Teacher's Day 2023: ಮನರಂಜನೆ ಜೊತೆಗೆ ಜೀವನ ಪಾಠ ಕಲಿಸುವ ಹಿಂದಿ ಸಿನಿಮಾಗಳು
ಬೆಳ್ಳಿ ಪರದೆಯ ಮೇಲೆ ವರ್ಷಕ್ಕೆ ನೂರಾರು ಸಿನಿಮಾಗಳು ಬಂದು ಹೋಗುತ್ತವೆ. ಆದರೆ, ಕೆಲವು ಸಿನಿಮಾಗಳಷ್ಟೇ ನಮ್ಮ ನೆನಪಲ್ಲಿ ಉಳಿದುಬಿಡುತ್ತವೆ. ಅದರಲ್ಲೂ ಕೆಲವು ಮನಸ್ಸಿಗೆ ಭಾರೀ ಹತ್ತಿರವಾಗಿ ಪದೇ ಪದೇ ನೋಡಿಸಿಕೊಳ್ಳುತ್ತವೆ. ಜೊತೆಗೆ ನಮ್ಮ ಜೀವನಕ್ಕೆ ಅಮೂಲ್ಯ ಪಾಠಗಳನ್ನು ಕಲಿಸಿಕೊಡುತ್ತವೆ.
ಜೀವನದಲ್ಲಿ ಪಾಠ ಕಲಿಸುವ ಶಿಕ್ಷಕರು ಎಷ್ಟು ಮುಖ್ಯವೋ ಹಾಗೆಯೇ ಜೀವನ ಪಾಠ ಹೇಳುವ ಸಿನಿಮಾಗಳ ಪಾತ್ರವೂ ಅಷ್ಏ ಮುಖ್ಯ. ಶಿಕ್ಷಕರ ದಿನಾಚರಣೆ 2023 ರ ನೆನಪಿನಲ್ಲಿ ನಮ್ಮ ಜೀವನದಲ್ಲಿ ತಮ್ಮದೆ ಸ್ಥಾನ ಪಡೆದು ನಮಗರಿವಿಲ್ಲದೆಯೋ, ಅರಿವಿದ್ದೋ ಹಲವು ಶಿಕ್ಷಣ, ಜ್ಞಾನ ನೀಡಿರುವ ಹಿಂದಿ ಸಿನಿಮಾಗಳನ್ನು ಪಟ್ಟಿ ಮಾಡುವ ಪ್ರಯತ್ನ ಇಲ್ಲಿದೆ.

ತಾರೆ ಜಮೀನ್ ಪರ್
ತಾರೆ ಜಮೀನ್ ಪರ್ ಸಿನಿಮಾ ಮಕ್ಕಳ ಮೃದು ಮನಸ್ಸು, ಅಂಕಗಳೇ ಅಲ್ಲದೇ ಅವರ ವೈಯಕ್ತಿಕ ಪ್ರತಿಭೆಗಳನ್ನು ಗುರುತಿಸುವ ಮತ್ತು ಅದನ್ನು ಒರೆಗೆ ಹಚ್ಚುವ ಬಗ್ಗೆ ಮನಮುಟ್ಟುವಂತೆ ತಿಳಿಸುತ್ತದೆ. ಪ್ರತಿ ಮಗುವು ವಿಸೇಷ ಎಮದು ಹೇಳುವ ಈ ಸಿನಿಮಾ ಮಕ್ಕಳ ವಿಶಿಷ್ಟ ಸಾಮರ್ಥ್ಯಗಳನ್ನು ಗುರುತಿಸುವ, ವೈವಿಧ್ಯಮಯ ಕಲಿಕೆಯ ಶೈಲಿಗಳಿಗೆ ಅವಕಾಶ ಕಲ್ಪಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳುತ್ತದೆ.
ಆಮಿರ್ ಖಾನ್ ನಟನೆಯ ಈ ಸಿನಿಮಾದ ಗಟ್ಟಿ ನಿರೂಪಣೆಯು ನಮ್ಮ ಶಿಕ್ಷಣ ಕ್ರಮವನ್ನು ಮತ್ತೆ ಮರುಮೌಲ್ಯಮಾಪನ ಮಾಡಬೇಕೆ ಎಂಬ ಗೊಂದಲಕ್ಕೆ ತಳ್ಳುತ್ತದೆ. ಪ್ರತಿ ಮಗುವಿನ ಬೆಳವಣಿಗೆ ಮತ್ತು ಅದಕ್ಕೆ ಸೂಕ್ತ ಬೆಂಬಲ ನೀಡಲು ಶಿಕ್ಷಣತಜ್ಞರು ಮತ್ತು ಪೋಷಕರನ್ನು ಒತ್ತಾಯಿಸುತ್ತದೆ.
