ನವೆಂಬರ್ ನಲ್ಲಿ ಸುಶಾಂತ್ ಸಿಂಗ್ ಮದುವೆ ಮಾಡಲು ನಿರ್ಧರಿಸಿತ್ತು ಕುಟುಂಬ
ಭಾರತೀಯ ಚಿತ್ರರಂಗಕ್ಕೆ ಭಾನುವಾರ ಕರಾಳ ದಿನವಾಗಿ ಕಾಡುತ್ತಿದೆ. ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಸುದ್ದಿ ಭಾರತೀಯ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತೆ ಆಗಿದೆ. ಜೂನ್ 14 ಮಧ್ಯಾಹ್ನ ಸುಶಾಂತ್ ಸಿಂಗ್ ಇನ್ನಿಲ್ಲ ಎನ್ನುವ ಸುದ್ದಿ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಕುಟುಂಬವರಿಗೆ ಆಘಾತವುಂಟು ಮಾಡಿದೆ.
ಸಕ್ಸಸ್ ಫುಲ್ ನಟನಾಗಿ, ಸ್ಟಾರ್ ಆಗಿ, ಬಹುಬೇಡಿಕೆಯ ಕಲಾವಿದನಾಗಿ ಬಾಲಿವುಡ್ ನಲ್ಲಿ ಗುರುಸಿಕೊಂಡಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹರಿದಾಡುತ್ತಿದೆ. ಮಾಹಿತಿ ಪ್ರಕಾರ ಸುಶಾಂತ್ ಕೆಲವು ತಿಂಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಈ ನಡುವೆ ಕುಟುಂಬವರು ಸುಶಾಂತ್ ಗೆ ಮದುವೆ ಮಾಡಲು ನಿರ್ಧರಿಸಿದ್ದರು ಎನ್ನುವ ಸುದ್ದಿ ಬಹಿರಂಗವಾಗಿದೆ. ಮುಂದೆ ಓದಿ...

ರಿಯಾ ಚಕ್ರವರ್ತಿ ಜೊತೆ ಡೇಟಿಂಗ್
ಸುಶಾಂತ್ ಸಿಂಗ್ ಡೇಟಿಂಗ್ ವಿಚಾರ ಸಹ ಅನೇಕ ಬಾರಿ ಸುದ್ದಿಯಾಗಿತ್ತು. ಇತ್ತೀಚಿಗೆ ನಟಿ ರಿಯಾ ಚಕ್ರವರ್ತಿ ಜೊತೆ ಡೇಟಿಂಗ್ ನಲ್ಲಿದ್ದರು ಎನ್ನುವ ವದಂತಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಇಬ್ಬರು ಹೇಳಿಕೊಂಡಿರಲಿಲ್ಲ. ರಿಯಾ ಜೊತೆ ಮಾರ್ಚ್ ತಿಂಗಳವರೆಗೂ ಕಾಣಿಸಿಕೊಂಡಿದ್ದರು, ಆದರೆ ಆನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಪ್ರೇಮ ವೈಫಲ್ಯ, ಖಿನ್ನತೆ, ಆತ್ಮಹತ್ಯೆ
ಲಾಕ್ ಡೌನ್ ನಲ್ಲಿ ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಒಂಟಿಯಾಗಿ ಜೀವನ ಕಳೆಯುತ್ತಿದ್ದರಂತೆ. ಪ್ರೇಮ ವೈಫಲ್ಯ, ಖಿನ್ನತೆ, ವೈಯಕ್ತಿಕ ಸಂಬಂಧಗಳ ಗೊಂದಲದಿಂದ ಸುಶಾಂತ್ ಸಾವಿಗೆ ಶರಣಾದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ನಡುವೆ ಕುಟುಂಬದವರು ಸುಶಾಂತ್ ಸಿಂಗ್ ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದರು ಎನ್ನುವ ವಿಚಾರವೀಗ ಬಹಿರಂಗವಾಗಿದೆ.

ನವೆಂಬರ್ ನಲ್ಲಿ ಮದುವೆ ಮಾಡಲು ಕುಟುಂಬದ ನಿರ್ಧಾರ
ಸುಶಾಂತ್ ಸಿಂಗ್ ರಜಪೂತ್ ಸೋದರ ಸಂಬಂಧಿ ಸುಶಾಂತ್ ಸಿಂಗ್ ಮದುವೆ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಸುಶಾಂತ್ ಕೈ ಹಿಡಿಯಲಿರುವ ಹುಡುಗಿ ಯಾರು ಎನ್ನುವುದನ್ನು ಬಹಿರಂಗ ಪಡಿಸಿಲ್ಲ ಆದರೆ, ನವೆಂಬರ್ ನಲ್ಲಿ ಮದುವೆ ಮಾಡಲು ಕುಟುಂಬದ ನಿರ್ಧರಿಸಿತ್ತು. ಈ ಬಗ್ಗೆ ಮಾತನಾಡಲು ಸುಶಾಂತ್ ಕುಟುಂಬ ಸದ್ಯದಲ್ಲೇ ಮುಂಬೈಗೆ ಬರಲು ಸಜ್ಜಾಗಿತ್ತು ಎಂದು ಸಹೋದರ ಸಂಬಂಧಿ ಹೇಳಿದ್ದಾರೆ.

ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಮೃತದೇಹ
ಸುಶಾಂತ್ ಸಿಂಗ್ ಕುಟುಂಬದವರು ಪಾಟ್ನದಲ್ಲಿ ನೆಲೆಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಕುಸಿದುಬಿದ್ದಿದ್ದಾರೆ. ಸದ್ಯ ಸುಶಾಂತ್ ಸಿಂಗ್ ಮೃತದೇಹ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಕೊರೊನಾ ಪರೀಕ್ಷೆಗೂ ಒಳಪಡಿಸಲಾಗಿದೆ.

ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಸುಶಾಂತ್
ಕಳೆದ ಕೆಲವು ತಿಂಗಳಿಂದ ಸುಶಾಂತ್ ಸಿಂಗ್ ರಜಪೂತ್ ಖಿನ್ನತೆಯಿಂದ ಬಳಲುತ್ತಿದ್ದರು. ಖಿನ್ನತೆಗೆ ಚಿಕಿತ್ಸೆ ಸಹ ಪಡೆಯುತ್ತಿದ್ದರಂತೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಸುಶಾಂತ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.


Click it and Unblock the Notifications











