ದೊಡ್ಡ ನಟರ ಚಿತ್ರ ತಿರಸ್ಕರಿಸುವುದು 'ಸುರಕ್ಷಿತವಲ್ಲ' ಎಂದು ತಾಪ್ಸಿ ಹೇಳಿದ್ದೇಕೆ?
ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಕೈಯಲ್ಲಿ ಐದು ದೊಡ್ಡ ಪ್ರಾಜೆಕ್ಟ್ ಇಟ್ಟುಕೊಂಡಿದ್ದಾರೆ. ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಬಯೋಪಿಕ್ ಹಾಗೂ ಅನುಭವ್ ಸಿನ್ಹಾ ಅವರ 'ತಪ್ಪಡ್' ಚಿತ್ರ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದಕ್ಕೂ ಮುಂಚೆ ಬಾಲಿವುಡ್ ಬಿಗ್ ಸ್ಟಾರ್ ನಟರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡಿದ್ದರು. ಇಂತಹ ನಟರ ಜೊತೆ ನಟಿಸಿದ ಬಳಿಕವೂ ಸ್ಟಾರ್ ನಟರ ಚಿತ್ರಗಳನ್ನು ತಿರಸ್ಕರಿಸುವುದಕ್ಕೆ ಭಯ ಆಗುತ್ತೆ ಎಂದು ಹೇಳಿ ಚರ್ಚೆಗೆ ಕಾರಣವಾಗಿದ್ದಾರೆ.
ಕರೀನಾ ಕಪೂರ್ ಅವರ ಶೋನಲ್ಲಿ ಭಾಗವಹಿಸಿದ್ದ ತಾಪ್ಸಿ ಪನ್ನು ಸುರಕ್ಷತೆ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಬಿಗ್ ಸ್ಟಾರ್ ನಟರ ಚಿತ್ರಗಳನ್ನು ರಿಜೆಕ್ಟ್ ಮಾಡುವ ಕುರಿತು ಆತಂಕ ವ್ಯಕ್ತಪಡಿಸಿದರು.

''ದೊಡ್ಡ ನಟರ ಚಿತ್ರಗಳನ್ನು ತಿರಸ್ಕರಿಸುವುದು ನಟಿಯರಿಗೆ ಸುರಕ್ಷತೆಯಲ್ಲ. ಯಾಕಂದ್ರೆ, ಆ ನಟರು ನಮ್ಮನ್ನು ತಪ್ಪು ತಿಳಿದುಕೊಳ್ಳಬಹುದು ಎಂಬ ಆತಂಕ. ನಮಗೆ ಅವರ ಮೇಲೆ ವೈಯಕ್ತಿಕವಾಗಿ ದ್ವೇಷ ಇದ್ಯಾ, ಅದಕ್ಕಾಗಿ ನಮ್ಮ ಸಿನಿಮಾ ಬೇಡ ಎಂದರಾ ಎಂದು ತಿಳಿದುಕೊಂಡುಬಿಡುತ್ತಾರಾ ಎಂಬ ಆತಂಕ'' ಎಂದು ಅಭಿಪ್ರಾಯಪಟ್ಟರು.
''ಈ ಹಿಂದೆ ಕೆಲವು ದೊಡ್ಡ ಚಿತ್ರಗಳನ್ನು ರಿಜೆಕ್ಟ್ ಮಾಡಿದ್ಮೇಲೆ ಆ ನಟರ ಬಳಿ ನಾನು ನಿಜವಾದ ಕಾರಣ ಹೇಳಲು ಪ್ರಯತ್ನಿಸಿದ್ದೆ. ಆದರೆ, ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನಾನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಅವಕಾಶವೂ ನನಗೆ ಸಿಗಲಿಲ್ಲ'' ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.
ಅನುಭವ್ ಸಿನ್ಹಾ ನಿರ್ದೇಶನದ 'ತಪ್ಪಡ್' ಸಿನಿಮಾ ಫೆಬ್ರವರಿ 28 ರಂದು ಬಿಡುಗಡೆಯಾಗುತ್ತಿದೆ. 'ಹಸೀನ್ ದಿಲ್ ರುಬಾ' ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಅದಾದ ಬಳಿಕ ರಶ್ಮಿ ರಾಕೆಟ್, ಶಬಾಶ್ ಮಿಥು ಮತ್ತು ತಡ್ಕಾ ಚಿತ್ರಗಳಲ್ಲಿ ತಾಪ್ಸಿ ನಟಿಸುತ್ತಿದ್ದಾರೆ.


Click it and Unblock the Notifications










