ನಿನ್ನ ಬ್ಲೌಸ್ ಬಿಚ್ಚು ; 16 ವರ್ಷದ ನಟಿಗೆ ಸಂಗೀತ ನಿರ್ದೇಶಕನಿಂದ ಕಿರುಕುಳ
ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಚೆಲುವೆಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಮಾತನಾಡುತ್ತಾ ಮಾತನಾಡುತ್ತಾ ಬಿಕ್ಕಿದ್ದಾರೆ. ಉದಾಹರಣೆಗೆ ಮುಸ್ಕಾನ್ ವರ್ಷ್ಣೆ.

ಹೌದು, ಮುಸ್ಕಾನ್ ವರ್ಷ್ಣೆ.. ಉತ್ತರ ಪ್ರದೇಶದ ಚೆಲುವೆ. ಮಾಡೆಲ್ ಮತ್ತು ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿಯೇ 895,291 ಜನ ಇವರನ್ನು ಫಾಲೋ ಮಾಡುತ್ತಾರೆ.
ಫ್ಯಾಷನ್.. ಲೈಫ್ ಸ್ಟೈಲ್.. ವಿಚಾರಗಳಿಂದ ಜನಮನ ಸೆಳೆಯುವ ಮುಸ್ಕಾನ್ ಹಿಂದಿಯ ಕಿರುತೆರೆಯಲ್ಲಿ ಕೆಲ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ''1 Room 2 Girls 1 Boy'' ಎಂಬ ವೆಬ್ ಸರಣಿ ಕೂಡ ಮಾಡಿದ್ದಾರೆ. ಸದ್ಯ ಮುಸ್ಕಾನ್ ಅಭಿನಯದ ಮೊದಲ ಹಿಂದಿ ಸಿನಿಮಾ ''ಜೀನಾ ದಿಲ್ ಸೆ'' ಬಿಡುಗಡೆಯಾಗಿದೆ.
ಇಂಥಾ ಮುಸ್ಕಾನ್ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಸಂಗೀತ ಲೋಕದ ಪ್ರಸಿದ್ದ ವ್ಯಕ್ತಿಯೊಬ್ಬ ಬ್ಲೌಸ್ ತೆಗೆಯುವಂತೆ ನನಗೆ ಹೇಳಿದ್ದ ಎಂದಿದ್ಧಾರೆ. ಈ ಕುರಿತು ''ಫಿಲ್ಮಿಮಂತ್ರಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮುಸ್ಕಾನ್ ವರ್ಷ್ಣೆ, ನನಗೆ ಆಗಿನ್ನೂ 16ರ ಹರೆಯ ಆ ಸಮಯದಲ್ಲಿ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ನನ್ನನ್ನು ಸಂಪರ್ಕಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.
ನಾನು ಅವರ ಕೆಲಸ ನೋಡಿಕೊಂಡು ಬೆಳೆದವಳು, ಈ ಹಿನ್ನೆಲೆ ನಾನು ಅವರ ಜೊತೆ ಕೆಲಸ ಮಾಡಲು ತುಂಬಾನೇ ಉತ್ಸುಕಳಾಗಿದ್ದೆ ಎಂದು ಹೇಳಿರುವ ಮುಸ್ಕಾನ್, ನೀವು ಇರುವುದು ಗಾಜಿಯಾಬಾದ್‌ನಲ್ಲಿ, ಆದರೆ ನಾವು ಈಗ ಬೇರೆ ಊರಲ್ಲಿದ್ದೇವೆ, ಕೇವಲ ಆಡಿಷನ್‌ಗಾಗಿ ಇಷ್ಟು ದೂರ ಪ್ರಯಾಣಿಸುವುದು ನಿಮಗೆ ಕಷ್ಟವಾಗಬಹುದು ಎಂದು ಆ ವ್ಯಕ್ತಿ ಹೇಳಿದ್ದರು ಎಂದು ಹೇಳಿದ್ದಾರೆ.

