ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ, ನೆಮ್ಮದಿಯ ನಿಟ್ಟುಸಿರು ಬಿಟ್ಟ ರಿಯಾ ಚಕ್ರವರ್ತಿ...!
ಸುಶಾಂತ್ ಸಿಂಗ್ ರಜಪೂತ್, ನಿಮಗೆ ನೆನಪಿರಬೇಕು..? ಬಾಲಿವುಡ್‌ನ ಸ್ಪುರದ್ರೂಪಿ ನಾಯಕ. ಒಂದು ಕಾಲದಲ್ಲಿ ಬಾಲಿವುಡ್‌ನ ಬೆರಗುಗಣ್ಣಿಂದ ಅನೇಕರು ನೋಡುತ್ತಿದ್ದ ಸಮಯದಲ್ಲಿ.. ಬಿಹಾರದಿಂದ ಬಂದು, ಹಿಂದಿ ಉದ್ಯಮದ ಚಕ್ರವ್ಯೂಹ ಭೇದಿಸಿ ಸ್ಟಾರ್ ಆದ ಸುಶಾಂತ್ ಸಿಂಗ್ ರಜಪೂತ್, ನಾಲ್ಕು ವರ್ಷದ ಹಿಂದೆ ಸತ್ತು ಮಲಗಿದ್ದಾಗ.. ಕಣ್ಣೀರು ಹಾಕಿದವರಿಗಿಂತ, ಇವರ ಶವ ಇಟ್ಟುಕೊಂಡು ರಾಜಕೀಯ ಮಾಡಿದವರೇ ಹೆಚ್ಚು.
ಅವತ್ತು ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನ ಅನೇಕರು ಹೇಳಿದರು. ಮಾದಕ ಮಾಯಾಜಾಲ ಹೆಣೆದರು. ರಿಹಾ ಚಕ್ರವರ್ತಿಯನ್ನ ಕಂಬಿ ಹಿಂದೆ ಕಳಿಸಿ ಸಂಭ್ರಮವನ್ನೂ ಪಟ್ಟರು. ಇನ್ನೂ ಅವತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ, ಟ್ರೆಂಡ್ ಆದ ಹ್ಯಾಶ್ ಟ್ಯಾಗ್ ಸಂಖ್ಯೆ ಲೆಕ್ಕಕ್ಕೆ ಇಲ್ಲ.

ಇವತ್ತು ಕೂಡ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಹಿಂದಿನ ಅಸಲಿ ಕಾರಣ ನಿಗೂಢವಾಗಿಯೇ ಉಳಿದಿದೆ. ಆದರೆ .. ಅವತ್ತು ಸುಶಾಂತ್ ಸಿಂಗ್ ಆತ್ಮಹತ್ಯೆಯ ಸುತ್ತ ಮುತ್ತ ನಡೆದ ವಾಗ್ಯುದ್ಧ ಇವತ್ತು ಕಾಣಿಸಲ್ಲ. ಆ ಉತ್ಸಾಹ ಕೂಡ ಯಾರಲ್ಲಿಯೂ ಇಲ್ಲ. ಇದರ ನಡುವೆ ಈ ಪ್ರಕರಣದಲ್ಲಿ ಸಿಲುಕಿ ನರಳಿದ್ದ ರಿಯಾ ಚಕ್ರವರ್ತಿಯ ಖುಷಿ ಹೆಚ್ಚಾಗುವಂತಹ ಸುದ್ದಿ ಹೊರ ಬಂದಿದೆ. ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಹಾಗೂ ತಂದೆ ಕರ್ನಲ್ ಇಂದ್ರಜಿತ್ ಚಕ್ರವರ್ತಿ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್ ಔಟ್ ನೋಟಿಸ್‌ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಹೌದು, ಅಸಲಿಗೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಸುಶಾಂತ್ ಸಿಂಗ್ ರಜಪೂತ್ ಕುಟುಂಬ ಪಾಟ್ನಾದಲ್ಲಿ ಎಫ್‌ಐಆರ್ ದಾಖಲಿಸಿತ್ತು. ಆ ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆ ನಂತರ ಸುಶಾಂತ್ ಸಿಂಗ್ ರಜಪೂತ್ ಖಾತೆಯಿಂದ ಅನುಮಾನಸ್ಪದವಾಗಿ 15 ಕೋಟಿ ಹಣ ವರ್ಗಾವಣೆಯಾಗಿದ್ದು, ಆ ಹಣವನ್ನು ರಿಯಾ ಚಕ್ರವರ್ತಿ ಬಳಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬವನ್ನು ಪ್ರಶ್ನಿಸಲಾಯಿತು. ಅವರ ಆದಾಯ, ಹೂಡಿಕೆಯನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡಿತ್ತು. ಇದರ ನಡುವೆ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬ ದೇಶವನ್ನು ತೊರೆಯದಂತೆ ಸಿಬಿಐ 2020ರಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು. ಸಿಬಿಐ ಸಲ್ಲಿಸಿದ್ದ ಈ ಲುಕ್ ಔಟ್ ನೋಟಿಸ್ ವಿರುದ್ಧ ರಿಯಾ ಚಕ್ರವರ್ತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ ವಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್ ಲುಕ್ ಔಟ್ ನೋಟಿಸ್ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆಯನ್ನು ಇಂದು ಮಾಡಿದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರ ಪೀಠ ಸಿಬಿಐ ತನಿಖೆಯನ್ನು ತಿರಸ್ಕರಿಸಿದೆ. ಬಾಂಬೆ ಹೈ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದು ಸಿಬಿಐಗೆ ಎಚ್ಚರಿಕೆಯನ್ನು ಕೂಡ ನೀಡಿದೆ. ಆರೋಪಿಗಳಲ್ಲಿ ಒಬ್ಬರು ಹೈಪ್ರೊಪೈಲ್ ವ್ಯಕ್ತಿಯಾದ ಕಾರಣ ಮಾತ್ರಕ್ಕೆ ನೀವು ಈ ಕ್ಷುಲ್ಲಕ ಕಾರಣಕ್ಕೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಬಿಆರ್ ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರ ಪೀಠ ಹೇಳಿದೆ.
ಇನ್ನುಳಿದಂತೆ ರಿಯಾ ಚಕ್ರವರ್ತಿ ಕೆಲ ದಿನಗಳ ಹಿಂದೆ ತಾವು ಜೈಲಿನಲ್ಲಿದ್ದ ಆ ಕರಾಳ ದಿನಗಳನ್ನು ಮೆಲುಕು ಹಾಕಿದ್ದರು. ಹುಮನ್ಸ್ ಆಫ್ ಬಾಂಬೆ ಜೊತೆ ನಡೆದ ಮಾತುಕಥೆಯ ಸಮಯದಲ್ಲಿ ಜೈಲಿನ ಅನುಭವ ಹಂಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು.


Click it and Unblock the Notifications











