'ಛಾವ' ಚಿತ್ರದ ಬಗ್ಗೆ ಸ್ವರಾ ಭಾಸ್ಕರ್ ಪೋಸ್ಟ್; ಹಿಂದೂ ಸಂಘಟನೆಗಳು ಗರಂ ಆಗಿದ್ದೇಕೆ?
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಛತ್ರಪತಿ ಶಿವಾಜಿ ಪುತ್ರ ಸಾಂಬಾಜಿ ಜೀವನಾಧರಿತ ಕಥೆ ಪ್ರೇಕ್ಷಕರ ಮನಗೆದ್ದಿದೆ. ಸಾಂಬಾಜಿ ಶೌರ್ಯ ಪರಾಕ್ರಮ ಸಾರಿ ಹೇಳುವ ಸಿನಿಮಾ ಸದ್ದು ಮಾಡ್ತಿದೆ. ತನ್ನವರಿಂದಲೇ ಆತ ಹೋಗಿದ್ದು ಕೊನೆಗೆ ಚಿತ್ರಹಿಂಸೆ ಅನುಭವಿಸಿದ್ದು ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ.
'ಛಾವ' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಮೋಸದಿಂದ ಸಿಕ್ಕಿಬಿದ್ದ ಸಾಂಬಾಜಿಗೆ ಮೊಘಲ್ ಚಕ್ರವರ್ತಿ ಔರಂಗಜೇಬ್ ನೀಡುವ ಶಿಕ್ಷೆ, ಚಿತ್ರಹಿಂಸೆಯ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲ ಪ್ರೇಕ್ಷಕರು ಸಿನಿಮಾ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮರಾಠ ಛತ್ರಪತಿಗೆ ಇಷ್ಟೆಲ್ಲಾ ಹಿಂಸೆ ಕೊಟ್ರಾ? ಎಂದು ಕುದಿಯುತ್ತಿದ್ದಾರೆ.

ಸದ್ಯ 'ಛಾವ' ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಕುಂಭಮೇಳದ ಕಾಲ್ತುಳಿತ ಘಟನೆಗೆ ಹೋಲಿಸಿ ನಟಿ ಸ್ವರಭಾಸ್ಕರ್ ವ್ಯಂಗ್ಯವಾಡಿದ್ದಾರೆ. ಆಕೆ ಮಾಡಿರುವ ಪೋಸ್ಟ್ ಬಗ್ಗೆ ಹಿಂದೂ ಸಂಘಟನೆಗಳು ಕೆಂಡಾಮಂಡಲವಾಗಿವೆ. ಆಕೆಯ ಪೋಸ್ಟ್ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ನಡುವೆ ಇರುವವರೇ ನಮ್ಮ ಇತಿಹಾಸ, ಪರಂಪರೆ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸ್ವರಾ ಭಾಸ್ಕರ್ ಟ್ವೀಟ್ ಮಾಡಿ "ಕುಂಭಮೇಳ ಕಾಲ್ತುಳಿತ ಪ್ರಕರಣ ನಡೆದು ಜನ ಸತ್ತರೂ ಬಳಿಕ ಜೆಸಿಬಿ ಬಳಸಿ ಶವಗಳನ್ನು ಮುಚ್ಚಿ ಹಾಕಿದರೂ ಎನ್ನುವ ಆರೋಪಕ್ಕಿಂತ 500 ವರ್ಷಗಳ ಹಿಂದೆ ಕೊಂಚ ಕಾಲ್ಪನಿಕವಾಗಿ ವೈಭವಿಕರಿಸಿ ತೋರಿಸಿರುವ ಚಿತ್ರಹಿಂಸೆ ನೋಡಿದರೆ ಇದೆಂಥಹ ಮೈಂಡ್‌ಸೆಟ್ ಎನಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
ನಟಿ ಸ್ವರಾ ಭಾಸ್ಕರ್ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ಸ್ ಬಂದಿದೆ. ಆದರೆ ಆಕೆಯ ವ್ಯಂಗ್ಯಭರಿತ ಕಾಮೆಂಟ್‌ಗೆ ಸಾಕಷ್ಟು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪತ್ರಕರ್ತೆ ಸ್ವಾತಿ ಚತುರ್ವೇದಿ ರಿಪ್ಲೇ ಮಾಡಿ "ನಿಮ್ಮ ಹೇಳಿಕೆ ಬಗ್ಗೆ ಮತ್ತೊಮ್ಮೆ ಯೋಚಿಸಿ, ಸಾಂಬಾಜಿ ಅವರನ್ನು ಕೊಲ್ಲುವ ಮುನ್ನ ಔರಂಗಜೇಬ್ ನೀಡಿದ ಚಿತ್ರಹಿಂಸೆ ಕಾಲ್ಪನಿಕವಲ್ಲ. ದಯವಿಟ್ಟು ಇತಿಹಾಸದ ಜೊತೆ ಆಟ ಆಡಬೇಡಿ" ಎಂದಿದ್ದಾರೆ.
ಮೊದಲ 5 ದಿನಕ್ಕೆ 'ಛಾವ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಲಕ್ಮಣ್ ಉಟೇಕರ್ ನಿರ್ದೇಶನದ ಚಿತ್ರದಲ್ಲಿ ಸಾಂಬಾಜಿ ಆಗಿ ವಿಕ್ಕಿ ಕೌಶಲ್ ಪರಕಾಯ ಪ್ರವೇಶ ಮಾಡಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ತನ್ಮಯರಾಗಿ ನಟಿಸಿದ್ದಾರೆ. ಆ ದೃಶ್ಯದ ಚಿತ್ರೀಕರಣಕ್ಕಾಗಿ ಒಂದಿಡಿ ರಾತ್ರಿ ಅವರನ್ನು ಸರಪಳಿಯಿಂದ ಆ ರೀತಿ ಕಟ್ಟಿ ಹಾಕಲಾಗಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ.
ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಸಾಂಬಾಜಿ ಪತ್ನಿ ಯೇಸುಬಾಯಿ ಆಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಮಾಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಛಾವ' ಸಿನಿಮಾ ಮೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ.


Click it and Unblock the Notifications