ಚಕ್ ದೇ ಇಂಡಿಯಾ
ಚಕ್ ದೇ ಇಂಡಿಯಾ ಕ್ರೀಡೆಯಲ್ಲಿ ಮಹಿಳೆಯರ ಪ್ರಾಮುಖ್ಯತೆಯ ಬಗ್ಗೆ ನಮಗೆ ಪಾಠ ಹೇಳುತ್ತದೆ. ಕ್ರೀಡಾ ಸಿನಿಮಾವಾಗಿದ್ದರೂ ಭಾರತದ ಲಿಂಗ ಸಮಾನತೆ ಮತ್ತು ಸಬಲೀಕರಣಕ್ಕೆ ದ ಕುರಿತ ನಿರೂಪಣೆಗೆ ಕೊಡುಗೆ ನೀಡುತ್ತದೆ. ಶಾರುಖ್ ಖಾನ್ ಅಭಿನಯದ ಸಿನಿಮಾವು ಭಾರತವು ಕ್ರೀಡಾ ಕ್ಷೇತ್ರದಲ್ಲಿ ಟೀಮ್‌ವರ್ಕ್, ಏಕತೆ ಮತ್ತು ಮಹಿಳಾ ಸಬಲೀಕರಣದ ಕಥೆಯನ್ನು ಕೌಶಲ್ಯದಿಂದ ಹೆಣೆದಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮತ್ತೆ ಮತ್ತೆ ಹೇಳುತ್ತದೆ.

ಕ್ವೀನ್
ಕ್ವೀನ್ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ. ಮಹಿಳಾ ಸಬಲೀಕರಣದ ಸಂಕೇತವಾಗಿ ನಟಿ ಕಂಗನಾ ರನೌತ್ ನಟಿಸಿದ್ದಾರೆ. ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬರಲು ಬಯಸುವ ಮಧ್ಯಮ ವರ್ಗದ ನಾಯಕಿ ಸ್ವಯಂ ಅನ್ವೇಷಣೆಯಲ್ಲು ಒಬ್ಬಳೆ ಹನಿಮೂನ್‌ಗೆ ಹೋಗುವ ಕಥೆಯ ಸುತ್ತ ಸುತ್ತುತ್ತದೆ. ಇದು ಹಲವು ಮಹಿಳೆಯರಿಗೆ ಆತ್ಮಬಲ ತುಂಬುವಲ್ಲಿ ಯಶಸ್ವಿಯಾಗಿದೆ.
ಮರ್ದಾನಿ ಸರಣಿ
ರಾಣಿ ಮುಖರ್ಜಿ ನಟನೆಯ ಮರ್ದಾನಿ ಸಿನಿಮಾ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಗಟ್ಟಿ ನಿರೂಪಣೆಯ ಸಿನಿಮಾ. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವ ಗಟ್ಟಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಚಿತ್ರಿಸುವ ಮೂಲಕ ಚಿತ್ರವು ನಿರ್ಣಾಯಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಮರ್ದಾನಿ ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣದ ಅಗತ್ಯತೆ ಎಷ್ಟಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ,.ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಯನ್ನು ಪ್ರತಿಧ್ವನಿಸುತ್ತದೆ.
ಇಂಗ್ಲಿಷ್ ವಿಂಗ್ಲಿಷ್
ಹಿರಿಯ ನಟಿ ಶ್ರೀದೇವಿ ನಟನೆಯ ಇಂಗ್ಲಿಷ್ ವಿಂಗ್ಲಿಷ್ ಸ್ವಾಭಿಮಾನ, ವೈಯಕ್ತಿಕ ಬೆಳವಣಿಗೆ ಮತ್ತು ಸಮಾಜದ ಸ್ಟೀರಿಯೊಟೈಪ್‌ಗಳಿಂದ ಹೊರಬರುವ ಮಧ್ಯ ವಯಸ್ಸಿನ ಮಹಿಳೆಯೊಬ್ಬರ ಪ್ರಯಾಣದ ಕಥೆ. ಸಿನಿಮಾದ ನಿರೂಪಣೆಯ ಮೂಲಕ, ಇಂಗ್ಲಿಷ್ ವಿಂಗ್ಲಿಷ್ ಅದೇಷ್ಟೋ ಮಧ್ಯವಯಸ್ಕ ಹೆಣ್ಣುಮಕ್ಕಳ ಪಾತ್ರವಾಗಿ ಆವರಿಸಿಕೊಳ್ಳುತ್ತದೆ. ಕಲಿಕೆಗೆ ವಯಸ್ಸಿನ ಅಂತರವಿಲ್ಲ ಎಂಬ ಪಾಠವನ್ನು ನಮ್ಮೊಳಗೆ ಇಳಿಸುತ್ತದೆ.
