ಸುಶಾಂತ್ ಸಿಂಗ್ ದೇಹದಲ್ಲಿ ವಿಷಕಾರಿ ಅಂಶ ಇತ್ತೇ?: ವರದಿ ಹೇಳುವುದೇನು?
ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಉಸಿರುಗಟ್ಟುವಿಕೆಯಿಂದ ಸಂಭವಿಸಿದೆ ಎಂದು ಎರಡು ಮರಣೋತ್ತರ ಪರೀಕ್ಷೆಗಳು ಖಚಿತಪಡಿಸಿದ್ದವು. ಆದರೆ ಸಾವಿಗೆ ಇತರೆ ಅಂಶಗಳೂ ಕಾರಣವಾಗಿರುವ ಸಾಧ್ಯತೆ ಇದೆ ಎಂಬ ಅನುಮಾನಗಳು ವ್ಯಕ್ತವಾಗಿದ್ದರಿಂದ ಅವರ ದೇಹದ ಒಳಾಂಗಗಳನ್ನು ವೈದ್ಯಕೀಯ ಪರೀಕ್ಷೆಗೆ ತೆಗೆದು ಮುಂಬೈನ ಜೆಜೆ ಆಸ್ಪತ್ರೆಗೆ ವಿಶ್ಲೇಷಣೆಗಾಗಿ ರವಾನಿಸಲಾಗಿತ್ತು.
Recommended Video
ಈ ಪರೀಕ್ಷೆಯ ವರದಿ ಮಂಗಳವಾರ ಬಂದಿದೆ. ಒಳಾಂಗಗಳ ಪರೀಕ್ಷೆಯ ಪ್ರಕಾರ 'ಸಾಯುವ ಮುನ್ನ ಸುಶಾಂತ್ ಸಿಂಗ್ ಒದ್ದಾಡಿದ ಯಾವುದೇ ಲಕ್ಷಣಗಳು ಇಲ್ಲ. ಅವರ ಉಗುರುಗಳಲ್ಲಿ ಬೇರೆ ಯಾವುದೇ ಅಂಶ ಪತ್ತೆಯಾಗಿಲ್ಲ' ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸುಶಾಂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಐವರು ವೈದ್ಯರ ತಂಡ ಪರಿಶೀಲಿಸಿ, ಈ ಅಭಿಪ್ರಾಯ ದಾಖಲಿಸಿದೆ. ಮುಂದೆ ಓದಿ...

ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ
ಸುಶಾಂತ್ ಅವರ ಮೃತದೇಹದ ಒಳಾಂಗಗಳನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಅನುಮಾನಾಸ್ಪದ ವಿಷಕಾರಿ ಅಂಶಗಳು ಅಥವಾ ರಾಸಾಯನಿಕ ಪದಾರ್ಥಗಳು ಕಂಡುಬಂದಿಲ್ಲ. ಹೀಗಾಗಿ ಇದು ನೇಣು ಬಿಗಿದಿರುವ ಮೂಲಕವೇ ಉಂಟಾಗಿರುವ ಸಾವು ಎಂದು ಮತ್ತೆ ಹೇಳಲಾಗಿದೆ.

ದೇಹದ ಬಣ್ಣ ಬದಲಾಗಿಲ್ಲ
ಸುಶಾಂತ್ ದೇಹದಲ್ಲಿ ಯಾವುದೇ ರಾಸಾಯನಿಕ ಅಥವಾ ವಿಷ ಇರಲಿಲ್ಲ. ಶವದ ಕುತ್ತಿಗೆಯಲ್ಲಿ ಹಗ್ಗ ಬಿಗಿದ ಗುರುತು ಬಿಟ್ಟರೆ ಬೇರೆ ಗಾಯಗಳಿಲ್ಲ. ಅವರ ದೇಹದ ಮತ್ತು ಉಗುರಿನ ಬಣ್ಣಗಳಲ್ಲಿ ಬದಲಾವಣೆ ಆಗಿಲ್ಲ. ವಿಷಪೂರಿತ ಆಹಾರ ಸೇವನೆ ಮಾಡಿದ ಯಾವುದೇ ಲಕ್ಷಣಗಳಿಲ್ಲ ಎಂದು ಒಳಾಂಗಗಳ ಪರೀಕ್ಷೆ (ವಿಸೇರಾ) ವರದಿ ತಿಳಿಸಿದೆ.

ಅಂತಿಮ ಮರಣೋತ್ತರ ಪರೀಕ್ಷೆ ವರದಿ
ಇದಕ್ಕೂ ಮುನ್ನ ಬಿಡುಗಡೆ ಮಾಡಲಾಗಿದ್ದ ಅಂತಿಮ ಮರಣೋತ್ತರ ಪರೀಕ್ಷೆ ಕೂಡ ಸುಶಾಂತ್ ಅವರ ಸಾವು ನೇಣು ಹಾಕಿಕೊಂಡ ಕಾರಣ ಆಸ್ಪಿಕ್ಸಿಯೇಷನ್‌ನಿಂದಲೇ (ಉಸಿರುಗಟ್ಟುವಿಕೆ) ಸಂಭವಿಸಿದೆ. ಇದರಲ್ಲಿ ಬೇರೆ ಯಾವುದೇ ರೀತಿ ಕೈವಾಡಗಳು ಇಲ್ಲ ಎಂದು ತಿಳಿಸಿತ್ತು.

ರಿಯಾ ಸಹೋದರನ ಹೇಳಿಕೆ ದಾಖಲು
ಸುಶಾಂತ್ ಅವರ ಸಾವಿಗೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ಇದುವರೆಗೂ ಸುಮಾರು 28 ಮಂದಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಗೆಳತಿ ರಿಯಾ ಚಕ್ರಬೊರ್ತಿ ಸಹೋದರ ಸೌಮಿಕ್ ಚಕ್ರಬೊರ್ತಿ ಅವರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಸುಶಾಂತ್ ಮತ್ತು ಸೌಮಿಕ್ ಇಬ್ಬರೂ ಜತೆಗೂಡಿ 'ವಿವಿಡ್ರೇಜ್ ರಿಯಾಲಿಟಿಕ್ಸ್' ಎಂಬ ಕೃತಕ ಬುದ್ಧಿಮತ್ತೆ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. 2019ರಲ್ಲಿ ಅದನ್ನು ರಿಯಾ ಉದ್ಘಾಟಿಸಿದ್ದರು.


Click it and Unblock the Notifications











