2 ತಿಂಗಳ ನಂತರ ಜೈಲಿಂದ ಹೊರ ಬಂದ ರಾಝ್ ನಿರ್ದೇಶಕ ; 30 ಕೋಟಿ ಉಂಡೆನಾಮ ಪ್ರಕರಣ-ವಿಕ್ರಮ್ ಭಟ್‌ಗೆ ಬಿಗ್ ರಿಲೀಫ್
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಮನೆ ಕೆಲಸ ಮಾಡುವ ನೆಪದಲ್ಲಿ ಬಂದು ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ಇರೋ ಬರೋ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ.
ಮತ್ತೊಂದು ಕಡೆ ಚಿತ್ರರಂಗದವರು ಕೂಡ ತಾವೇನು ಕಡಿಮೆ ಇಲ್ಲ ಎಂಬಂತೆ ಕಂಡ ಕಂಡವರಿಗೆ ಉಂಡೆನಾಮ ಹಾಕುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪೊಲೀಸರ ಅತಿಥಿಯಾಗಿದ್ದ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ವಿಕ್ರಂ ಭಟ್ ಹೆಚ್ಚು ಕಡಿಮೆ ಎರಡು ತಿಂಗಳ ನಂತರ ಕೊನೆಗೂ ಸದ್ಯ ಬಂಧನದಿಂದ ಮುಕ್ತರಾಗಿದ್ದಾರೆ. ಜೈಲಿಂದ ಬಿಡುಗಡೆಯಾಗಿದ್ದಾರೆ.

ಹೌದು, ''ಫರೇಬ್''.. ''ಗುಲಾಮ್''.. ''ಕಸೂರ್''.. ''ಆಪ್ ಮುಝೇ ಅಚ್ಚೆ ಲಗನೇ ಲಗೇ''.. ''ಆವಾರಾ ಪಾಗಲ್ ದಿವಾನಾ''.. ''ದಿವಾನೆ ಹುಯೇ ಪಾಗಲ್''.. ಹೀಗೆ ಹಲವು ಸದಭಿರುಚಿ ಸಿನಿಮಾಗಳನ್ನು ಮಾಡಿದ ಕೀರ್ತಿ ಇವರದ್ದು.
ಇಷ್ಟೇ ಅಲ್ಲ.. ಚಿತ್ರೋದ್ಯಮದಲ್ಲಿಯೇ ಹೊಸ ಅಲೆ ಎಬ್ಬಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾ ''ರಾಝ್''ನ ಹಿಂದಿರುವ ರೂವಾರಿ ಕೂಡ ಇವರೇ. ''ರಾಝ್''.. '''ರಾಝ್ 3D''.. ''ರಾಝ್ ರೀಬೂಟ್''.. ''1920''.. ''ಶಾಪಿತ್''.. ''ಹಾಟೆಂಡ್''.. ಹೀಗೆ ಹಲವಾರು ಪ್ರೇತಾತ್ಮದ ಕಥೆಯನ್ನೊಂದಿರುವ ಹಾರರ್ ಚಿತ್ರಗಳು ತೆರೆಗೆ ಬಂದಿದ್ದು ಇವರ ಬತ್ತಳಿಕೆಯಿಂದಲೇ.
ಇಂಥಾ ವಿಕ್ರಂ ಭಟ್ ಕಳೆದ ವರ್ಷಾಂತ್ಯದಲ್ಲಿ ಪೊಲೀಸರ ಅತಿಥಿಯಾಗಿದ್ದರು. ರಾಜಸ್ಥಾನದ ಪೊಲೀಸರು ಮುಂಬೈಗೆ ಬಂದು ಇವರನ್ನು ಬಂಧಿಸಿದ್ದರು. ಮುಂಬೈನ ವೆರ್ಸೋವಾ, ಅಂಧೇರಿ ಪಶ್ಚಿಮದಲ್ಲಿ ಸಂಬಂಧಿಕರ ಮನೆಯಲ್ಲಿದ್ದ ವಿಕ್ರಮ್ ಭಟ್ ಅವರನ್ನು ವಶಕ್ಕೆ ಪಡೆದಿದ್ದರು.
ಕೇವಲ ವಿಕ್ರಮ್ ಭಟ್ ಮಾತ್ರವಲ್ಲದೇ ಅವರ ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದರು. 30 ಕೋಟಿ ವಂಚನೆ ಪ್ರಕರಣದಲ್ಲಿ ವಿಕ್ರಮ್ ಮತ್ತು ಅವರ ಪತ್ನಿ ಶ್ವೇತಾಂಬರಿ ಅವರನ್ನು ಪೊಲೀಸರು ಬಂಧಿಸಿದ್ದರು.

