"ನಾವೆಲ್ಲ ದ್ವಿಲಿಂಗಿಗಳು.. ಯುಪಿ ಸಂಸದೆ ಡಿಂಪಲ್ ಯಾದವ್ ಅಂದ್ರೆ ಇಷ್ಟ"; ವಿವಾದಾತ್ಮಕ ನಟಿ ಸ್ವರಾ ಭಾಸ್ಕರ್
ಬಾಲಿವುಡ್‌ನ ವಿವಾದಾತ್ಮಕ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ತಮ್ಮ ಲೈಂಗಿಕತೆಯ ಬಗ್ಗೆ ನೀಡಿರುವ ಹೇಳಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸಂದರ್ಶನವೊಂದರಲ್ಲಿ "ನಾವೆಲ್ಲರೂ ದ್ವಿಲಿಂಗಿಗಳು" ಎಂದು ಅವರು ನೀಡಿರುವ ಹೇಳಿಕೆಗಳು ನೆಟ್ಟಿಗರಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಸ್ವರಾ ಭಾಸ್ಕರ್ ಪತಿ ಫಹದ್ ಅಹ್ಮದ್ ಅವರೊಂದಿಗಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ "ನಾವೆಲ್ಲರೂ ದ್ವಿಲಿಂಗಿಗಳು" (We Are All Bisexuals) ಎಂದು ಹೇಳಿಕೊಂಡಿದ್ದಾರೆ. ಹಾಗೇ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಬಗ್ಗೆಯೂ ತಮಗೆ ಕ್ರಶ್ ಆಗಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಪ್ರಸ್ತುತ,ಈ ಹೇಳಿಕೆಯಿಂದ ಸ್ವರಾ ಭಾಸ್ಕರ್ ಮತ್ತು ಫಹದ್ ಅಹ್ಮದ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿವಾದಾತ್ಮಕ ಜೋಡಿ ಮುನಾವರ್ ಫಾರೂಕಿ ಮತ್ತು ಸೋನಾಲಿ ಬೇಂದ್ರೆ ಆಯೋಜಿಸುತ್ತಿರುವ 'ಪತಿ ಪತ್ನಿ ಔರ್ ಪಂಗಾ - ಜೋಡಿಯೋ ಕಾ ರಿಯಾಲಿಟಿ ಚೆಕ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

'ರಾಂಝಣಾ' ಮತ್ತು 'ಅನಾರ್ಕಲಿ ಆಫ್ ಆರಾ' ಸಿನಿಮಾಗಳಲ್ಲಿ ತಮ್ಮ ಅಭಿನಯದಿಂದ ಜನಪ್ರಿಯತೆ ಗಳಿಸಿರುವ ಸ್ವರಾ, ಜಾತಿ, ವರ್ಗ ಮತ್ತು ಲಿಂಗದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದು ಕೆಲವೊಮ್ಮೆ ಸಾರ್ವಜನಿಕ ಟೀಕೆಗಳಿಗೂ ಕಾರಣವಾಗಿದೆ. ಸ್ಕ್ರೀನ್‌ನೊಂದಿಗಿನ ಸಂದರ್ಶನದಲ್ಲಿ, ಸ್ವರಾ ಭಾಸ್ಕರ್ "ಜನರನ್ನು ತಮ್ಮಷ್ಟಕ್ಕೆ ಬಿಟ್ಟರೆ, ನಾವೆಲ್ಲರೂ ದ್ವಿಲಿಂಗಿಗಳು ಆಗುತ್ತೇವೆ. ಆದರೆ, ಸಾವಿರಾರು ವರ್ಷಗಳಿಂದ ವಿಷಮಲಿಂಗತ್ವವನ್ನು ನಮ್ಮ ಮೇಲೆ ಹೇರಲಾಗಿದೆ. ಏಕೆಂದರೆ ಮಾನವ ಸಂತತಿಯು ಮುಂದುವರಿಯಬೇಕು. ಆದ್ದರಿಂದ ಇದೆಲ್ಲವೂ ಸಾಮಾನ್ಯವಾಗಿದೆ" ಎಂದು ಹೇಳಿದ್ದಾರೆ.
ಅವರು ಡಿಂಪಲ್ ಯಾದವ್ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸುತ್ತಿದ್ದಾಗ, ಆ್ಯಂಕರ್ ಫಹದ್ ಅವರಿಗೆ ಕಿವಿ ಮುಚ್ಚಿಕೊಳ್ಳುವಂತೆ ತಮಾಷೆ ಮಾಡಿದರು. ಸ್ವರಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ನೆಗೆಟಿವ್ ಕಮೆಂಟ್‌ಗಳು ವ್ಯಕ್ತವಾಗಿವೆ. ಅನೇಕರು ಇದನ್ನು ಅವರ ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಂಡು ಹೀಗೆಲ್ಲ ಮಾತಾಡಿದ್ದಾರೆಂದು ಕಿಡಿಕಾರಿದ್ದಾರೆ.

ನೆಟ್ಟಿಗರೊಬ್ಬರು "ಇವರು ಈಗ ಸಮಾಜವಾದಿ ಪಕ್ಷದಲ್ಲಿ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅಖಿಲೇಶ್ ಭಯ್ಯ ಇವರಿಗೆ ಗೋರಖ್‌ಪುರದಿಂದ ಟಿಕೆಟ್ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, " ಅವರು ದ್ವಿಲಿಂಗಿ ಆಗಿರಲಿ ಅಥವಾ ಏನೇ ಇರಲಿ. ಆದರೆ ನಾವು ಅಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು "ಇಂತಹ ಬೂಟಾಟಿಕೆ ಮಾಡುವವರಿಗೆ ಬೇರೆಯವರ ಬಗ್ಗೆ ಮಾತನಾಡುವ ಧೈರ್ಯ ಎಲ್ಲಿಂದ ಬರುತ್ತದೆ?" ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಸ್ವರಾ ಭಾಸ್ಕರ್ ಲೈಂಗಿಕತೆಯ ಬಗ್ಗೆ ತಮ್ಮ ಅಭಿಪ್ರಾಯ ಬಹಿರಂಗ ಪಡಿಸಿದ್ದಾರೆಂದು ಹಲವರು ಭಾವಿಸುತ್ತಿದ್ದರೂ, ಇದು ಹೆಚ್ಚು ಸಾಮಾನ್ಯ ಅಥವಾ ತಾತ್ವಿಕ ದೃಷ್ಟಿಕೋನ ಎಂದಿದ್ದಾರೆ. ಹಾಗೇ ಸ್ವರಾ ಹೇಳಿಕೆಗಳು ಕೂಡ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆ ಬಗ್ಗೆ ಸರಿ ಹಾಗೂ ತಪ್ಪುಗಳ ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರು ಸ್ವರಾ ಭಾಸ್ಕರ್ ಲೈಂಗಿಕತೆಯ ಕುರಿತಾದ ಚರ್ಚೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಎಂದೂ ಹೇಳುತ್ತಿದ್ದಾರೆ.


Click it and Unblock the Notifications











