ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಕೊಲೆ: ಸಹೋದರಿ ಆರೋಪ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಎರಡು ವರ್ಷಗಳಾಗಿವೆ ಆದರೆ ಅವರ ಸಾವು ಇನ್ನೂ ನಿಗೂಢವಾಗಿಯೇ ಇದೆ. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
2020 ರ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಮೃತ ದೇಹ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ನಡೆಸಿದ ಮುಂಬೈ ಪೊಲೀಸರು ಹೇಳಿದ್ದರು.
ಆದರೆ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ದೊಡ್ಡ ತಿರುವು ದೊರೆತದ್ದು, ತನಿಖೆ ವೇಳೆ ಬಯಲಾದ ಡ್ರಗ್ಸ್ ಜಾಲದಿಂದ. ಆ ಬಳಿಕ ಸುಶಾಂತ್ ಸಿಂಗ್ ಸಾವಿಗೆ ಅನೇಕರು ಅನೇಕ ರೀತಿಯ ವಿವರಣೆಗಳನ್ನು ನೀಡಿದರು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿಯಂತೂ ಸುಶಾಂತ್ ಸಿಂಗ್ ಅನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಯಿತು. ಇದೀಗ ಸುಶಾಂತ್ ಸಿಂಗ್ ಸಹೋದರಿ ಸಹ ಇದೇ ವಿಷಯವನ್ನು ಹೇಳಿದ್ದಾರೆ.
ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್ ಇದೇ ಮೊದಲ ಬಾರಿಗೆ ಟಿವಿ ಸಂದರ್ಶನವೊಂದರಲ್ಲಿ ಭಾಗವಹಿಸಿ ಸಹೋದರ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡಿದ್ದು, ''ನನ್ನ ತಮ್ಮನ ಸಾವು ಅಸಹಜ ಸಾವು, ಅದು ಆತ್ಮಹತ್ಯೆಯಲ್ಲ'' ಎಂದಿದ್ದಾರೆ. ಸ್ವತಃ ಕ್ರಿಮಿನಲ್ ವಕೀಲೆ ಆಗಿರುವ ಪ್ರಿಯಾಂಕಾ ಇದಕ್ಕೆ ಕೆಲವು ಕಾರಣಗಳನ್ನು ಸಹ ನೀಡಿದ್ದಾರೆ.

''ಫ್ಯಾನ್ ಹಾಗೂ ಬೆಡ್ ನಡುವೆ ಅಂತರ ಕಡಿಮೆ ಇತ್ತು''
''ನಾನೊಬ್ಬ ಕ್ರಿಮಿನಲ್ ವಕೀಲೆಯಾಗಿ ನನ್ನ ತಮ್ಮನದ್ದು ಅನುಮಾನಾಸ್ಪದ ಸಾವು ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಆತನ ಕೋಣೆಯಲ್ಲಿ ಫ್ಯಾನ್ ಹಾಗೂ ಬೆಡ್‌ನ ನಡುವಿನ ಅಂತರ, ಬೆಡ್‌ನ ಎತ್ತರ ಎಲ್ಲವನ್ನೂ ಗಮನಿಸಿದಾಗ ಹಾಗೂ ಆತನ ಮೃತದೇಹವನ್ನು ನೋಡಿದ ಬಳಿ ನನಗೆ ಅನುಮಾನ ಹೆಚ್ಚಾಯಿತು. ಆತನ ದೇಹದ ಮೇಲೆ ಆತ್ಮಹತ್ಯೆಯೆಂದು ಹೇಳುವ ಯಾವುದೇ ಕುರುಹು ಇರಲಿಲ್ಲ'' ಎಂದಿದ್ದಾರೆ ಪ್ರಿಯಾಂಕಾ ಸಿಂಗ್.

