಲ್‌ನಲ್ಲಿ ಹೇಳುತ್ತಾರಂತೆ.

100 ಕೋಟಿ ಕ್ಲಬ್ ಸೇರಿದ್ದ 'ದಿ ಡರ್ಟಿ ಪಿಕ್ಚರ್'
ಬಾಲಿವುಡ್‌ನಲ್ಲಿ ಬಯೋಪಿಕ್ ಸಿನಿಮಾಗಳಿಗೆ ಅಗ್ರಪಂಕ್ತಿ ಹಾಕಿಕೊಟ್ಟ ಸಿನಿಮಾ ಇದು. ಅಂದಿನ ಕಾಲಕ್ಕೆ 18 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 117 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿತ್ತು. ವಿಮರ್ಶಕರಿಂದ ಪ್ರೇಕ್ಷಕರಿಂದ ಸಿನಿಮಾ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ನಟಿ ವಿದ್ಯಾಬಾಲನ್ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಗೌರವವೂ ಸಿಕ್ಕಿತ್ತು.

'ಊ ಲಾಲಾ ಊ ಲಾಲಾ' ಸೆನ್ಸೇಷನ್
'ಡರ್ಟಿ ಪಿಕ್ಚರ್' ಸಿನಿಮಾ ಆಲ್ಬಮ್ ಸಾಂಗ್ ಸೂಪರ್ ಹಿಟ್ ಆಗಿತ್ತು. ಅದರಲ್ಲೂ 'ಊ ಲಾಲಾ ಊ ಲಾಲಾ ಸಾಂಗ್' ಉಂಟು ಮಾಡಿದ್ದ ಸಂಚಲನ ಅಷ್ಟಿಷ್ಟಲ್ಲ. ಬಪ್ಪಿ ಲಹರಿ, ಶ್ರೇಯಾ ಘೋಷಾಲ್ ಹಾಡಿದ್ದ ಈ ಐಟಂ ಸಾಂಗ್ ಸಿನಿರಸಿಕರನ್ನು ಕುಣಿಸಿತ್ತು. ಹಾಡಿನಲ್ಲಿ ವಿದ್ಯಾಬಾಲನ್ ಸಿಕ್ಕಾಪಟ್ಟೆ ಸೆಕ್ಸಿಯಾಗಿ ಕಾಣಿಸಿಕೊಂಡು ಬಿಸಿಯೇರಿಸಿದ್ದರು. ಇವತ್ತಿಗೂ ವಿದ್ಯಾಬಾಲನ್ ಅಂದರೆ ಬಹುತೇಕರಿಗೆ ಈ ಹಾಡು ನೆನಪಾಗುತ್ತದೆ.


Click it and Unblock the Notifications











