'ದೇಣಿಗೆ ಯಾಕೆ ನೀಡಿಲ್ಲ' ಎಂದವರಿಗೆ ನಟಿ ತಾಪ್ಸಿ ಪನ್ನು ಉತ್ತರ
ಗಟ್ಟಿ ಪಾತ್ರಗಳು ಮಾತ್ರವಲ್ಲ, ತನ್ನ ಗಟ್ಟಿ ವ್ಯಕ್ತಿತ್ವದಿಂದಲೂ ನಟಿ ತಾಪ್ಸಿ ಪನ್ನು ಪರಿಚಿತರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅನುಭವಗಳಿಸಿ, ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಚಿತ್ರ ನಿರ್ಮಾತೃಗಳ ನೆಚ್ಚಿನ ನಟಿಯಾಗಿ ಬೆಳೆದಿದ್ದಾರೆ ತಾಪ್ಸಿ ಪನ್ನು.
ತೆರೆಯ ಮೇಲೆ ಎಷ್ಟು ಗಟ್ಟಿಯಾದ ಪಾತ್ರಗಳನ್ನು ಮಾಡುತ್ತಾರೋ ಅಷ್ಟೆ ಗಟ್ಟಿಯಾದ ವ್ಯಕ್ತಿತ್ವ ಹೊಂದಿರುವವರು ತಾಪ್ಸಿ, ತಮ್ಮ ವಿರುದ್ಧ ಮಾತನಾಡುವವರಿಗೆ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ ಅವರು.
ಕೊರೊನಾ ವೈರಸ್ ಸಮಯದಲ್ಲಿ ನಟ-ನಟಿಯರು ಸರ್ಕಾರಕ್ಕೆ ದೇಣಿಗೆ ನೀಡಿ, ಕೊರೊನಾ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ. ಕೆಲವು ನಟ-ನಟಿಯರು ಯಾವುದೇ ದೇಣಿಗೆ ನೀಡಿಲ್ಲ.
ತಾಪ್ಸಿ ಪನ್ನು ಅವರನ್ನೂ ಸಹ ಕೆಲವರು 'ನೀವೇಕೆ ಕೊರೊನಾ ವಿರುದ್ಧ ಹೋರಾಡಲು ದೇಣಿಗೆ ನೀಡಿಲ್ಲ' ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಪ್ರಶ್ನೆ ಮಾಡಿದವರಿಗೆ ಉತ್ತರ ಕೊಟ್ಟ ತಾಪ್ಸಿ ಪನ್ನು
ದೇಣಿಗೆ ಬಗ್ಗೆ ಪ್ರಶ್ನೆ ಕೇಳಿದವರಿಗೆ ಸಾಮಾಜಿಕ ಜಾಲತಾಣದಲ್ಲಿಯೇ ಉತ್ತರ ನೀಡಿರುವ ತಾಪ್ಸಿ ಪನ್ನು, 'ನಾನು ದೇಣಿಗೆ ನೀಡಿದ್ದೇನೆ, ಆದರೆ ಅದು ನನ್ನ ಸಮಾಧಾನಕ್ಕಾಗಿ ನೀಡಿದ್ದೇನೆ, ಅದನ್ನು ಎಲ್ಲರಿಗೂ ಹೇಳುವ ಅವಶ್ಯಕತೆ ಇಲ್ಲ' ಎಂದಿದ್ದಾರೆ.

ಸ್ಕ್ರೀನ್ ಶಾಟ್ ಪೋಸ್ಟ್ ಮಾಡುವುದರಲ್ಲಿ ನಂಬಿಕೆ ಇಲ್ಲ: ತಾಪ್ಸಿ
ಈ ಬಗ್ಗೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ''ನಾನು ಮಾಡಿರುವ ಸಹಾಯದ ಬಗ್ಗೆ ಬ್ಲಾಗ್ ಬರೆಯುವುದು, ನನ್ನ ಬ್ಯಾಂಕ್ ವ್ಯವಹಾರದ ಸ್ಕ್ರೀನ್ ಶಾಟ್ ಹಾಕುವುದರಲ್ಲಿ ನನಗೆ ನಂಬಿಕೆ ಇಲ್ಲ, ನಾನು ಸಹಾಯ ಮಾಡಿರುವುದು ನನ್ನ ಆತ್ಮತೃಪ್ತಿಗೆ'' ಎಂದು ಅವರು ಹೇಳಿದ್ದಾರೆ.

ಹಲವು ಸೆಲೆಬ್ರಿಟಿಗಳು ಪೋಸ್ಟ್ ಮಾಡಿದ್ದಾರೆ
ಹಣ ನೀಡಿದ್ದುದರ ಬಗ್ಗೆ, ಆಹಾರ ನೀಡಿದ್ದುದರ ಬಗ್ಗೆ ಇನ್ನಿತರ ಸಹಾಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ ಹಲವು ನಟ-ನಟಿಯರು. ಇವರ ನಡುವೆ ತಾಪ್ಸಿ ಪನ್ನು ಭಿನ್ನವಾಗಿ ನಿಂತಿದ್ದಾರೆ. ತಾಪ್ಸಿ ಪನ್ನು ತಾವು ಸಹ ಕೊರೊನಾ ವಿರುದ್ಧ ಹೋರಾಡಲು ಸಹಾಯ ಮಾಡಿದ್ದರೂ ಸಹ ಅದರ ಬಗ್ಗೆ ಡಂಗೂರ ಬಡಿದು ಹೇಳಿಲ್ಲ.

ನಾನು ಸರಳ ಜೀವನ ನಡೆಸುತ್ತೇನೆ: ತಾಪ್ಸಿ
ಕೊರೊನಾ ಲಾಕ್‌ಡೌನ್ ನಡುವೆ ಸೆಲೆಬ್ರಿಟಿಗಳು ಪೋಸ್ಟ್ ಹಾಕುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ''ಕೆಲವರಿಗೆ ಸೋಷಿಯಲ್ ಮೀಡಿಯಾದಲ್ಲಿ ಮನ್ನಣೆ ಬೇಕೆಂಬ ಆಸೆ ಇರುತ್ತದೆ, ಅದಕ್ಕಾಗಿ ಬಹುಶಃ ತಾವು ಮಾಡಿದ್ದೆಲ್ಲವೂ ಅಲ್ಲಿ ಹಾಕುತ್ತಾರೆ , ನಾನು ಮಾಡಿದ ಕೆಲಸದ ಕಡೆಗೆ ಗಮನ ಸೆಳೆಯಬೇಕು ಎಂದು ನನಗೆ ಅನಿಸಿದರೆ ನಾನು ಅಂಥಹುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ, ಉಳಿದ ಸಮಯದಲ್ಲಿ ಸರಳವಾಗಿ ಬದುಕುತ್ತೇನೆ'' ಎಂದಿದ್ದಾರೆ ನಟಿ.


Click it and Unblock the Notifications