''ಇದು ಆತ್ಮಹತ್ಯೆಯಲ್ಲ ಎಂಬುದು ಅಂದೇ ನನಗೆ ಗೊತ್ತಾಯಿತು''
''ಅಂದು ಏನಾಯಿತು ಎಂದು ಎಲ್ಲರೂ ನೋಡಿದ್ದಾರೆ. ಪೊಲೀಸರು ಬರುವ ಮುಂಚೆಯೇ ಆ ಸ್ಥಳ ಪಿಕ್‌ನಿಕ್ ಸ್ಥಳವಾದಂತೆ ಆಗಿತ್ತು. ಹಲವರು ಬಂದು ಹೋಗಿದ್ದರು. ನಾನು ತಡ ರಾತ್ರಿ ಅಲ್ಲಿಗೆ ತಲುಪುವ ವೇಳೆಗೆ ಆ ಸ್ಥಳವನ್ನು ಪೊಲೀಸರು ಟೇಪ್ ಹಾಕಿ ಬಂದೊಬಸ್ತ್ ಮಾಡಿದ್ದರು. ಆ ನಂತರ 8-9 ದಿನಗಳ ಬಳಿಕ ಆ ಟೇಪ್ ಅನ್ನು ತೆಗೆದರು. ನಾನು ಆ ಕೋಣೆಯನ್ನು ನೋಡಿದ ಕೂಡಲೆ ಗೊತ್ತಾಯಿತು. ಇದು ಆತ್ಮಹತ್ಯೆಯಂತೂ ಅಲ್ಲವೆಂದು'' ಎಂದಿದ್ದಾರೆ ಪ್ರಿಯಾಂಕಾ.

ಸುಶಾಂತ್ ಸಾವಿನ ಹಿಂದೆ ದೊಡ್ಡ ಜನರ ಕೈವಾಡ: ಪ್ರಿಯಾಂಕಾ
''ನನ್ನ ತಮ್ಮನ ಸಾವಿನ ಹಿಂದೆ ದೊಡ್ಡವರ ತಂಡವೇ ಇದೆ. ಅವನ ಸಾವು ದೊಡ್ಡ ಪಿತೂರಿಯೊಂದರ ಭಾಗ. ಅವನ ಪ್ರತಿಭೆ ಹಾಗೂ ಅವನ ಪಾಂಡಿತ್ಯದ ಬಗ್ಗೆ ಅಸೂಯೆಯುಳ್ಳ ಜನ ಅವನ ಸಾವಿಗೆ ಕಾರಣರಾಗಿದ್ದಾರೆ. ಬಾಲಿವುಡ್‌ನಲ್ಲಿ ಸಾಮಾನ್ಯ ಕುಟುಂಬದ ಪ್ರತಿಭಾವಂತ ಹುಡುಗರ ಬಗ್ಗೆ ಎಷ್ಟು ದ್ವೇಷವಿದೆ ಎಂಬುದು ಅವನ ಸಾವಿನ ಬಳಿಕ ಜಗತ್ತಿಗೆ ಗೊತ್ತಾಯ್ತು. ನಾನು ನನ್ನ ಕೊನೆ ಉಸಿರಿರುವ ವರೆಗೆ ಈ ಕುರಿತು ಹೋರಾಡುತ್ತೇನೆ, ನನ್ನ ತಮ್ಮನ ಸಾವಿಗೆ ನ್ಯಾಯ ಧಕ್ಕಿಸಿಕೊಳ್ಳುತ್ತೇನೆ'' ಎಂದಿದ್ದಾರೆ ಪ್ರಿಯಾಂಕಾ.

ರಿಯಾ ವಿರುದ್ಧ ಆರೋಪ ಮಾಡಿದ್ದ ಪ್ರಿಯಾಂಕಾ
ಸುಶಾಂತ್ ಸಿಂಗ್ ನಿಧನ ಹೊಂದಿದ ಬಳಿಕ ಪ್ರಿಯಾಂಕಾ ಸಿಂಗ್, ಸುಶಾಂತ್ ಸಿಂಗ್‌ನ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಸತತ ಆರೋಪಗಳನ್ನು ಮಾಡಿದ್ದರು. ಬಿಹಾರದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ದೂರು ಸಹ ನೀಡಿದ್ದರು. ಆ ಬಳಿಕ ರಿಯಾ ಚಕ್ರವರ್ತಿ ಸಹ ಪ್ರಿಯಾಂಕಾ ಸಿಂಗ್ ವಿರುದ್ಧ ದೂರು ನೀಡಿದ್ದರು. ಸುಶಾಂತ್‌ಗೆ ವೈದ್ಯರ ಸೂಚನೆ ಇಲ್ಲದೆ ಮಾತ್ರೆಗಳನ್ನು ಪ್ರಿಯಾಂಕಾ ನೀಡುತ್ತಿದ್ದರು ಎಂದು ರಿಯಾ ದೂರಿದ್ದರು. ಇದೀಗ ರಿಯಾ ಸಿಂಗ್, ಸುಶಾಂತ್ ಸಿಂಗ್‌ಗೆ ಗಾಂಜಾ ನೀಡಿದ್ದರು ಎಂದು ಎನ್‌ಸಿಬಿ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಜಾರಿಯಲ್ಲಿದೆ.


Click it and Unblock the Notifications











