ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
ಹೇಳಿ ಕೇಳಿ ಇದು ದುಡ್ಡಿನ ದುನಿಯಾ. ದುಡ್ಡೇ ದೊಡ್ಡಪ್ಪ. ಹೀಗಿರಬೇಕಾದರೆ.. ವ್ಯಕ್ತಿಯ ಹಿನ್ನೆಲೆ.. ಮುನ್ನೆಲೆ.. ಯಾರಿಗೆ ಬೇಕು. ಅದರಿಂದ ಪ್ರಯೋಜವಾದರೂ ಏನು ಅನ್ನುವುದು ಅನೇಕರ ಅಭಿಪ್ರಾಯ. ಆದರೆ, ಕೆಲವೊಮ್ಮೆ.. ಈ ಲೆಕ್ಕಾಚಾರ ತಪ್ಪಾಗುತ್ತೆ. ದುಡ್ಡಿನ ಆಸೆ ಸಂಕಷ್ಟಕ್ಕೆ ಸಿಲುಕಿಸುತ್ತೆ. ಮಿಲ್ಕಿ ಬ್ಯೂಟಿ ತಮನ್ನಾ ವಿಚಾರದಲ್ಲಿಯೂ ಸದ್ಯಕ್ಕೆ ಇದೇ ಆಗಿದೆ.
ಹೌದು. ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾಗೆ ಮಹಾರಾಷ್ಟ್ರ ಸೈಬರ್ ಇಲಾಖೆಯವರು ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇದಕ್ಕೆ ಕಾರಣ.. ಫೇರ್‌ಪ್ಲೇ ಎಂಬ ಆ್ಯಪ್

ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ, 2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇದೆ. ಆದರೆ.. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಫೇರ್‌ಪ್ಲೇ ಆಪ್ ಚೂರು ಅಳುಕಿಲ್ಲದೆ ಐಪಿಎಲ್ನ ಪ್ರಸಾರ ಮಾಡಿದೆ. ಸಹಜವಾಗಿ ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿದೆ. ಇನ್ನೂ ಈ ಆಪ್, ಹಿಂದೆ ಆನ್ ಲೈನ್
ಬೆಟ್ಟಿಂಗ್ ನಲ್ಲಿ ಸದ್ದು ಮಾಡಿದ್ದ ಮಹದೇವ್ ಆನ್ಲೈನ್ ಗೇಮಿಂಗ್ ಆ್ಯಪ್ನ ಅಂಗಸಂಸ್ಥೆ. ಈ ಪೂರ್ವಾಪರವನ್ನೆಲ್ಲ ವಿಚಾರಿಸದೇ, ತಮನ್ನಾ.. ಫೇರ್‌ಪ್ಲೇ ಎಂಬ ಆ್ಯಪ್ ನ ಪ್ರಚಾರ ಮಾಡಿದ್ದರು. ಈ ಕಾರಣಕ್ಕೆ.. ಮಹಾರಾಷ್ಟ್ರ ಸೈಬರ್ ಇಲಾಖೆ ಈಗ ತಮನ್ನಾಗೂ ನೋಟಿಸ್ ಕೊಟ್ಟಿದೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ

ಕೇವಲ ತಮನ್ನಾ ಮಾತ್ರವಲ್ಲ ಬಾಲಿವುಡ್‌ನ ಸಿಂಗರ್ ಬಾದ್ಶಾ ಮತ್ತು ಸಂಜಯ್ ದತ್ ಅವರಿಗೂ ಸಮನ್ಸ್ ನೀಡಲಾಗಿದೆ. ಆದರೆ.. ಇಬ್ಬರು ವಿಚಾರಣೆಗೆ ಹಾಜರಾಗಲು ಮತ್ತಷ್ಟು ಸಮಯ ಕೇಳಿದ್ದಾರೆ ಎಂಬ ಸುದ್ದಿ ಇದೆ. ಗೊತ್ತಿಲ್ಲ.. ತಮನ್ನಾ ಕೂಡ ಕೆಲಸದ ನೆಪವೊಡ್ಡಿ ಕಾಲಾವಕಾಶ ಕೇಳಿದರು ಕೇಳಬಹುದು
ಅಂದ್ಹಾಗೇ ಫೇರ್‌ಪ್ಲೇ ಬೆಟ್ಟಿಂಗ್ ಆಪ್ ಬೆಟ್ಟಿಂಗ್ ವೇದಿಕೆಯಾಗಿದ್ದು, ಅದು ವಿವಿಧ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವಂತೆ ಪ್ರೇರೆಪಿಸುತ್ತದೆ. ಆಪ್‌ನ ವೆಬ್‌ಸೈಟ್ ಪ್ರಕಾರ, ಫೇರ್‌ಪ್ಲೇಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟುವವರ ಮೆಚ್ಚಿನ ಕ್ರೀಡೆಯಾಗಿದ್ದು, ನಂತರದ ಸ್ಥಾನದಲ್ಲಿ ಫೂಟ್‌ಬಾಲ್ ಹಾಗೂ ಟೆನ್ನಿಸ್ ಇದೆ.

