ಮೊದಲ ಗಂಡ 18 ವರ್ಷ ದೊಡ್ಡವನು, ಎರಡನೇ ಗಂಡ 7 ವರ್ಷ ಚಿಕ್ಕವನು ; ಮದುವೆ, ಡಿವೋರ್ಸ್ - ಮನದ ನೋವು ಹಂಚಿಕೊಂಡ ನಟಿ
ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಹೀಗೆ ಬೇರೂರಿದ ಪ್ರೀತಿ ಆ ನಂತರ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಬಹುದು.
ಇನ್ನೂ.. ಎಲ್ಲರಿಗೆ ಗೊತ್ತಿರುವಂತೆ ಹೆಣ್ಣಿಗೆ 18 ಮತ್ತು ಗಂಡಿಗೆ 21 ಎನ್ನುವ ವಯಸ್ಸನ್ನು ನಮ್ಮ ಕಾನೂನು ನಿಗದಿ ಮಾಡಿದೆ. ಆದರೆ .. ಈ ಹಿಂದೆ ನಮ್ಮಲ್ಲಿ ಸಾಮಾನ್ಯವಾಗಿ ಹೆಣ್ಣಿಗಿಂತ ವಯಸ್ಸಿನಲ್ಲಿ ದೊಡ್ಡವನಾದ ಹುಡುಗನ ಜೊತೆ ಮದುವೆ ಮಾಡಿಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಗಂಡ-ಹೆಂಡತಿ ಸಮಾನ ವಯಸ್ಕರಾಗಿದ್ದರೆ ಅವರು ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ. ಅವರ ಅಭಿರುಚಿ ಮತ್ತು ಆಸಕ್ತಿ ಕೂಡ ಒಂದೇ ಥರ ಇರುತ್ತಾವೆ ಎನ್ನುವ ಮನೋಭಾವ ಹೆಚ್ಚಾಗಿದೆ.

ಹೀಗಾಗಿ ಹೆಣ್ಣಿಗಿಂತ ಗಂಡು ಸೀನಿಯರ್ ಆಗಿದ್ದರೆ ದಾಂಪತ್ಯ ಚೆನ್ನಾಗಿರುವುದಿಲ್ಲ ಎನ್ನುವ ಧೋರಣೆಯ ತಂದೆ ತಾಯಿಗಳು ಹೆಚ್ಚಾಗುತ್ತಿದ್ದಾರೆ. ಆದಾಗ್ಯೂ ಅಲ್ಲೊಬ್ಬರು.. ಇಲ್ಲೊಬ್ಬರು.. ವಯಸ್ಸಿನಲ್ಲಿ ತಮಗಿಂತ ದೊಡ್ಡವರಾದವರನ್ನು ಪ್ರೀತಿಸುತ್ತಾರೆ. ಮದುವೆಯಾಗ್ತಾರೆ. ಆ ನಂತರ ಕಣ್ಣೀರಿನಲ್ಲಿ ಕೈ ತೊಳೆಯುತ್ತಾರೆ. ಉದಾಹರಣೆಗೆ ತನ್ನಾಜ್ ಇರಾನಿ.
ಹೌದು, ತನ್ನಾಜ್ ಇರಾನಿ.. ಮುಂಬೈನ ಚೆಲುವೆ. ''ಡಬಲ್ ಗಡ್‌ಬಡ್'' ಇವರ ಮೊದಲ ಚಿತ್ರ. ಆ ನಂತರ ''ಕಹೋ ನಾ ಪ್ಯಾರ್ ಹೈ''.. ''ಹದ್ ಕರ್ ದಿ ಆಪನೇ''.. ''ಹಮಾರೇ ದಿಲ್ ಆಪ್ ಕೇ ಪಾಸ್ ಹೈ''.. ''ಮೇ ಪ್ರೇಮ್ ಕೀ ದಿವಾನಿ ಹೂ''.. ''36 ಚೈನಾ ಟೌನ್'' ಸೇರಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ತನ್ನಾಜ್ ಕಿರುತೆರೆಯ ಚಿರಪರಿಚಿತ ಮುಖ ಕೂಡ ಹೌದು.