ಉದಯಪುರದ ಇಂದಿರಾ ಗ್ರೂಫ್ ಆಫ್ ಕಂಪನಿಯ ಮಾಲೀಕ ಡಾ.ಅಜಯ್ ಮುರ್ದಿಯಾ ಅವರು ವಿಕ್ರಮ್ ಭಟ್ ವಿರುದ್ಧ ದೂರು ಸಲ್ಲಿಸಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು.
ಹೌದು, ನಿಮಗೆ ಗೊತ್ತಿರಲಿ. ಡಾ ಅಜಯ್ ಮುರ್ದಿಯಾ ಇಹಲೋಕ ತ್ಯಜಿಸಿದ ತಮ್ಮ ಪತ್ನಿಯ ಜೀವನಾಧಾರಿತ ಚಿತ್ರವನ್ನು ಮಾಡಬೇಕೆಂದು ಅಂದುಕೊಂಡಿದ್ದರು. ಮೆಹಬೂಬ್ ಮತ್ತು ದಿನೇಶ್ ಕಠಾರಿಯಾ ನೆರವು ಪಡೆದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ವಿಕ್ರಂ ಭಟ್ ಅವರನ್ನು ಮುಂಬೈನ ವೃಂದಾವನ ಸ್ಟುಡಿಯೋದಲ್ಲಿ ಭೇಟಿಯಾಗಿದ್ದರು.
ಈ ಸಮಯದಲ್ಲಿ 200 ಕೋಟಿ ಲಾಭದ ಆಸೆ ತೋರಿಸಿದ್ದ ವಿಕ್ರಂ ಭಟ್, ಡಾ.ಅಜಯ್ ಮುರ್ದಿಯಾ ಅವರಿಂದ 30 ಕೋಟಿ ಹಣವನ್ನು ಪಡೆದಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿಯಷ್ಟೇ ಉಳಿಯಿತು. ಈ ಹಿನ್ನೆಲೆ ಡಾ ಅಜಯ್ ಮುರ್ದಿಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ದೂರು ದಾಖಲಿಸಿದ್ದರು.
ಡಾ ಅಜಯ್ ಮುರ್ದಿಯಾ ನೀಡಿದ ದೂರಿನ ಅನ್ವಯ ಉದಯಪುರ ಪೊಲೀಸರು ವಿಕ್ರಂ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಭಟ್ ಹಾಗೂ ಇತರ ಆರು ಜನರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದರು. ಆ ನಂತರ ಡಿಸೆಂಬರ್ 7ರಂದು ವಿಕ್ರಮ್ ಭಟ್ ಮತ್ತು ಅವರ ಪತ್ನಿಯನ್ನು ಅರೆಸ್ಟ್ ಮಾಡಿದ್ದರು.
ಅಲ್ಲಿಂದ ಇಲ್ಲಿಯವರೆಗೆ ಕತ್ತಲೆ ಕೋಣೆಯಲ್ಲಿದ್ದ ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಸದ್ಯ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠ ದಂಪತಿಗೆ ಮಧ್ಯಂತರ ಜಾಮೀನು ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 19ರಂದು ಮುಂದೂಡಿದೆ.


Click it and Unblock the Notifications











