ಪ್ರೀತಿ,ಪ್ರೇಮ,ಪ್ರಣಯದಲ್ಲಿ ನನಗೀಗ ಯಾವ ಆಸಕ್ತಿಯೂ ಇಲ್ಲ ಎಂದ ಖ್ಯಾತ ನಾಯಕಿ..!
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ಸುಶ್ಮಿತಾ ಸೇನ್ ವ್ಯೆಯಕ್ತಿಕ ಬದುಕು ಅತ್ಯುತ್ತಮ ಉದಾಹರಣೆ.
ಹೌದು, ಸುಶ್ಮಿತಾ ಸೇನ್.. ಭುವನ ಸುಂದರಿ. ಚಿತ್ರರಂಗದಲ್ಲಿ ಹತ್ತಾರು ಏರಿಳಿತವನ್ನು ಕಂಡ ಸುಶ್ಮಿತಾ ಅವರ ಲವ್ ಲೈಫ್ ಬಾಲಿವುಡ್‌ನಲ್ಲಿ ಮೊದಲಿಂದ ಚರ್ಚಿತ ವಸ್ತು. ಬಾಲಿವುಡ್‌ನ ಸ್ಟಾರ್ ಡೈರೆಕ್ಟರ್ ವಿಕ್ರಂ ಭಟ್ ಅವರಿಂದ ಹಿಡಿದು ರೋಹ್ಮನ್ ಶಾಲ್ ವರೆಗೆ ಆಕರ್ಷಣೆಯ ಅಮಲಿನಲ್ಲಿ ಓಡಾಡಿದವರು ಸುಶ್ಮಿತಾ ಸೇನ್.

ಇಂಥಾ ಸುಶ್ಮಿತಾ ಸೇನ್.. ನಾನು ಈಗ ಸಿಂಗಲ್ ಎಂದಿದ್ದಾರೆ. ಪ್ರೀತಿ-ಪ್ರೇಮ-ಪ್ರಣಯದಲ್ಲಿ ನನಗೀಗ ಯಾವ ಆಸಕ್ತಿಯೂ ಇಲ್ಲ ಎಂದಿದ್ದಾರೆ. ಈ ಮೂಲಕ ಒಂದು ವರ್ಗವನ್ನು ಚಿಂತೆಗೀಡು ಮಾಡಿದ್ದಾರೆ ಸುಶ್ಮಿತಾ ಸೇನ್. ಹೌದು, ನಿಮಗೆ ಗೊತ್ತಿರಲಿ.. 2018ರಲ್ಲಿ ಸುಶ್ಮಿತಾ ಸೇನ್ ತಮಗಿಂತ 15 ವರ್ಷ ಚಿಕ್ಕವನಾದ ರೋಹ್ಮನ್ ಶಾಲ್‌ಗೆ ತಮ್ಮ ಹೃದಯದಲ್ಲಿ ಜಾಗ ನೀಡಿದ್ದರು. ಅಲ್ಲಿಂದಾಚೆ.. 2021ರವರೆಗೆ ಎರಡು ದೇಹ ಒಂದು ಜೀವ ಎಂಬಂತೆ ಒಂದೇ ಸೂರಿನಡಿ ಇಬ್ಬರು ಬದುಕಿದರು.