''ಜಬಾನ್ ಸಂಭಲ್ ಕೇ''.. ''ಯೇ ಮೇರಿ ಲೈಫ್ ಹೈ''.. ''ಬಡಿ ದೂರ್ ಸೇ ಆಯೆ ಹೈ''.. ''ಕಹಾನಿ ಘರ್ ಘರ್ ಕಿ''.. ಇವರ ಕೆಲ ಪ್ರಸಿದ್ದ ಧಾರಾವಾಹಿಗಳು. 2009ರಲ್ಲಿ ''ಬಿಗ್ ಬಾಸ್'' ಮನೆಯನ್ನು ಕೂಡ ತನ್ನಾಜ್ ಪ್ರವೇಶ ಮಾಡಿದ್ದರು. ಮನೆಯಲ್ಲಿ 42 ದಿನ ಇದ್ದರು. ವಿಶೇಷ ಅಂದರೆ ಇವರ ಜೊತೆ ''ಬಿಗ್ ಬಾಸ್'' ಮನೆಗೆ ಇವರ ಎರಡನೇ ಗಂಡ ಬಕ್ತಿಯಾರ್ ಕೂಡ ತೆರಳಿದ್ದರು. ಆ ಕಾಲದಲ್ಲಿ ''ಬಿಗ್ ಬಾಸ್'' ಮನೆಯಲ್ಲಿ ಇವರ ಪ್ರೀತಿ ಮತ್ತು ಜಗಳ ಪ್ರೇಕ್ಷಕರನ್ನು ಸೆಳೆದಿತ್ತು.
ಇಂಥಾ ತನ್ನಾಜ್ ಈಗ ತಮ್ಮ ಮೊದಲ ಮದುವೆಯ ಕುರಿತು ಮಾತನಾಡಿದ್ದಾರೆ. ನನಗಿಂತ 18 ವರ್ಷ ದೊಡ್ಡವನನ್ನು ಮದುವೆಯಾಗಿ ನಾನು ತಪ್ಪು ಮಾಡಿದೆ ಎಂದಿದ್ದಾರೆ. ನಮ್ಮ ವಿಚ್ಚೇದನದಿಂದ ಮಗಳು ನರಳುವಂತಾಯ್ತು ಎಂದು ಬಿಕ್ಕಿದ್ದಾರೆ.

''ಹೌಟರ್ ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಕೆಲ ಖಾಸಗಿ ಪುಟ ತಿರುವಿ ಹಾಕಿರುವ ತನ್ನಾಜ್ ಇರಾನಿ, ಮದುವೆಯಾದಾಗ ನನಗೆ ಕೇವಲ 20 ವರ್ಷ. ನನ್ನ ಹೃದಯ ಗೆದ್ದಿದ್ದ ಫರೀದ್ ಕುರುಮ್‌ಗೆ 38 ವರ್ಷ ಎಂದಿದ್ದಾರೆ.
ನಮ್ಮ ನಡುವೆ 18 ವರ್ಷಗಳ ಅಂತರ ಇತ್ತು. ನನಗೆ ಪ್ರೀತಿಯ ಅಮಲೇರಿತ್ತು ಎಂದು ಹೇಳಿರುವ ತನ್ನಾಜ್, ನಮ್ಮ ಮದುವೆಗೆ ನಮ್ಮ ಮದುವೆಗೆ ನಮ್ಮ ಪಾರ್ಸಿ ಸಮುದಾಯದಿಂದ ತೀವೃ ವಿರೋಧ ವ್ಯಕ್ತವಾಯ್ತು ಎಂದು ಹೇಳಿದ್ದಾರೆ. ಮದುವೆಯ ನಂತರ ನನ್ನ ಸಮುದಾಯದಿಂದ ನಾನು ದೂರ ಉಳಿಯಬೇಕಾಯ್ತು ಎಂದಿದ್ದಾರೆ.