ನೀವು ಕಷ್ಟ ಪಡುವುದು ಬೇಡ, ಹೀಗಾಗಿ ನಾವು ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್‌ನಲ್ಲಿಯೇ ಆಡಿಷನ್ ಮಾಡೋಣ ಎಂದು ಅವರು ಹೇಳಿದರು, ಅದಕ್ಕೆ ನಾನು ಕೂಡ ಒಪ್ಪಿದೆ ಎಂದು ಹೇಳಿರುವ ಮುಸ್ಕಾನ್, ವಿಡಿಯೋ ಕಾಲ್‌ನಲ್ಲಿ ಚೂಡಿದಾರ್ ಮತ್ತು ಸೀರೆಯಲ್ಲಿ ನನ್ನ ನೋಡಲು ಬಯಸುವುದಾಗಿ ಆ ವ್ಯಕ್ತಿ ಹೇಳಿದರು ಎಂದಿದ್ದಾರೆ.
ಮುಂದುವರೆದು ನಾನು ಇನ್‌ಸ್ಟಾಗ್ರಾಂನಲ್ಲಿ ಅಲ್ಲಿಯವರೆಗೆ ಯಾವತ್ತೂ ಚೂಡಿ ಅಥವಾ ಸೀರೆಯಲ್ಲಿ ನನ್ನ ಫೋಟೊ ಹಂಚಿಕೊಂಡಿರಲಿಲ್ಲ, ಹೀಗಾಗಿ ಅವರು ನಿಜವಾಗಿಯೂ ನನ್ನನ್ನೂ ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಲು ಬಯಸುತ್ತಿರಬಹುದು ಎಂದು ನನಗೆ ಅನಿಸಿತು ಎಂದು ಹೇಳಿರುವ ಮುಸ್ಕಾನ್ ಸೀರೆ ಉಟ್ಟ ನಂತರ, ಎಂದಿನಂತೆ ಕೆಲವು ಭಂಗಿಗಳನ್ನು ನೀಡಲು ಕೇಳಿದರು, ನಿಮ್ಮ ಬಲ ಪ್ರೊಫೈಲ್, ಎಡ ಪ್ರೊಫೈಲ್, ಮುಂಭಾಗವನ್ನು ತೋರಿಸಿ ಎಂದು ಕೇಳಿದರು ಎಂದು ಹೇಳಿದ್ದಾರೆ. ಆದರೆ ನಂತರದ ಸಂಭಾಷಣೆಯಿಂದ ನನಗೆ ಆಘಾತವಾಯ್ತು ಎಂದಿದ್ದಾರೆ.
ಹೀಗೆ ಆಡಿಷನ್ ನಡೆಯುತ್ತಿದ್ದ ಸಮಯದಲ್ಲಿ ಆ ವ್ಯಕ್ತಿ ಏಕಾಏಕಿ ಬ್ಲೌಸ್ ತೆಗೆಯುವಂತೆ ನನಗೆ ಹೇಳಿದರು, ಇದರಿಂದ ನಾನು ದಿಗ್ಭ್ರಮೆಗೊಂಡೆ ಎಂದು ಹೇಳಿರುವ ಮುಸ್ಕಾನ್, ಆ ವಿಡಿಯೋ ಕಾಲ್‌ನಲ್ಲಿ ಅವರ ತಂಡದ ಬೇರೆ ಯಾವ ಸದಸ್ಯರು ಕೂಡ ಇರಲಿಲ್ಲ, ಕೇವಲ ಅರೊಬ್ಬರೇ ಇದ್ದರು ಎಂದು ಹೇಳಿದ್ದಾರೆ. ಅವರ ಈ ಬೇಡಿಕೆ ಕೇಳಿ ನಾನು ಬ್ಲೌಸ್ ಯಾಕೆ ತೆಗೆಯಬೇಕು..? ಅದರ ಅವಶ್ಯಕತೆ ಏನಿದೆ..? ಎಂದು ಕೇಳಿದೆ ಎಂದಿದ್ದಾರೆ.
ನನ್ನ ಈ ಪ್ರಶ್ನೆಗೆ ನಾನು ಕೇವಲ ಆಫ್-ಶೋಲ್ಡರ್ ಲುಕ್ ಹೇಗಿರುತ್ತದೆ ಎಂದು ನೋಡಲು ಬಯಸುತ್ತೇನೆ. ನೀವು ಏನನ್ನೂ ತೋರಿಸುವ ಅಗತ್ಯವಿಲ್ಲ, ನಿಮ್ಮ ಸೆರಗಿನಿಂದ ನೀವು ಕವರ್ ಮಾಡಬಹುದು, ಕೇವಲ ಲುಕ್ ನೀಡಿ ಎಂದು ಅವರು ಹೇಳಿದರು ಎಂದು ಹೇಳಿರುವ ಮುಸ್ಕಾನ್, ನನಗೆ ಅದ್ಯಾಕೋ ಆ ಪ್ರಕ್ರಿಯೆ ಅಸಹಜ ಅನಿಸಿತು ನಿಜವಾಗಿಯೂ ನಾನು ಆಫ್-ಶೋಲ್ಡರ್ ಲುಕ್ ಕೊಡಬೇಕಾ? ನೀವು ನಿಜವಾಗಿಯೂ ಅದನ್ನೇ ನೋಡಲು ಬಯಸುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದೆ ಎಂದಿದ್ದಾರೆ.
ನಾನು ಮೇಲಿಂದ ಮೇಲೆ ಪ್ರಶ್ನೆ ಕೇಳಲು ಶುರು ಮಾಡಿದ ಮೇಲೆ ನನಗೆ ಇನ್ನೊಂದು ಕರೆ ಬರುತ್ತಿದೆ ಎಂದು ಹೇಳಿ ಆ ವ್ಯಕ್ತಿ ಫೋನ್ ಕಟ್ ಮಾಡಿದರು ಎಂದು ಹೇಳಿರುವ ಮುಸ್ಕಾನ್, ಇದು ತುಂಬಾ ವಿಚಿತ್ರವಾಗಿತ್ತು, ಆದರೆ ಅವರು ಎಂದಿಗೂ ನೇರವಾಗಿ ನನ್ನ ಜೊತೆ ಏನಾದರೂ ಮಾಡಬೇಕು ಅಥವಾ ಹತ್ತಿರವಾಗಬೇಕು ಎಂದು ಹೇಳಿರಲಿಲ್ಲ ಎಂದು ಕೂಡ ಹೇಳಿದ್ದಾರೆ. ಅಂದ್ಹಾಗೇ ಮುಸ್ಕಾನ್‌ಗೆ ಈಗ 23 ವರ್ಷ. ಆಗಲೇ ಹೇಳಿದಂತೆ ಈ ಘಟನೆ ನಡೆದಾಗ ಮುಸ್ಕಾನ್‌ಗೆ 16 ವರ್ಷ. 7 ವರ್ಷಗಳ ನಂತರ ತಮ್ಮ ಈ ಕಹಿ ಅನುಭವವನ್ನು ಇವರು ಹಂಚಿಕೊಂಡಿದ್ದಾರೆ.


Click it and Unblock the Notifications