ಆದರೆ, ಅದೇನಾಯ್ತೋ.. 2021ರಲ್ಲಿ ಈ ಪ್ರೀತಿಯ ಬೇಡಿಯನ್ನು ಬಿಡಿಸಿಕೊಂಡು ಹೊರ ಬಂದರು. ಹಾಗಂಥ ಪ್ರೀತಿ ಕಮರಿದ ನಂತರ ಆ ಜಾಗಕ್ಕೆ ದ್ವೇಷ.. ಅಸೂಯೆ.. ನೋವು.. ಹತಾಶೆಗಳಿಗೆ ಸುಶ್ಮಿತಾ ಆಹ್ವಾನ ನೀಡಲಿಲ್ಲ. ಬದಲಿಗೆ ಪ್ರೀತಿಯನ್ನು ಹೂತು ಹಾಕಿದ ಮೇಲೆ, ನಾವು ಇಬ್ಬರು ಈಗ ಅತ್ಯುತ್ತಮ ಸ್ನೇಹಿತರು ಎಂದರು. ಸಮಯ ಸಿಕ್ಕಾಗ ರೋಹ್ಮನ್ ಶಾಲ್ ಜೊತೆ ಪಬ್ಬು ಕ್ಲಬ್ಬುಗಳಲ್ಲಿಯೂ ಸುಶ್ಮಿತಾ ಕಾಣಿಸಿಕೊಂಡರು. ಇದರ ನಡುವೆ ಲಲಿತ್ ಮೋದಿ ಜೊತೆ ಕೂಡ ಸುಶ್ಮಿತಾ ಸೇನ್ ಹೆಸರು ಥಳುಕು ಹಾಕಿಕೊಂಡಿತ್ತು. ಅಷ್ಟೇ ಬೇಗ ಆ ಸಂಬಂಧವೂ ಮುರಿದು ಬಿತ್ತು ಅನ್ನುವುದು ಬೇರೆ ವಿಚಾರ.
ಹೀಗೆ ಕಾಲ..ಕಾಲಕ್ಕೆ.. ಸಂಸಾರದ ನೌಕೆಯನ್ನೇರದೇ ಕೇವಲ ಪ್ರೇಮ ಅಭ್ಯಾಸವನ್ನಷ್ಟೇ ಮಾಡಿದ ಸುಶ್ಮಿತಾ ಸೇನ್, ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ ರಿಯಾ ಚಕ್ರಬೋರ್ತಿಗೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಪ್ರೀತಿಯಲ್ಲಿ ನಾನು ಬೀಳಲಾರೆ ಎಂದಿದ್ದಾರೆ. ಐದು ವರ್ಷ ರೋಹ್ಮನ್ ಶಾಲ್ ಜೊತೆ ಇದ್ದೇ ಸಾಕು, ಈಗ ನನಗೆ ಬ್ರೇಕ್ ಬೇಕು ಎಂದಿದ್ಧಾರೆ. ಮೂರು ವರ್ಷದಿಂದ ನಾನು ಏಕಾಂಗಿಯಾಗಿದ್ದೇನೆ ಎಂದಿದ್ದಾರೆ. ಒಬ್ಬಂಟಿಯಾಗಿಯೇ ನಾನು ಖುಷಿ ಖುಷಿಯಾಗಿದ್ದೇನೆ ಎಂದು ಕೂಡ ಸುಶ್ಮಿತಾ ಸೇನ್ ಹೇಳಿದ್ಧಾರೆ.

ಮುಂದುವರೆದು ನನ್ನ ಸುತ್ತ ಮುತ್ತ ಅನೇಕ ಆತ್ಮೀಯ ಸ್ನೇಹಿತರು ನನಗೆ ಇದ್ದಾರೆ. ಅವರೆಲ್ಲ ನಾನು ಫೋನ್ ಮಾಡಿ ಕಾರಲ್ಲಿ ಗೋವಾಗೆ ಹೋಗೋಣ ಎಂದು ಯಾವತ್ತು ಹೇಳ್ತೀನಿ ಎಂದೇ ಕಾಯುತ್ತಿರುತ್ತಾರೆ ಎಂದು ಹೇಳಿರುವ ಸುಶ್ಮಿತಾ ಸೇನ್, ನಾನು .. ಐದು ವರ್ಷ ಸಂಬಂಧದಲ್ಲಿದ್ದ ಕಾರಣ ವಿರಾಮ ತೆಗೆದುಕೊಳ್ಳಲು ಇದು ಸೂಕ್ತವಾದ ಸಮಯ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