ಮುಂದುವರೆದು ಮದುವೆಯ ನಂತರ ಬದುಕು ಚೆನ್ನಾಗಿಯೇ ಇತ್ತು, ಆದರೆ ನಮ್ಮ ನಡುವೆ ಇದ್ದ 18 ವರ್ಷಗಳ ಅಂತರ ನಮ್ಮ ನಡುವಿನ ಅಂತರವನ್ನು ಇನ್ನೂ ಹೆಚ್ಚಿಸುತ್ತಾ ಹೋಯ್ತು ಎಂದು ಹೇಳಿರುವ ತನ್ನಾಜ್, 20ರ ಹರೆಯದಲ್ಲಿ ನನಗೆ ಹೊರಗಡೆ ಪಾರ್ಟಿ ಮಾಡಬೇಕಿತ್ತು, ಜೀವನವನ್ನು ಎಂಜಾಯ್ ಮಾಡಬೇಕಿತ್ತು. ಆದರೆ, ಅವರು ಅದಾಗಲೇ ಎಲ್ಲವನ್ನೂ ಮಾಡಿ ಬಂದಿದ್ದರು ಎಂದು ಹೇಳಿದ್ದಾರೆ. ಅವರು ತುಂಬಾ ಪ್ರಬುದ್ಧರಾಗಿದ್ದರು ಆದರೆ ನನಗೆ ಇನ್ನೂ ಬುದ್ದಿ ಬಂದಿರಲಿಲ್ಲ ಎಂದಿದ್ದಾರೆ.
ಹಾಗಂಥ ಯಾವತ್ತು ಅವರು ನನ್ನನ್ನೂ ತಡೆಯಲಿಲ್ಲ, ಯಾವುದೇ ನಿರ್ಬಂಧಗಳನ್ನು ಹೇರಲಿಲ್ಲ, ನನ್ನ ಇಷ್ಟದಂತೆಯೇ ಬದುಕಲು ಅವಕಾಶ ಮಾಡಿ ಕೊಟ್ಟರು ಎಂದು ಹೇಳಿರುವ ತನ್ನಾಜ್ ಎಲ್ಲೋ ಒಂದು ಕಡೆ ನಾನು ಭಾವನಾತ್ಮಕವಾಗಿ ಪ್ರಬುದ್ದಳಾಗಿರಲಿಲ್ಲ ಎಂದಿದ್ದಾರೆ. ನಾನು ನನ್ನನ್ನು ಸಂಪೂರ್ಣ ಅರ್ಥ ಮಾಡಿಕೊಂಡಿರಲಿಲ್ಲ, ಈ ಹಿನ್ನೆಲೆ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯ್ತು, ಕೊನೆಗೆ ವಿಚ್ಚೇದನದಲ್ಲಿ ಅಂತ್ಯವಾಯ್ತು ಎಂದು ಹೇಳಿರುವ ತನ್ನಾಜ್ ನಮ್ಮ ಈ ಡಿವೋರ್ಸ್‌ದಿಂದ ನಮ್ಮ ಮಗಳು ನರಳಿದಳು, ಅವಳ ಮೇಲೆ ಭಾವನಾತ್ಮಕವಾಗಿ ತುಂಬಾನೇ ಪರಿಣಾಮ ಬೀರಿತು ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ನಾನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು, ಆದರೆ ಈಗ ಅದು ಮುಗಿದು ಹೋದ ಅಧ್ಯಾಯ ಎಂದಿದ್ದಾರೆ.
ಅಂದ್ಹಾಗೇ ಆಗಲೇ ಹೇಳಿದಂತೆ ತನಾಜ್ ಸದ್ಯ ಎರಡನೇ ಮದುವೆ ಆಗಿದ್ದಾರೆ. ಇವರ ಎರಡನೇ ಗಂಡನ ಹೆಸರು ಬಕ್ತಿಯಾರ್. ವಿಶೇಷ ಅಂದರೆ ತನಾಜ್ ಅವರಿಗಿಂತ ಬಕ್ತಿಯಾರ್ 7 ವರ್ಷ ಚಿಕ್ಕವರು. ವಿಚ್ಚೇದನದ ನೋವಲ್ಲಿ ತನಾಜ್ ಇದ್ದಾಗ ''ನಚ್ ಬಲಿಯೇ 2'' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆಗ ಬಕ್ತಿಯಾರ್ ಇವರ ಡ್ಯಾನ್ಸ್ ಪಾರ್ಟನರ್. ಹೀಗೆ ಆದ ಪರಿಚಯ ಆ ನಂತರ ಮದುವೆಯವರೆಗೆ ಕರೆತಂದಿತು. ಸದ್ಯ ಇವರ ಮದುವೆಗೆ 19 ವರ್ಷದ ಸಂಭ್ರಮ. ಪ್ರೀತಿಯ ಸಂಕೇತವಾಗಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ.


Click it and Unblock the Notifications