ಶಾರುಖ್ ಖಾನ್‌ಗೆ ಈ ಪ್ರಶ್ನೆ ಕೇಳೋ ಧೈರ್ಯ ಇದೆಯಾ ? ನಿಗಿನಿಗಿ ಕೆಂಡವಾದ ತಾಪ್ಸಿ ಪನ್ನು
ಚಿತ್ರರಂಗದಲ್ಲಿ ನಾಯಕಿಯರ ಆಯಸ್ಸು ತುಂಬಾನೇ ಕಡಿಮೆ. ಕನಸೆಂಬ ಕುದುರೆಯ ಬೆನ್ನೇರಿ ನಾಯಕಿಯಾದ ಸಂಭ್ರಮ ಇಲ್ಲಿ ಇನ್ನೂ ಹಲವರಲ್ಲಿ ಹಾಗೇ ಇರುತ್ತೆ. ಆಗಲೇ ನಾಯಕಿಯಾಗಿ ಇವರ ವೃತ್ತಿ ಬದುಕು ಇಷ್ಟೇ ಎಂಬ ಷರಾ ಇಲ್ಲಿ ಹಾಕಲಾಗುತ್ತೆ.
ಹೆಚ್ಚೆಂದರೆ 30 ವರ್ಷ. ಒಮ್ಮೆ 30ರ ಗಡಿಯನ್ನು ಇಲ್ಲಿ ದಾಟಿದರೆ ಕಥೆ ಮುಗಿಯಿತು. ಮನಸಿಲ್ಲದಿದ್ದರೂ ಕೂಡ ಚಿತ್ರರಂಗ ಇವರಿಗೆ ಪೋಷಕ ನಟಿ ಎಂಬ ಬಿರುದು ನೀಡುತ್ತೆ. ಪೋಷಕ ಪಾತ್ರಕ್ಕೆ ಇವರನ್ನು ಸೀಮಿತಗೊಳಿಸುತ್ತೆ. ಮೊದಲೆಲ್ಲ ನೀವು ಇಲ್ಲದೆ ನಮ್ಮ ಚಿತ್ರವಾಗಲ್ಲ ಎನ್ನುತ್ತಿದ್ದವರೆಲ್ಲ ಆ ನಂತರ ಅದೇ ನಾಯಕಿಗೆ ಅಕ್ಕ-ತಾಯಿಯ ಪಾತ್ರವನ್ನು ನೀಡಲು ಮುಂದಾಗುತ್ತಾರೆ.

ಇನ್ನು ಅಪ್ಪಿ-ತಪ್ಪಿ ಮದುವೆಯಾದರೆ ಆ ಕಥೆ ಬೇರೆ. ಆದರೆ ಈ ನಿಯಮ ಸ್ಟಾರ್ ಗಳ ವಿಚಾರದಲ್ಲಿ ಅನ್ವಯವಾಗಲ್ಲ. ಮದುವೆಯಾಗಿ ಮಕ್ಕಳಾಗಿ ಮೊಮ್ಮಕ್ಕಳಾದರು ಕೂಡ ಸೂಪರ್ ಸ್ಟಾರ್ ಪಟ್ಟದಿಂದ ಇವರು ಕೆಳಗಿಳಿಯುವುದಿಲ್ಲ. ಚಿತ್ರರಂಗ ಕೂಡ ಇವರನ್ನು ಕೆಳಗಿಳಿಸುವುದಿಲ್ಲ.
ಬದಲಿಗೆ ಇಳಿ ವಯಸ್ಸಿನಲ್ಲಿಯೂ ಕೂಡ ಕಾಲೇಜ್ ಕುಮಾರ್ ನ ಗೆಟಪ್ ಹಾಕಿಸಿ ಪ್ರೇಕ್ಷಕರ ಮುಂದೆ ಕರೆತಂದು ನಿಲ್ಲಿಸುತ್ತೆ. ಮಗಳ ವಯಸ್ಸಿನ ನಾಯಕಿಯ ಜೊತೆ ರೊಮ್ಯಾನ್ಸ್ ಮಾಡುವಂತೆ ಹೇಳುತ್ತೆ. ಚಿತ್ರರಂಗದ ಇದೇ ಧೋರಣೆಯ ವಿರುದ್ಧ ಸದ್ಯ ತಾಪ್ಸಿ ಪನ್ನು ನಿಗಿನಿಗಿ ಕೆಂಡವಾಗಿದ್ಧಾರೆ.
ಹೌದು, ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಸಿ ಪನ್ನು.
ಇಂಥಾ ತಾಪ್ಸಿ ಪನ್ನುಗೆ ಹಿಂದೊಮ್ಮೆ ಬದುಕಿಗೆ ದಕ್ಷಿಣ ಭಾರತೀಯ ಚಿತ್ರಗಳೇ ಆಸರೆಯಾಗಿದ್ದವು. ಆದರೆ ಈಗ ತಾಪ್ಸಿಗೆ ತಮ್ಮ ಬದುಕಿಗೆ ಭದ್ರ ಬುನಾದಿ ಹಾಕಿದ ಸೌತ್ ಸಿನಿಮಾಗಳ ಬಗ್ಗೆ ತಾತ್ಸಾರ ಇದೆ. ಹಲವು ಆರೋಪಗಳನ್ನು ತಾಪ್ಸಿ ಕಾಲ ಕಾಲಕ್ಕೆ ದಕ್ಷಿಣ ಚಿತ್ರರಂಗದ ವಿರುದ್ಧ ಆರೋಪ ಮಾಡುತ್ತಲೇ ಬಂದಿದ್ದಾರೆ.

ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ದಕ್ಷಿಣದಲ್ಲಿ ಸೂಪರ್ ಸ್ಟಾರ್ ಗೆ ಯಾರಾದರೂ ನಾಯಕಿಯಾದರೆ ಹೊಸಬರು ನಮ್ಮ ಜೊತೆ ಚಿತ್ರ ಮಾಡಲು ಹಿಂಜರಿಯುತ್ತಾರೆ ಎಂದು ಹೇಳಿದ್ಧಾರೆ. ಈ ಕುರಿತು ''ಟೈಮ್ಸ್
ಎಂಟ್ರಟೈನ್ಮೆಂಟ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ತಾಪ್ಸಿ ಪನ್ನು, ಮೊದಲು ಬಾಲಿವುಡ್‌ನ ದ್ವಂದ್ವ ನೀತಿಯ ಕುರಿತು ಮಾತನಾಡಿದ್ದಾರೆ. ನಾನು ಇಪ್ಪತ್ತರ ಹರೆಯದಲ್ಲೇ ಚಿತ್ರರಂಗಕ್ಕೆ ಬಂದೆ, ಆದರೆ ನೆಲೆಯೂರಲು ನನಗೆ ಮೂರು ನಾಲ್ಕು ವರ್ಷ ಬೇಕಾಯ್ತು, ಆ ನಂತರ ಇನ್ನೇನು ರೆಕ್ಕೆ ಬಿಚ್ಚಿ ಹಾರಬೇಕೆನ್ನುವಷ್ಟರಲ್ಲಿ ನಮಗೆ 30 ಆಗಿರುತ್ತೆ, ನಮ್ಮ ವಯಸ್ಸು ನಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತೆ ಎಂದಿದ್ದಾರೆ.
ಮೂವತ್ತು ವರ್ಷ ಆಗುತ್ತಿದ್ದಂತೆಯೇ ಇಲ್ಲಿ ಪ್ರೇಮ ಕಥೆಗಳಿಗೆ ನಿಮ್ಮನ್ನು ಯಾರು ಪರಿಗಣಿಸುವುದೇ ಇಲ್ಲ ಎಂದು ಹೇಳಿರುವ ತಾಪ್ಸಿ, ಲವ್ ಸ್ಟೋರಿಗಳಿಗೆ ನಿಮ್ಮ ಮುಖ ಚಹರೆ ಸರಿ ಹೊಂದುವುದಿಲ್ಲ, ನೀವು ಇನ್ನು ಯುವತಿಯಾಗಿ ಉಳಿದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ ಎಂದಿದ್ದಾರೆ. ಆ ಪಾತ್ರಕ್ಕೆ ವಯಸ್ಸಿನ ಅಗತ್ಯ ಇಲ್ಲದಿದ್ದರೂ ನಮಗಿಂತ ಕಿರಿಯ ನಾಯಕಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಆದರೆ, ಇದೇ ವಿಚಾರ ನಾಯಕರಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಿರವ ತಾಪ್ಸಿ ಪನ್ನು, ಇದೇ ಮಾತನ್ನು ಶಾರುಖ್ ಖಾನ್ ಮುಂದೆ ಹೇಳುವ ಧೈರ್ಯ ಯಾರಿಗಾದರೂ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಹೀರೋಗೆ 50 + ವರ್ಷ ಆದರೂ ಕೂಡ ಅವರಿಗಿಂತ ಅರ್ಧ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್ ಮಾಡುವಂತೆ ಇಲ್ಲಿ ಹೇಳಲಾಗುತ್ತೆ ಮತ್ತು ನಮ್ಮ ಸಮಾಜ ಅದನ್ನು ಸಂಭ್ರಮಿಸುತ್ತೆ ಎಂದಿರುವ ತಾಪ್ಸಿ, ಅದೇ ಕೆಲಸ ನಾಯಕಿ ಮಾಡಿದರೆ ನಮ್ಮ ಸಮಾಜ ಅದನ್ನು ಒಪ್ಪುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಮುಂದುವರೆದು ದಕ್ಷಿಣದತ್ತ ಬಂದ ತಾಪ್ಸಿ ಪನ್ನು, ಬಾಲಿವುಡ್‌ನ ಸಮಸ್ಯೆ ಇದಾದರೆ, ದಕ್ಷಿಣ ಭಾರತೀಯ ಚಿತ್ರರಂಗದ್ದು ಬೇರೆಯದ್ದೇ ಸಮಸ್ಯೆ ಇದೆ ಎಂದಿದ್ಧಾರೆ. ದಕ್ಷಿಣ ಚಿತ್ರರಂಗದಲ್ಲಿ ನೀವು ಯಾರದಾದರೂ ದೊಡ್ಡ ಅಥವಾ ಹಿರಿಯ ನಟರ ಜೊತೆ ಅಭಿನಯಿಸಿದರೆ ಮಗೀತು, ಅಲ್ಲಿ ಹೊಸಬರು , ಯುವ ನಟರು, ನಮ್ಮ ಜೊತೆ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದ್ದಾರೆ.


Click it and Unblock the Notifications