3 ಈಡಿಯಟ್ಸ್
3 ಈಡಿಯಟ್ಸ್ ಸಿನಿಮಾ ಹಾಸ್ಯ್ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಗಂಭೀರವಾಗಿ ಪ್ರಶ್ನಿಸಿದ ಸಿನಿಮಾ. 3 ಈಡಿಯಟ್ಸ್ ವಿಭಿನ್ನವಾಗಿರುವುದು ಮತ್ತು ಸಾಮಾಜಿಕ ನಿರೀಕ್ಷೆಗಳ ಒತ್ತಡವನ್ನು ಮೀರಿ ತಮ್ಮದೆ ಉದ್ದೇಶವನ್ನು ಕಂಡುಕೊಳ್ಳುವ ಬಗ್ಗೆ ಪ್ರಮುಖ ಪಾಠವನ್ನು ನೀಡುತ್ತದೆ. ಶಿಕ್ಷಣ ಅಂಕಗಳಿಗಿಂತ ಹೆಚ್ಚಾಗಿ ಕಲಿಕೆಯಾಗಬೇಕು. ಒತ್ತಡಕ್ಕಿಂತ ಹೆಚ್ಚಾಗಿ ಆಸಕ್ತಿಯಾಗಬೇಕು ಎಂಬುದನ್ನು ಜನರ ಮನಸ್ಸಿನಲ್ಲಿ ತುಂಬುತ್ತದೆ.
ಡಿಯರ್ ಜಿಂದಗಿ
ಡಿಯರ್ ಜಿಂದಗಿ ಮಾನಸಿಕ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ತಿಳಿಸುವ ಸಿನಿಮಾ. ಭಾವನಾತ್ಮಕ ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ಅಗತ್ಯವಿದ್ದಾಗ ವೈದ್ಯರು ಅಥವಾ ಆತ್ಮೀಯರ ಸಹಾಯವನ್ನು ಪಡೆಯಬೇಕು ಎಂಬುದನ್ನು ವೀಕ್ಷಕರ ತಲೆಗೆ ತುಂಬುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳು, ವೈಯಕ್ತಿಕ ಬೆಳವಣಿಗೆ ಮತ್ತು ಚಿಕಿತ್ಸೆಗಾಗಿ ವೃತ್ತಿಪರರ ಬೆಂಬಲವನ್ನು ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಪ್ಯಾಡ್‌ಮನ್
ಪ್ಯಾಡ್‌ಮನ್ ಮುಟ್ಟಿನ ನೈರ್ಮಲ್ಯ, ಮಹಿಳೆಯರ ಮೇಲಿನ ನಿಷೇಧಗಳು ಮತ್ತು ಮುಟ್ಟಿನ ಮುಕ್ತವಾಗಿ ಮಾತಾಡುವುದನ್ನು ಉತ್ತೇಜಿಸುವ ವಿಷಯಕ್ಕೆ ಸಂಬಂಧಿಸಿದೆ. ನಿಜ ಜೀವನದ ಕಥೆ ಇನ್ನಷ್ಟು ಮಂದಿಯನ್ನು ಮುಟ್ಟಿನ ಕುರಿತ ತಪ್ಪು ಕಲ್ಪನೆಯಿಂದ ಹೊರ ತರಲು ಪ್ರಯತ್ನಿಸುತ್ತದೆ. ಮುಟ್ಟಿನ ಸಮಯದಲ್ಲಿ ಬಯಸುವ ನೈರ್ಮಲ್ಯ ಉತ್ಪನ್ನಗಳ ಪ್ರವೇಶದ ಕೊರತೆಯಿಂದಾಗಿ ಮಹಿಳೆಯರು ಎದುರಿಸುತ್ತಿರುವ ಕಷ್ಟಗಳನ್ನು ಎತ್ತಿ ತೋರಿಸುವ ಮೂಲಕ, ಚಲನಚಿತ್ರವು ಮಹಿಳೆಯರ ಆರೋಗ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುತ್ತದೆ.


Click it and Unblock the Notifications











