ಬಾಲಿವುಡ್ ಮಂದಿ ಮಾಡಿದ ಅನ್ಯಾಯಗಳ ಬಗ್ಗೆ ತಾಪ್ಸಿ ಪನ್ನು ಬಿಚ್ಚು ಮಾತು
ನಟಿ ತಾಪ್ಸಿ ಪನ್ನು, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವೊಂದನ್ನು ನಿರ್ಮಿಸಿಕೊಂಡಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ 'ಬಬ್ಲಿ ಹುಡುಗಿ' ಪಾತ್ರ ಮಾಡುತ್ತಿದ್ದ ತಾಪ್ಸಿ, ಬಾಲಿವುಡ್‌ನಲ್ಲಿ ಗಟ್ಟಿ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿದ್ದಾರೆ.
ಡೆಲ್ಲಿ ಹುಡುಗಿ ತಾಪ್ಸಿ, ತಮ್ಮ ಪಾತ್ರಗಳಂತೆಯೇ ಗಟ್ಟಿಗಿತ್ತಿ, ಯಾರಿಗೂ ಹೆದರುವವರಲ್ಲ, ತಮ್ಮ ಜೀವನದ ಘಟನೆಗಳು, ಬಾಲಿವುಡ್‌ನಲ್ಲಿ ತಾವೆರುದಿಸಿದ ಸಮಸ್ಯೆಗಳು ಎಲ್ಲದರ ಬಗ್ಗೆಯೂ ಖುಲ್ಲಂಖುಲ್ಲಾ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ತಾವು ಬಾಲಿವುಡ್‌ನಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ, ಬಾಲಿವುಡ್ ಹೇಗೆ ಬದಲಾಗಬೇಕು ಎಂಬುದರ ಬಗ್ಗೆ, ಸಿನಿಮಾಗಳಲ್ಲಿ ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ ತಾಪ್ಸಿ.

ಹೀರೋ ಪತ್ನಿಯಿಂದ ಸಿನಿಮಾ ಕಳೆದುಕೊಂಡ ತಾಪ್ಸಿ
ತಾಪ್ಸಿ ಆಯ್ಕೆ ಆಗಿದ್ದ ಸಿನಿಮಾವೊಂದರಿಂದ ಹಠಾತ್ತನೆ ಆಚೆಯನ್ನು ಆಚೆ ಹಾಕಲಾಯಿತಂತೆ. ಸಿನಿಮಾದ ಹೀರೋ ನ ಪತ್ನಿಗೆ ತಾಪ್ಸಿ ಆ ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲವಂತೆ, ಹಾಗಾಗಿ ತಾಪ್ಸಿಗೆ ಆ ಸಿನಿಮಾ ತಪ್ಪುವಂತೆ ಮಾಡಿದ್ದರಂತೆ ಆ ನಾಯಕನ ಪತ್ನಿ.

ತಾಪ್ಸಿ ಬೆನ್ನ ಹಿಂದೆ ಡೈಲಾಗ್ ಬದಲಾಯಿಸಿದ್ದರಂತೆ
ಮತ್ತೊಂದು ಸಿನಿಮಾದಲ್ಲಿ ತಾಪ್ಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದರಂತೆ. ಆದರೆ ಆ ಸಿನಿಮಾದ ಹೀರೋಗೆ ಒಂದು ಡೈಲಾಗ್ ಇಷ್ಟವಾಗದ ಕಾರಣ ಅದನ್ನು ಬದಲಾಯಿಸಲು ಹೇಳಿದ್ದಾರೆ. ಇದಕ್ಕೆ ತಾಪ್ಸಿ ಒಪ್ಪಿಲ್ಲ. ಕೊನೆಗೆ ಡಬ್ಬಿಂಗ್ ಆರ್ಟಿಸ್ಟ್ ಅನ್ನು ಕರೆಸಿ, ತಾಪ್ಸಿ ಇಲ್ಲದಾಗ ಆ ಡೈಲಾಗ್ ಅನ್ನು ಬದಲಾಯಿಸಿಲಾಯಿತಂತೆ.

ನಾಯಕನ ಹಿಂದಿನ ಸಿನಿಮಾ ಸೋತಿದ್ದಕ್ಕೆ ತಾಪ್ಸಿ ಸಂಭಾವನೆ ಕಟ್
ಮತ್ತೆ ಕೆಲವು ಸಿನಿಮಾದಲ್ಲಿ, 'ನಾಯಕನ ಹಿಂದಿನ ಸಿನಿಮಾ ಸೋತಿದೆ ಹಾಗಾಗಿ ನಿನ್ನ ಸಂಭಾವನೆಯಲ್ಲಿ ಕಡಿತ ಮಾಡುತ್ತೇವೆ, ನಾವು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ತೆಗೆಯಬೇಕು ಎಂದು ನಿರ್ಮಾಪಕರು ಹೇಳುತ್ತಿದ್ದರಂತೆ.

ಇಂಟ್ರೊಡಕ್ಷನ್ ಸೀನ್ ಕತ್ತರಿಸಲು ಹೇಳಿದ್ದ ನಾಯಕ ನಟ
ಮತ್ತೊಂದು ಸಿನಿಮಾದಲ್ಲಿ ತಾಪ್ಸಿಯ ಇಂಟ್ರೊಡಕ್ಷನ್ ಸೀನ್ ಅನ್ನು ತೆಗೆದುಹಾಕುವಂತೆ ನಾಯಕ ಸೂಚಿಸಿದ್ದನಂತೆ. ಏಕೆಂದರೆ ನಾಯಕಿಯ ಇಂಡ್ರೊಕ್ಷನ್ ಸೀನ್ ನಾಯಕನ ಇಂಟ್ರೊಡಕ್ಷನ್ ಸೀನ್‌ಗಿಂತಲೂ ಚೆನ್ನಾಗಿದೆ ಎಂಬ ಕಾರಣಕ್ಕೆ. ಇಂಥಹ ಎಷ್ಟೋ ಘಟನೆಗಳು ನನ್ನ ಕಣ್ಣಮುಂದೆಯೇ ನಡೆದಿದೆ ಎಂದು ಹೇಳಿದ್ದಾರೆ ನಟಿ ತಾಪ್ಸಿ.

ನನ್ನನ್ನು ಸಿನಿಮಾದಲ್ಲಿ ಹಾಕಿಕೊಳ್ಳಲು ಹೆದರುತ್ತಾರೆ: ತಾಪ್ಸಿ
ಈಗ ನಾನು ನನಗೆ ಇಷ್ಟವಾಗುವ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದೇನೆ. ಹೆಚ್ಚು ಮಹಿಳಾಪ್ರಧಾನ, ಸಾಮಾಜಿಕ ಸೂಕ್ಷ್ಮ ಕಥನಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಇಂಥಹಾ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದ ಮೇಲೆ ನಾಯಕ ನಟರು ಆ ನಟಿಯನ್ನು ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ಹಾಕಿಕೊಳ್ಳಲು ಭಯಪಡುತ್ತಾರೆ, ನನ್ನ ವಿಷಯದಲ್ಲಿ ಈಗ ಅದೇ ಆಗಿದೆ. ಆದರೆ ನನಗೆ ತೃಪ್ತಿ ಇದೆ ಎಂದಿದ್ದಾರೆ ತಾಪ್ಸಿ.


Click it and Unblock the Notifications