ಕಳೆದ ವರ್ಷ ಮಹದೇವ ಬೆಟ್ಟಿಂಗ್ ಆಪ್ ಹಗರಣ ಸಾಕಷ್ಟು ಸದ್ದು ಮಾಡಿತ್ತು. ಇದರ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಇಡಿ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆಸಿತ್ತು.
ಈ ಮಹದೇವ ಬೆಟ್ಟಿಂಗ್ ಆಪ್ ಹಗರಣ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ದಿನಕ್ಕೆ ಈ ಆಪ್ 200 ಕೋಟಿ ಲಾಭ ಗಳಿಸುತ್ತಿದೆ ಎಂಬ ಸುದ್ದಿಯ ಜೊತೆಗೆ ಮಹಾದೇವ್ ಆಪ್ ಹಗರಣದ ಹಿಂದೆ ರಾಜಕೀಯ ವ್ಯಕ್ತಿಗಳು ಕೂಡ ಸೇರಿದ್ದಾರೆ ಎಂಬ ವಿಚಾರ ಛತ್ತೀಸ್‌ಗಢದ ವಿಧಾನಸಭಾ ಚುನಾವಣೆ ವೇಳೆ ಸಂಚಲನ ಸೃಷ್ಟಿಸಿತ್ತು. ಇದಾದ ನಂತರ ಕಳೆದ ವರ್ಷದ ಡಿಸೆಂಬರ್‌ನಲ್ಲಿ ದುಬೈನಲ್ಲಿ ಮಹದೇವ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್‌ನನ್ನು ಬಂಧಿಸಲಾಗಿತ್ತು ಅನ್ನುವುದು ನಿಮ್ಮ ಗಮನಕ್ಕಿರಲಿ.
ಉಳಿದಂತೆ ತಮನ್ನಾ, ವಿಜಯ್ ವರ್ಮಾ ಜೊತೆ ಪ್ರೀತಿ-ಪ್ರೇಮ-ಪ್ರಣಯ ಎಂದು ಸುತ್ತಾಡ್ತಿದ್ದಾರೆ. ದಕ್ಷಿಣಕ್ಕಿಂತ ಬಾಲಿವುಡ್ ಕಡೆ ಹೆಚ್ಚಿನ ಗಮನವನ್ನ ಕೊಟ್ಟಿದ್ಧಾರೆ. 'ಅರಣ್ಮಣೈ 4', 'ವೇದಾ', 'ಸ್ತ್ರೀ 2', 'ಒಡೇಲಾ' ಒಂದಿಷ್ಟು ಇವರ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಒಟ್ನಲ್ಲಿ ತಮನ್ನಾ ವಿಚಾರದಲ್ಲಿ ಸದ್ಯಕ್ಕೆ ಏನೋ ಮಾಡಲು ಹೋಗಿ, ಇನ್ನೇನೋ ಆದಂತೆ ಆಗಿದೆ. ಮಹಾರಾಷ್ಟ್ರ ಸೈಬರ್ ಇಲಾಖೆ ತಮನ್ನಾ ಕೊಡಲಿರುವ ಹೇಳಿಕೆಯ ಕುರಿತು ಬಾಲಿವುಡ್‌ನ ಅನೇಕರಲ್ಲಿ ಈಗ ಕುತೂಹಲ ಇದೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications










